ಮಾಜಿ ರಾಜ್ಯಸಭಾ ಸಂಸದ ಮತ್ತು ವಕೀಲ ಮಜೀದ್ ಮೆಮನ್ 26/11ರ ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ.

ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರು ಮೆಮನ್ ಅವರನ್ನು ರಾಜ್ಯಸಭೆ ಸಂಸದರನ್ನಾಗಿಸಿದರೆ, ಕಸಬ್‌ಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಉಜ್ವಲ್ ನಿಕಮ್‌ಗೆ ಬಿಜೆಪಿ ಲೋಕಸಭೆ ಟಿಕೆಟ್ ನೀಡಿದೆ ಎಂದೂ ಹೇಳಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಸಂದೇಶದ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ವಕೀಲ ಉಜ್ವಲ್ ನಿಕಮ್ ಅವರಿಗೆ ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಬಿಜೆಪಿ ಲೋಕಸಭೆಯ ಟಿಕೆಟ್ ನೀಡಿರುವುದು ಖಚಿತವಾಗಿದೆ. ವಕೀಲ ಉಜ್ವಲ್ ನಿಕಮ್ ಅವರು ಮುಂಬೈ 26/11 ಭಯೋತ್ಪಾದಕ ದಾಳಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿದ್ದರು. ಅಜ್ಮಲ್ ಕಸಬ್ ವಿರುದ್ಧ ಮತ್ತು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದರು.

ಆದರೆ, ‘ಮಜೀದ್ ಮೆಮನ್’ ಅವರು ಕಸಬ್ ಪರ ವಾದಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಹುಡುಕಿದಾಗ, ಮಜೀದ್ ಮೆಮನ್ ಅವರು ಅಜ್ಮಲ್ ಕಸಬ್ ಅನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ.
ನಾವು ಮತ್ತಷ್ಟು ಮಾಹಿತಿ ಹುಡುಕಿದಾಗ, 26/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಅಜ್ಮಲ್ ಕಸಬ್ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬಂದಿರಲಿಲ್ಲ. ಈ ಕಾರಣಕ್ಕೆ, ಪ್ರತಿ ಆರೋಪಿಯೂ ನ್ಯಾಯಯುತ ವಿಚಾರಣೆಗೆ ಒಳಗಾಗುವ ಹಕ್ಕಿದೆ ಮತ್ತು ಆರೋಪಿಯನ್ನು ಕನೂನಾತ್ಮಕ ವಕಾಲತ್ತು ವಹಿಸದಿರಲು ಅಸಾಧ್ಯ ಎಂಬ ಕಾರಣಕ್ಕಾಗಿ ಕೆಲ ವಕೀಲರನ್ನು ಕೋರ್ಟ್ ನೇಮಿಸಿತ್ತು. ಹೀಗೆ, ಕಸಬ್‌ನ ರಕ್ಷಣಾ ವಕೀಲರಾಗಿ ಅಬ್ಬಾಸ್ ಕಾಜ್ಮಿ ಅವರು ನೇಮಕಗೊಂಡರು. ಆದರೆ, ಕಾಜ್ಮಿ ಅವರು ಕಸಬ್ ಪರ ವಕಾಲತ್ತು ವಹಿಸಲು ನಿರಾಕರಿಸಿದ ಕಾರಣ, ಅಸಹಕಾರಕ್ಕಾಗಿ ಅವರನ್ನು ತೆಗೆದು ಹಾಕಲಾತ್ತು.
ಅಬ್ಬಾಸ್ ಕಾಜ್ಮಿಯವರ ಪದಚ್ಯುತಿ ನಂತರ ಕೆ.ಪಿ ಪವಾರ್, ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎಂಬ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಕಸಬ್ ಪರ ವಾದ ಮಾಡಿದ್ದರು ಮತ್ತು ವಕೀಲ ರಾಜು ರಾಮಚಂದ್ರನ್ ಅವರು ಕಸಬ್‌ನ ಮರಣದಂಡನೆಯ ವಿರುದ್ಧದ ಮೇಲ್ಮನವಿಯ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆಯ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ್ ಸುಬ್ರಮಣಿಯಂ ಅವರ ನೇತೃತ್ವದ ವಕೀಲ ತಂಡ ವಾದಿಸಿತ್ತು.

“ಕಸಬ್ ಪರ ನಾನು ನ್ಯಾಯಾಲಯದಲ್ಲಿ ಏಕೆ ವಾದಿಸುವುದಿಲ್ಲ” ಎಂದು ಮಜೀದ್ ಮೆಮನ್ ಬರೆದಿರುವ ಲೇಖನವನ್ನು ದಿ ಎಕನಾಮಿಕ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸುದ್ದಿ ಸಂಸ್ಥೆಗಳು ಡಿಸೆಂಬರ್ 21, 2008 ರಂದು ಪ್ರಕಟಿಸಿದ್ದವು.

ಈ ಲೇಖನದಲ್ಲಿ, ಮೆಮನ್ ಅವರು ಅಜ್ಮಲ್ ಕಸಬ್‌ನ ತ್ವರಿತ ವಿಚಾರಣೆಗೆ ಆಗ್ರಹಿಸಿದ್ದರು. ಕಸಬ್ ವಿರುದ್ಧ ಇರುವ ಸಾಕಷ್ಟು ಸಾಕ್ಷ್ಯಗಳನ್ನು ಉಲ್ಲೇಖಿಸಿ ಈ ಅಪರಾಧ ಮರಣ ದಂಡನೆಗೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದ್ದರು. ಅಲ್ಲದೆ, ಅಜ್ಮಲ್ ಕಸಬ್ ವಕೀಲರನ್ನು ಹೊಂದುವುದು ಅವಶ್ಯಕ. ವಕೀಲರು ಇಲ್ಲದಿರುವುದು ವಿಚಾರಣೆಯ ನ್ಯಾಯಸಮ್ಮತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಅದರ ಜೊತೆಗೆ ಅಜ್ಮಲ್ ಕಸಬ್ ಪರ ನಾನು ಕೋರ್ಟ್‌ನಲ್ಲಿ ವಾದ ಮಾಡಲ್ಲ. ಏಕೆಂದರೆ ಅವರ ಪ್ರಕರಣ ಸಮರ್ಥನೀಯವಲ್ಲ. ಅವನ ಅಪರಾಧವನ್ನು ನಾವೆಲ್ಲರೂ ನೋಡಿದ್ದೇವೆ ಎಂದು ತಮ್ಮ ಲೇಖನವನ್ನು ಮೆಮನ್ ಅಂತ್ಯಗೊಳಿಸಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಮಜೀದ್ ಮೆಮನ್ ಅವರು 26/11 ಮುಂಬೈ ದಾಳಿ ಪ್ರಕರಣದ ವಿಚಾರಣೆಯ ಯಾವುದೇ ಹಂತದಲ್ಲಿ ಆರೋಪಿ ಅಜ್ಮಲ್ ಕಸಬ್‌ನ ಕಾನೂನು ತಂಡದ ಭಾಗವಾಗಿರಲಿಲ್ಲ. ಅಬ್ಬಾಸ್ ಕಾಜ್ಮಿ, ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಷಾ ಮುಂತಾದ ವಕೀಲರು ವಿವಿಧ ಹಂತಗಳಲ್ಲಿ ಕಸಬ್‌ನನ್ನು ಪ್ರತಿನಿಧಿಸಿದರು. ಕಸಬ್ ಪರ ವಾದಿಸುವುದಿಲ್ಲ ಎಂದು ಸ್ವತಃ ಮೆಮನ್ ಹೇಳಿದ್ದರು. ಹಾಗಾಗಿ ಮಜೀದ್ ಮೆಮನ್ ಅಜ್ಮಲ್ ಕಸಬ್‌ನ ಪರ ವಾದಿಸಿದ್ದರು ಎಂಬುವುದು ಸುಳ್ಳು.
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿಯ ಹಿಂಬದಿ ಇರುವ ಫೋಟೋ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ್ದಲ್ಲ


