ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿದೆ ಎಂಬ ವಿಚಾರ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಆಂಧ್ರ ಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಈ ನಡುವೆ, ಲಡ್ಡು ವಿಚಾರಕ್ಕೆ ಹಿಂದೂಗಳ ಅಪಹಾಸ್ಯ ಮಾಡಿ ಯುವಕನೋರ್ವನಿಗೆ ತಮಿಳುನಾಡಿನಲ್ಲಿ ಥಳಿಸಲಾಗಿದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ ಹಂಚಿಕೊಂಡು, ಪಿಯೂಷ್ ಮಾನುಷ್ ಎಂಬಾತ “ಎಲ್ಲಾ ಹಿಂದೂಗಳಿಗೆ ಪೆರುಮಾಳ್ (ದೇವರು) ನೇರವಾಗಿಯೇ ಬೀಫ್ ಲಡ್ಡು ವಿತರಿಸಿದ್ದಾರೆ” ಎಂದು ಬರೆದುಕೊಂಡು ಹಿಂದೂಗಳನ್ನು ಅಪಹಾಸ್ಯ ಮಾಡಿದ್ದ. ಆತನಿಗೆ ತಮಿಳುನಾಡಿನ ಸೇಲಂನಲ್ಲಿ ಸರಿಯಾದ ಉತ್ತರವನ್ನೇ ಕೊಡಲಾಗಿದೆ ಎಂದು ಬರೆದುಕೊಂಡಿದ್ದಾರೆ.


ಫ್ಯಾಕ್ಟ್‌ಚೆಕ್ : ಹಲವರು ಹಂಚಿಕೊಂಡಿರುವ ವಿಡಿಯೋದಲ್ಲಿ ನ್ಯೂಸ್ ಗ್ಲಿಟ್ಸ್ (NewsGlitz) ಸುದ್ದಿ ಸಂಸ್ಥೆಯ ಲೋಗೋ ಕಂಡು ಬಂದಿದ್ದರಿಂದ. ನ್ಯೂಸ್ ಗ್ಲಿಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ವಿಡಿಯೋ ಹುಡುಕಿದ್ದೇವೆ. ಈ ವೇಳೆ ಆಗಸ್ಟ್ 28,2019ರಂದು ವೈರಲ್ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ.

ವಿಡಿಯೋ ಕುರಿತು ಮಾಹಿತಿ ನೀಡಿರುವ ನ್ಯೂಸ್ ಗ್ಲಿಟ್ಸ್ ” ಸೇಲಂನ ಬಿಜೆಪಿ ಕಚೇರಿಯಲ್ಲಿ ಪಿಯೂಷ್ ಮಾನುಷ್ ಎಂಬಾತನಿಗೆ ಥಳಿಸಲಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಾ ಉದ್ದೇಶಪೂರ್ವಕವಾಗಿ ಬಿಜೆಪಿ ಕಚೇರಿಗೆ ನುಗ್ಗಿದ ಆತ, ಅಲ್ಲಿ ಪ್ರಶ್ನೆಯೆತ್ತಲು ಪ್ರಾರಂಭಿಸಿದ್ದಾನೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ” ಎಂದು ವಿವರಿಸಿದೆ. ಈ ಮೂಲಕ ಯುವಕನಿಗೆ ಥಳಿಸಿರುವ ವಿಡಿಯೋ ತಿರುಪತಿ ಲಡ್ಡುಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟವಾಗಿದೆ.
ಇನ್ನು ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಪಿಯೂಷ್ ಮಾನುಷ್ ಅವರೇ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ದನದ ಮಾಂಸ ಅತ್ಯಂತ ಪ್ರಸಿದ್ಧ, ಶ್ರೀಮಂತ ಮತ್ತು ಅತ್ಯುನ್ನತ ಪೂಜ್ಯ ತಿರುಪತಿ ಬಾಲಾಜಿ ದೇವಸ್ಥಾನವನ್ನು ಪ್ರವೇಶಿಸಿದೆ. ಭಕ್ತರು, ಅರ್ಚಕರು ಮತ್ತು ಆಡಳಿತ ಮಂಡಳಿ ಎಲ್ಲವೂ ವಿಫಲವಾಗಿದೆ. ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲ, ಕ್ಷಮೆಯನ್ನೂ ಕೇಳಿಲ್ಲ” ಎಂದು ಬರೆದುಕೊಂಡಿದ್ದರು.
Beef entered the most famous, richest and highest reverend Tirupati Balaji temple …
The deity, the priests, the administration all failed.
None took responsibility nor apologised !!
Hmmnn !!
— Piyush Manush (@piyushmanush) September 22, 2024
ಒಟ್ಟಿನಲ್ಲಿ, ತಿರುಪತಿ ಲಡ್ಡು ವಿವಾದದ ನಂತರ ಹಿಂದೂಗಳ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದಕ್ಕಾಗಿ ಸಾಮಾಜಿಕ ಕಾರ್ಯಕರ್ತ ಪಿಯೂಷ್ ಮಾನುಷ್ ಅವರನ್ನು ಗುಂಪೊಂದು ಹಲ್ಲೆ ಮಾಡಿದೆ ಎಂದು ತೋರಿಸಲು 2019ರ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ಫ್ಯಾಕ್ಟ್‌ಚೆಕ್ | ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಸಿದ್ದು ಪಾಕಿಸ್ತಾನಿ ಮುಸ್ಲಿಮರೆ?


