ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರಿಂದ ತೆರವಾಗಿರುವ ಕೇರಳದ ವಯನಾಡ್ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಪ್ರಧಾನ ಕಾರ್ಯರ್ಶಿ ಪ್ರಿಯಾಂಕಾ ಗಾಂಧಿ ಬುಧವಾರ (ಅ.23) ನಾಮಪತ್ರ ಸಲ್ಲಿಸಿದ್ದಾರೆ.
ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಡೆ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಹೊರಗಡೆ ನಿಂತು ಬಾಗಿಲಿನ ಸಂದಿಯಲ್ಲಿ ನೋಡುತ್ತಿರುವ ಸಣ್ಣ ವಿಡಿಯೋ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ “ಯಾವುದೇ ನಾಯಕನಿರಲಿ, ಎಷ್ಟೇ ಪ್ರಮುಖರಾಗಿರಲಿ, ಕಾಂಗ್ರೆಸ್‌ನ ನಕಲಿ ಗಾಂಧಿ ಕುಟುಂಬದ ಬಳಿ ತೆರಳಲು ಸಾಧ್ಯವಿಲ್ಲ. ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯ ನಾಮಪತ್ರ ಸಲ್ಲಿಕೆ ವೇಳೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಡೆಗಣಿಸಿರುವುದು ನಿಜಕ್ಕೂ ಆಘಾತಕಾರಿ ವಿಷಯ. ಮಕ್ಕಳ ಬುದ್ದಿಯ ರಾಹುಲ್ ಗಾಂಧಿಯವರೇ, ನಿಮ್ಮ ಕುಟುಂಬದ ಹಿತಾಸಕ್ತಿ ಕಾಪಾಡಲು ದಲಿತ ನಾಯಕರನ್ನು ಕೀಳಾಗಿ ಕಾಣಬೇಡಿ!” ಎಂದು ಬರೆದುಕೊಂಡಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಕೂಡ ಎಕ್ಸ್‌ನಲ್ಲಿ ವಿಡಿಯೋ ಕ್ಲಿಪ್ ಹಂಚಿಕೊಂಡು ” ಸೋ ಕಾಲ್ಡ್ ಹೋಲಿ ಟ್ರಿನಿಟಿ, ಹಿರಿಯ ಸಂಸದೀಯ ಪಟು ಮತ್ತು ದಲಿತ ನಾಯಕರಾದ ಮಲ್ಲಿಕಾರ್ಜು ಖರ್ಗೆ ಮೇಲೆ ತೋರಿದ ಅಗೌರವವನ್ನು ಕಣ್ಣಾರೆ ನೋಡುವುದು ತುಂಬಾ ಬೇಸರ ತಂದಿದೆ. ಅದು ಎಐಸಿಸಿ ಅಥವಾ ಪಿಸಿಸಿ ಅಧ್ಯಕ್ಷರಾಗಿರಲಿ, ಅವರನ್ನು ಕೇವಲ ರಬ್ಬರ್ ಸ್ಟ್ಯಾಂಪ್‌ಗಳಂತೆ ಪರಿಗಣಿಸಿ ಅವಮಾನಿಸುವುದರಲ್ಲಿ ಈ ಕುಟುಂಬ ಹೆಮ್ಮೆಪಡುತ್ತದೆಯೇ?” ಎಂದು ಬರೆದುಕೊಂಡಿದ್ದಾರೆ.

ಹಾಗಾದರೆ, ಪ್ರಿಯಾಂಕಾ ಗಾಂಧಿಯವರ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜು ಖರ್ಗೆ ಅವರನ್ನು ಬಾಗಿಲ ಹೊರಗೆ ನಿಲ್ಲಿಸಿದ್ದು ನಿಜಾನಾ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಈ ವಿಷಯದ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿರುವ ಸಂದರ್ಭದ ಹಲವು ವಿಡಿಯೋಗಳನ್ನು ಮಾಧ್ಯಮಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ ನಾವು ಪರಿಶೀಲಿಸಿದ್ದೇವೆ.
ಬಹುತೇಕ ವಿಡಿಯೋಗಳಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ, ಆರಂಭದಲ್ಲಿ ಅವರ ಹಿಂದೆ, ಬಳಿಕ ಪಕ್ಕದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕುಳಿತಿರುವುದು ಕಂಡು ಬಂದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೂಡ ಜೊತೆಗಿರುವುದನ್ನು ನೋಡಬಹುದು.
ಹಾಗಾದರೆ, ಮಲ್ಲಿಕಾರ್ಜುನ ಖರ್ಗೆಯವರು ಹೊರಗಡೆ ನಿಂತು ಬಾಗಿಲ ಸಂದಿಯಲ್ಲಿ ಇಣುಕಿದ್ದು ಯಾವಾಗ? ಎಂಬುವುದರ ಬಗ್ಗೆ ನಾವು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಇಂಡಿಯಾ ಟುಡೇ ವೆಬ್‌ಸೈಟ್ ಸ್ಥಳದಲ್ಲಿದ್ದ ತಮ್ಮ ವರದಿಗಾರ ನೀಡಿದ ಮಾಹಿತಿ ಆಧರಿಸಿ ಮಾಡಿರುವ ವಿಸ್ಕೃತ ವರದಿ ಲಭ್ಯವಾಗಿದೆ.
ವರದಿಯ ಪ್ರಕಾರ, “ರ್‍ಯಾಲಿಯ ಬಳಿಕ ನಾಮಪತ್ರ ಸಲ್ಲಿಸಲು ಪ್ರಿಯಾಂಕಾ ಗಾಂಧಿಯವರು ವಯನಾಡ್ ಜಿಲ್ಲಾ ಕೇಂದ್ರ ಕಲ್ಪೆಟ್ಟಾದಲ್ಲಿರುವ ಜಿಲ್ಲಾಧಿಕಾರಿ (ಕಲೆಕ್ಟರ್) ಕಚೇರಿಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಬೇಕಿತ್ತು. ಆದರೆ, ಈ ಹೊತ್ತಿಗೆ ರ್‍ಯಾಲಿ ಕೊನೆಗೊಂಡಿರಲಿಲ್ಲ.
ಆದರೆ, ಸಮಯವಾದ್ದರಿಂದ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾಗಲೇ ಮಧ್ಯದಲ್ಲಿ ಪ್ರಿಯಾಂಕಾ ಗಾಂಧಿ ರ್‍ಯಾಲಿಯಿಂದ ಎದ್ದು ಬಂದಿದ್ದರು. ಅವರು ಮಧ್ಯಾಹ್ನ 1.24ಕ್ಕೆ ಗಂಡ ರಾಬರ್ಟ್ ವಾದ್ರಾ ಮತ್ತು ಮಗನ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದರು.
ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅದನ್ನು ಅನುಮೋದಿಸಲು ಒಬ್ಬರು ಸ್ಥಳದಲ್ಲಿರಬೇಕು. ನಾಯಕರೆಲ್ಲ ರ್‍ಯಾಲಿಯಲ್ಲಿ ಇದ್ದಿದ್ದರಿಂದ ಪ್ರಿಯಾಂಕಾ ಗಾಂಧಿ ಗಂಡ ಮತ್ತು ಮಗನನ್ನು ಕರೆದುಕೊಂಡು ಬಂದಿದ್ದರು.
ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಬಳಿಕ, ಮಲ್ಲಿಕಾರ್ಜುನ ಖರ್ಗೆ, ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ರ್‍ಯಾಲಿಯಲ್ಲಿ ಇದ್ದು, ಶೀಘ್ರದಲ್ಲೇ ಬರಲಿದ್ದಾರೆ. ಅವರು ಬಂದ ಬಳಿಕ ಇವರು (ಗಂಡ, ಮಗ) ಹೊರಗಡೆ ಹೋಗಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಚುನಾವಣಾಧಿಕಾರಿಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ, ಅವರು (ಸೋನಿಯಾ, ರಾಹುಲ್, ಖರ್ಗೆ) ಎರಡನೇ ಸೆಟ್ ನಾಮಪತ್ರ ಸಲ್ಲಿಕೆ ವೇಳೆ ಬರಬಹುದು ಎಂದಿದ್ದಾರೆ. ಹಾಗಾಗಿ, ಪ್ರಿಯಾಂಕಾ ಗಾಂಧಿ 1.25ಕ್ಕೆ ಮೊದಲ ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.
ಇದಾದ ಕೆಲವೇ ನಿಮಿಷಗಳಲ್ಲಿ ರ್‍ಯಾಲಿ ಮುಗಿಸಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಆದರೆ, ಈ ವೇಳೆ ಪ್ರಿಯಾಂಕಾ ಗಾಂಧಿ ಸಲ್ಲಿಸಿದ್ದ ಮೊದಲ ಸೆಟ್ ನಾಮಪತ್ರವನ್ನು ಚುನಾವಣಾಧಿಕಾರಿ ಪರಿಶೀಲಿಸುತ್ತಿದ್ದರಿಂದ ನಿಯಮದಂತೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿರಲಿಲ್ಲ.
ಇಲ್ಲಿ ಗಮನಾರ್ಹ ಅಂಶವೆಂದರೆ, ಕೇವಲ ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲ, ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್ ಅವರನ್ನೂ ಒಳಗೆ ಬಿಟ್ಟಿರಲಿಲ್ಲ.
ಚುನಾವಣಾಧಿಕಾರಿ ಮೊದಲ ಸೆಟ್ ನಾಮಪತ್ರ ಪರಿಶೀಲನೆ ನಡೆಸಿದ ಬಳಿಕ, ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಮಗ ಹೊರಗೆ ಹೋದರು. ಎರಡನೇ ಸೆಟ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ವೇಣುಗೋಪಾಲ್ ಒಳಗೆ ಬಂದರು. ನಂತರ ರಾಹುಲ್ ಗಾಂಧಿ ಕೂಡ ಒಳಗೆ ಬಂದಿದ್ದಾರೆ. ಅವರೂ ಹೊರಗಡೆ ಕಾಯುತ್ತಿದ್ದರು ಎಂದು ವರದಿಯಾಗಿದೆ.
ಈ ಕುರಿತ ವಿಡಿಯೋವನ್ನು ಕೆಳಗೆ ನೋಡಬಹುದು
ಒಟ್ಟಿನಲ್ಲಿ, ತಡವಾಗಿ ಬಂದ ಕಾರಣ ಪ್ರಿಯಾಂಕಾ ಗಾಂಧಿ ಸಲ್ಲಿಸಿದ್ದ ಮೊದಲ ಸೆಟ್ ನಾಮಪತ್ರ ಪರಿಶೀಲನೆ ವೇಳೆ ನಿಯಮದ ಪ್ರಕಾರ, ಸೋನಿಯಾ ಗಾಂಧಿ, ಮಲ್ಲಿಕಾರ್ಜು ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ ಹೊರಗಡೆ ನಿಂತಿದ್ದರು. ಬಳಿಕ ಅವರೆಲ್ಲರೂ ಒಳಗಡೆ ಬಂದಿದ್ದಾರೆ. ಆದರೆ, ಬಿಜೆಪಿ ಮತ್ತು ಅದರ ನಾಯಕರು ಖರ್ಗೆ ಅವರು ಹೊರಗಡೆ ನಿಂತಿದ್ದ ಸಣ್ಣ ಕ್ಲಿಪ್ ಅನ್ನು ಮಾತ್ರ ಹಂಚಿಕೊಂಡು ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : FACT CHECK : ವ್ಯಕ್ತಿಯೊಬ್ಬರು ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ ಎಂಬುವುದು ಸುಳ್ಳು


