ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಆರೋಪ ಮುಕ್ತರಾಗಿ ಹೊರ ಬರಲಿ ಎಂದು ಪತ್ನಿ ವಿಜಯಲಕ್ಷಿ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಕನ್ನಡದ ಕೆಲ ಮಾಧ್ಯಮಗಳು ವರದಿ ಮಾಡಿವೆ ಮತ್ತು ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಮುಖ್ಯವಾಹಿನಿ ಮಾಧ್ಯಮ ಝೀ ಕನ್ನಡ ಚಾನೆಲ್ ತನ್ನ ಡಿಜಿಟಲ್ ವೇದಿಕೆಗಳಲ್ಲಿ ಜುಲೈ 7ರಂದು ಈ ಕುರಿತು ಸುದ್ದಿ ಪ್ರಕಟಿಸಿತ್ತು.

“ವಿಜಯಲಕ್ಷ್ಮಿಯವರು ತಮ್ಮ ಪತಿಯನ್ನು ಜೈಲಿನಿಂದ ಹೊರ ಕರೆತರಲು ಶಕ್ತಿ ದೇವತೆಯ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಬೇಟಿ ನೀಡಿದ ವಿಜಯಲಕ್ಷ್ಮಿ, ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆಷಾಢ ಶನಿವಾರದಂದು ಪೂಜೆ ಮಾಡಿ ಅವರು, ತಮ್ಮ ಗಂಡನಿಗಾಗಿ ಪ್ರಾರ್ಥಿಸಿದ್ದಾರೆ” ಎಂದು ಸುದ್ದಿಯಲ್ಲಿ ಹೇಳಲಾಗಿತ್ತು.

ಡಿ ಬಾಸ್ ಕಲ್ಟ್ಸ್ ಅಫೀಷಿಯಲ್ (Dboss Cults Official) ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಈ ಕುರಿತು ಫೋಟೋ ಹಂಚಿಕೊಳ್ಳಲಾಗಿದೆ. ಅದರಲ್ಲಿ, “ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಜಯಲಕ್ಷ್ಮಿ ಮೇಡಂ. ಬಾಸ್ ಬೇಗ ಈಚೆ ಬರ್ಲಿ” ಎಂದು ಬರೆಯಲಾಗಿದೆ.

ಫ್ಯಾಕ್ಟ್‌ಚೆಕ್ : ಝೀ ಕನ್ನಡ ವಾಹಿನಿಯ ಡಿಜಿಟಲ್ ವೇದಿಕೆ ಮತ್ತು ಸಾಮಾಜಿಕ ಜಾಲತಾಣ ಪೇಜ್‌ಗಳಲ್ಲಿ ಹಂಚಿಕೊಂಡಿರುವ ಸುದ್ದಿ ಇತ್ತೀಚಿನದ್ದಲ್ಲ. ಹಳೆಯ ಫೋಟೋ ಬಳಸಿ ಈಗ ಸುದ್ದಿ ಮಾಡಲಾಗಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆ ನಾವು ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.
ಸುದ್ದಿಯಲ್ಲಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 7 ಜುಲೈ , 2023 ರಂದು ಲತಾ ಜೈಪ್ರಕಾಶ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ಲಭ್ಯವಾಗಿದೆ.

ಲತಾ ಅವರು ”ವಿಜಿ ಅತ್ತಿಗೆ”ಎಂದು ಬರೆದುಕೊಂಡು ಸುದ್ದಿಯಾಗಿರುವ ಪೋಟೋ ಹಂಚಿಕೊಂಡಿದ್ದರು. ಅದನ್ನು ಜುಲೈ 7, 2024ರಂದು ಫೇಸ್‌ಬುಕ್ ಮೆಮೋರಿಯಾಗಿ ತೋರಿಸಿತ್ತು. ವರ್ಷದ ಬಳಿಕ ಹಳೆಯ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ಲತಾ ಜೈಪ್ರಕಾಶ್ ಅವರು “ಒಂದು ವರ್ಷವಾಯಿತು. ಆದರೆ, ಆದರೆ ಈ ಬಾರಿ ಉತ್ತಮ ಸ್ಥಿತಿಯಲ್ಲಿಲ್ಲ. ಈ ಪರಿಸ್ಥಿತಿಯಿಂದ ಹೊರ ಬರಲು ಅಮ್ಮ ಆಶಿರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅಮ್ಮ ನಿಮಗೆ ಹೆಚ್ಚು ಶಕ್ತಿ, ಧೈರ್ಯ ಮತ್ತು ಆಶಿರ್ವಾದ ನೀಡಲಿ ಎಂದು ಬರೆದುಕೊಂಡಿದ್ದರು.
ಒಟ್ಟಿನಲ್ಲಿ, ದರ್ಶನ್ ಮತ್ತು ವಿಜಯಲಕ್ಷ್ಮೀ ಬಂಡೆ ಮಕಾಳಾಮ್ಮ ದೇವರನ್ನ ಬಲವಾಗಿ ನಂಬುತ್ತಾರೆ. ಈ ಹಿಂದೆ ಅನೇಕ ಬಾರಿ ಇಲ್ಲಿಗೆ ತೆರಳಿದ್ದರು. ದೇವಸ್ಥಾನದ ಪೂಜಾರಿಯೊಬ್ಬರನ್ನ ಮನೆಗೆ ಕರೆಸಿ ತಡೆ ಒಡೆಸಿಕೊಳ್ಳುತ್ತಿದ್ದರು. ಆದರೆ, ಇದೀಗ ದರ್ಶನ್ ಬೇಗನೆ ಜೈಲಿನಿಂದ ಹೊರಬರಲೆಂದು ಬಂಡೆ ಮಹಾಕಾಳಿ ದೇಸ್ಥಾನಕ್ಕೆ ವಿಜಯಲಕ್ಷ್ಮೀ ತೆರಳಿದ್ದಾರೆ ಎನ್ನುವ ಸುದ್ದಿ ಸುಳ್ಳಾಗಿದೆ. ವಾಸ್ತವವಾಗಿ ಈಗ ವೈರಲ್ ಆಗುತ್ತಿರುವ ಚಿತ್ರ ಒಂದು ವರ್ಷದಷ್ಟು ಹಿಂದಿನದ್ದು.
ಇದನ್ನೂ ಓದಿ : FACT CHECK : ‘ಸ್ಟಾರ್’ ಚಿಹ್ನೆಯಿರುವ 500 ರೂ. ನೋಟು ನಕಲಿಯೇ?


