ಮೂವರು ಬುರ್ಖಾಧಾರಿ ಮಹಿಳೆಯರ ಕಾಲಿಗೆ ಸರಪಳಿ ಬಿಗಿದು, ಆ ಸರಪಳಿಯ ಒಂದು ತುದಿಯನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬರು ನಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ವ್ಯಕ್ತಿಯೊಬ್ಬ ತನ್ನ ಮೂವರು ಪತ್ನಿಯರನ್ನು ವಾಯು ವಿಹಾರಕ್ಕೆ ಕರೆದೊಯ್ಯುತ್ತಿರುವ ಫೋಟೋ ಇದು” ಎಂದು ಎಕ್ಸ್ ಬಳಕೆದಾರ Naughty BuBu(@INaughtyBuBu) ಬರೆದುಕೊಂಡಿದ್ದಾರೆ.

ಈ ಹಿಂದೆಯೂ ಇದೇ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗಸ್ಟ್ 20, 2021ರಂದು ಈ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ Rakesh Krishnan Simha(@ByRakeshSimha)ಎಂಬ ಎಕ್ಸ್ ಬಳಕೆದಾರ “ಅರ್ಫಾ, ಸಬಾ ಮತ್ತು ಸ್ವರಾ ಎಂಬವರು ಉತ್ತರ ಕಾಬೂಲ್‌ನಲ್ಲಿ ವಾಯು ವಿಹಾರಕ್ಕೆ ತೆರಳುತ್ತಿರುವ ಫೋಟೋ ಎಂದು ಒಬ್ಬರು ಇದನ್ನು ನನಗೆ ಕಳುಹಿಸಿದ್ದಾರೆ. ಯಾರಾದರು ಇದು ನಿಜವೋ? ಸುಳ್ಳೋ? ಎಂಬುವುದನ್ನು ಖಚಿತಪಡಿಸಿ. ಸುಳ್ಳು ಸುದ್ದಿ ಹಬ್ಬಿದ ಆರೋಪ ಹೊತ್ತುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಬರೆದುಕೊಂಡಿದ್ದರು.

ಆಗಸ್ಟ್ 16, 2021ರಂದು Dr Meena Kandasamy (@meenakandasamy) ಎಂಬ ಎಕ್ಸ್ ಬಳಕೆದಾರರು “ತಾಲಿಬಾನ್ ಅನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ, ಅವರು ಅಫ್ಘಾನಿಸ್ತಾನದಲ್ಲಿ ಹೆಚ್ಚು ಕಡಿಮೆ ಆರ್‌ಎಸ್‌ಎಸ್ ಸಮಾನರು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.

ಇದಕ್ಕೆ ತಿರುಗೇಟು ಕೊಡುವ ವೇಳೆ ನಾವು ಮೇಲ್ಗಡೆ ಉಲ್ಲೇಖಿಸಿದ ವೈರಲ್ ಪೋಟೋವನ್ನು ಹಂಚಿಕೊಂಡಿದ್ದ
TheCorporateLady🇮🇳 (@PallaviJaiswal0)ಎಂಬ ಬಳಕೆದಾರರು ” ತಾಲಿಬಾನ್ ಅನ್ನು ಅರ್ಥಮಾಡಿಕೊಳ್ಳಲು ತ್ವರಿತ ಮಾರ್ಗ! ಅದು ಇಂದಿನ ಆಫ್ಘಾನಿಸ್ತಾನದಲ್ಲಿ. ನೀವೂ ಒಮ್ಮೆ ಅಲ್ಲಿಯೇ ಇರಲು ಪ್ರಯತ್ನಿಸಿ. ಆರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳಲು ನಿಮಗೆ ಬುದ್ಧಿ ಶಕ್ತಿಯ ಅಗತ್ಯವಿದೆ. ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಮತ್ತು ಮುಕ್ತವಾಗಿ ತಿರುಗಾಡುತ್ತಿದ್ದಾರೆ.” ಎಂದು ಬರೆದುಕೊಂಡಿದ್ದರು.

ಫ್ಯಾಕ್ಟ್‌ಚೆಕ್ : ನಾವು ಮೇಲ್ಗಡೆ ಉಲ್ಲೇಖಿಸಿದ ವೈರಲ್ ಫೋಟೋದ ಕುರಿತು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಮೊದಲು fakeimagedetector.com ಎಂಬ ವೆಬ್‌ಸೈಟ್‌ನಲ್ಲಿ ಫೋಟೋ ನಿಜವಾದ್ದದ್ದೇ ಅಥವಾ ಎಡಿಟೆಡಾ? ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಈ ಫೋಟೋ ರಚಿತ ಅಥವಾ ಎಡಿಟೆಡ್ ಎಂದು ತೋರುತ್ತಿದೆ ಎಂಬುವುದಾಗಿ ವೆಬ್‌ಸೈಟ್ ತಿಳಿಸಿದೆ.

ಬಳಿಕ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಫೋಟೋ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ ಫೋಟೋ ಕುರಿತು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಆದರೆ 29 ಮಾರ್ಚ್ 2017 ರಂದು ಈ ವೈರಲ್ ಫೋಟೋಗೆ ಹೋಲಿಕೆಯಾಗುವಂತಹ ಒಂದು ಫೋಟೋ ಮಾರ್ಡನ್ ಡಿಪ್ಲೋಮೆಸಿ ಎಂಬ ವೆಬ್ ಸೈಟ್ ಅಂಕಣದಲ್ಲಿ ಬಳಸಿಕೊಂಡಿರುವುದು ಕಂಡು ಬಂದಿದೆ. ಆದರೆ, ವೆಬ್‌ಸೈಟ್‌ನಲ್ಲಿ ಫೋಟೋದಲ್ಲಿ ವೈರಲ್ ಫೋಟೋದಲ್ಲಿ ಇದ್ದಂತ ಸರಪಳಿ ಕಂಡು ಬಂದಿಲ್ಲ.

ಇದೇ ರೀತಿಯಾಗಿ 27 ಆಗಸ್ಟ್ 2017 ರಂದು ‘ಪತಿಗಿಂತ ಪತ್ನಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದ ಕಾರಣ ಪತಿ ಪತ್ನಿಗೆ ವಿಚ್ಚೇದನ ನೀಡಿದ್ದಾರೆ’ ಎಂಬ ವರದಿಯೊಂದಿಗೆ ಎಬಿಪಿ ಬೆಂಗಾಲ್ ಈ ಫೋಟೋ ಹಂಚಿಕೊಳ್ಳಲಾಗಿದೆ. ಆದರೆ, ಈ ವರದಿಯಲ್ಲಿ ಪೋಟೋವನ್ನು ಸಾಂಕೇತಿಕ ಚಿತ್ರ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಈ ವರದಿಯಲ್ಲಿ ಕೂಡ ಇದು ಸಾಂಕೇತಿಕ ಚಿತ್ರವಾಗಿ ಬಳಕೆಯಾಗಿದೆ.

ನಾವು ಫೋಟೋ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ 2011ರಲ್ಲಿ RabbitMatch.org ಮತ್ತು Wicked Thoughts ಎಂಬ ಎರಡೂ ಬ್ಲಾಗ್‌ಗಳು ಅಫ್ಘಾನಿಸ್ತಾನದಲ್ಲಿನ ಲಿಂಗ ತಾರತಮ್ಯಗಳ ಕುರಿತು ಅಂಕಣ ಬರೆಯಲು ಈ ಚಿತ್ರಗಳನ್ನು ಬಳಸಿಕೊಂಡಿರುವುದು ಕಂಡು ಬಂದಿದೆ. ಆದರೆ, ಅಲ್ಲೂ ಕೂಡ ಈ ಫೋಟೋವನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ. ಆದರೆ, ಇಲ್ಲೂ ಕೂಡ ಸರಪಳಿಗಳು ಕಂಡು ಬಂದಿಲ್ಲ. ಹಾಗಾಗಿ, ಇದೊಂದು ಎಡಿಟೆಡ್ ಫೋಟೋ ಎಂಬುವುದು ಸ್ಪಷ್ಟವಾಗಿದೆ.

ಲಭ್ಯ ಮೂಲಗಳನ್ನು ಬಳಸಿ ನಾವು ನಡೆಸಿದ ಪರಿಶೀಲನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮೂವರು ಪತ್ನಿಯರ ಕಾಲಿಗೆ ಸರಪಳಿ ಬಿಗಿದು ವಾಯು ವಿಹಾರಕ್ಕೆ ಕರೆದೊಯ್ಯುತ್ತಿದ್ದಾನೆ ಎಂದು ಹಂಚಿಕೊಳ್ಳಲಾದ ಫೋಟೋ ಎಡಿಟೆಡ್ ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಕಾಸರಗೋಡಿನಲ್ಲಿ ಮುಸ್ಲಿಂ ಯುವಕರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಸಂಭ್ರಮಿಸಿದ್ದಾರೆ ಎಂಬುವುದು ಸುಳ್ಳು


