“ಅವರು ಏನು ಬೇಕಾದರು ಮಾಡಲಿ. ಆದರೆ, ಒಂದಲ್ಲ ಒಂದು ದಿನ ಬಿಜೆಪಿ ಸರ್ಕಾರ ಬದಲಾಗಲಿದೆ. ಆಗ ನಾವು ಕ್ರಮ ಕೈಗೊಳ್ಳುತ್ತೇವೆ. ಆ ಬಳಿಕ ಮುಂದೆ ಯಾವತ್ತೂ ಆ ರೀತಿ ಆಗುವುದಿಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ” ಎಂಬರ್ಥದಲ್ಲಿ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿರುವ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ಹಂಚಿಕೊಂಡಿರುವ ಕೆಲ ಫೇಸ್‌ಬುಕ್, ಎಕ್ಸ್ ಬಳಕೆದಾರರು “ರಾಹುಲ್ ಗಾಂಧಿ ಹಿಂದೂಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಜೀವನ್ ಮಹಲ್ಲೆ ಎಂಬ ಫೇಸ್‌ಬುಕ್ ಬಳಕೆದಾರರು ವಿಡಿಯೋ ಹಂಚಿಕೊಂಡು ” ಖಾನ್ ಮೊಮ್ಮಗ ಹಿಂದೂಗಳಿಗೆ ಎಚ್ಚರಿಕೆ ನೀಡುವುದನ್ನು ಕೇಳಿ. ಒಳ್ಳೆಯದು ರಾಹುಲ್ ಬಾಬಾ, ನೀವು ನಿಮ್ಮ ನಿಜವಾದ ಮುಖವನ್ನು ಬಹಿರಂಗಪಡಿಸಿದ್ದೀರಿ. ತಮ್ಮ ಪರಂಪರೆಯನ್ನು ಅಪ್ಪಿಕೊಂಡ ಪ್ರತಿಯೊಬ್ಬ ಹಿಂದೂವೂ ಈ ಹಿಂದೂ ವಿರೋಧಿ, ಸನಾತನ ವಿರೋಧಿ ರಾಹುಲ್ ಖಾನ್ ಅವರನ್ನು ಎದುರಿಸಲು ಸಜ್ಜಾಗಬೇಕು. ಅವರು ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ” ಎಂಬ ಎಂದು ಬರೆದುಕೊಂಡಿದ್ದಾರೆ.

ವಿರಾಜ್ ರೇವಡೇಖರ್ ಎಂಬ ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ ಕೂಡ ವಿಡಿಯೋ ಹಂಚಿಕೊಂಡು “ಖಾನ್ ಮೊಮ್ಮಗ ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಬರಹಗಳೊಂದಿಗೆ ಇನ್ನೂ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ವೈರಲ್ ಆಗಿರುವ ರಾಹುಲ್ ಗಾಂಧಿಯವರ ಹೇಳಿಕೆಯ ವಿಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ತಿಳಿಯಲು ನಾವು ರಾಹುಲ್ ಹೇಳಿಕೆಯ ಮೂಲ ವಿಡಿಯೋ ಹುಡುಕಿದ್ದೇವೆ. ಮಾರ್ಚ್ 29, 2024ರಂದು ರಾಹುಲ್ ಗಾಂಧಿಯವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ.
ವಿಡಿಯೋದಲ್ಲಿ “ಸಂಸ್ಥೆಗಳು ಅವರ ಕೆಲಸ ಮಾಡಿದ್ದರೆ, ಸಿಬಿಐ, ಇಡಿ ಅವರ ಕರ್ತವ್ಯ ನಿಭಾಯಿಸಿದ್ದರೆ ಇದು ಆಗುತ್ತಿರಲಿಲ್ಲ. ಇದೆಲ್ಲ ಮಾಡುವವರು ಒಂದು ಯೋಚನೆ ಮಾಡಬೇಕು, ಒಂದಲ್ಲ ಒಂದು ದಿನ ಬಿಜೆಪಿ ಸರ್ಕಾರ ಬದಲಾಗಲಿದೆ. ನಂತರ ಕ್ರಮ ಕೈಗೊಳ್ಳಲಾಗುವುದು. ಆ ಬಳಿಕ ಅದು ಮತ್ತೆ ಎಂದಿಗೂ ಸಂಭವಿಸುವುದಿಲ್ಲ. ಇದಕ್ಕೆ ನಾನು ಗ್ಯಾರಂಟಿ” ಎಂದು ರಾಹುಲ್ ಗಾಂಧಿ ಹೇಳಿರುವುದು ಇದೆ.

ವಿಡಿಯೋ ಜೊತೆಗೆ “ಸರ್ಕಾರ ಬದಲಾದಾಗ ‘ಪ್ರಜಾಪ್ರಭುತ್ವ ವಿಘಟನೆ’ ಮಾಡುವವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುವುದು!. ಇದನ್ನೆಲ್ಲ ಮತ್ತೊಮ್ಮೆ ಮಾಡಲು ಯಾರಿಗೂ ಧೈರ್ಯ ಬರದಂತಹ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಗ್ಯಾರಂಟಿ” ಎಂದು ಬರೆದುಕೊಳ್ಳಲಾಗಿದೆ.
ವಿಡಿಯೋ ಗಮನಿಸಿದಾಗ ರಾಹುಲ್ ಗಾಂಧಿ ಸಿಬಿಐ, ಇಡಿಯಂತಹ ಸಂಸ್ಥೆಗಳ ಕುರಿತು ಮಾತನಾಡಿರುವುದು ನಮಗೆ ಸ್ಪಷ್ಟವಾಗಿದೆ. ಹಾಗಾಗಿ, ರಾಹುಲ್ ಗಾಂಧಿ ಹೇಳಿಕೆಯ ಕುರಿತ ವರದಿಗಳನ್ನು ನಾವು ಹುಡುಕಿದ್ದೇವೆ. ಈ ವೇಳೆ ಹಿಂದೂಸ್ತಾನ್, ಎನ್‌ಡಿಟಿವಿ ಮತ್ತು ಎಬಿಪಿ ನ್ಯೂಸ್ ಲೈವ್ ಮಾರ್ಚ್ 29,2024 ರ ಮಾಡಿರುವ ವರದಿಗಳು ಲಭ್ಯವಾಗಿದೆ.

ವರದಿಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೀಡಿದ 1,823 ಕೋಟಿ ರೂ.ಗಳ ಬೇಡಿಕೆ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ದಂಡ ಮತ್ತು ಬಡ್ಡಿಯನ್ನು ಒಳಗೊಂಡ ಈ ನೋಟಿಸ್ 2017-18 ರಿಂದ 2020-21ರ ಅವಧಿಯನ್ನು ಒಳಗೊಂಡಿದೆ. ಲೋಕಸಭಾ ಚುನಾವಣೆಗೆ ಮುನ್ನ ತೀವ್ರ ನಗದು ಬಿಕ್ಕಟ್ಟನ್ನು ಎದುರಿಸುತ್ತಿದ್ದ ಕಾಂಗ್ರೆಸ್‌ಗೆ ಈ ನೋಟಿಸ್ ದೊಡ್ಡ ಹಿನ್ನಡೆಯಾಗಿತ್ತು.
“ಸರ್ಕಾರ ಬದಲಾದಾಗ, ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು” ಎಂದು ರಾಹುಲ್ ಗಾಂಧಿ ಆದಾಯ ತೆರಿಗೆ ಇಲಾಖೆಯ ನೋಟಿಸ್ ಅನ್ನು ಉದ್ದೇಶಿಸಿ ಹೇಳಿದ್ದರು. “ನಮ್ಮ ಕ್ರಮ ಹೇಗಿರುತ್ತದೆ ಎಂದರೆ ಯಾರೂ ಮತ್ತೆ ಅದನ್ನು ಮಾಡಲು ಧೈರ್ಯ ಮಾಡುವುದಿಲ್ಲ. ನಾನು ಇದನ್ನು ಖಾತರಿಪಡಿಸುತ್ತೇನೆ” ಎಂದಿದ್ದರು.
ಒಟ್ಟಾರೆಯಾಗಿ ಹೇಳುವುದಾರೆ ಬಿಜೆಪಿ ಸರ್ಕಾರದ ಅಣತಿಯಂತೆ ಐಟಿ, ಇಡಿ, ಸಿಬಿಐಗಳು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುತ್ತಿದೆ. ನೀವುಗಳು ನೆನಪಿಡಿ, ಬಿಜೆಪಿ ಸರ್ಕಾರ ಶಾಸ್ವತವಾಗಿ ಇರುವುದಿಲ್ಲ. ಒಂದಲ್ಲ ಒಂದು ದಿನ ಸರ್ಕಾರ ಬದಲಾಗಲಿದೆ. ಆಗ ನಮ್ಮ ಸರ್ಕಾರ ಬರಲಿದೆ. ನಾವು ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವಿರೋಧಿಯಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಆ ಕ್ರಮ ಹೇಗಿರುತ್ತದೆ ಎಂದರೆ, ಸಂಸ್ಥೆಗಳು ಮತ್ತೆ ಆ ರೀತಿಯ ತಪ್ಪು ಮಾಡಬಾರದು ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಗೆ ಕೋಮು ಬಣ್ಣ ಬಳಿದು, ರಾಹುಲ್ ಗಾಂಧಿ ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್ ಬೂತ್ ಇದ್ದರೆ ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂಬುವುದು ನಿಜಾನಾ?


