ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, 1.53 ನಿಮಿಷದ ಈ ವಿಡಿಯೋದಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು. ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಂಟ್ವಾಳ ನದಿಯಲ್ಲಿ ಕಂಡು ಬಂದ ದೃಶ್ಯ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ.

“ಬಂಟ್ವಾಳ ನದಿಯಲ್ಲಿ ಕಂಡು ಬಂದ ದ್ರಶ್ಯ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ. ಊರು ಯಾವುದು ಎಂಬುದು ಗೊತ್ತಿಲ್ಲ. ಆದ್ರೆ ನದಿ ಕಡೆ ಹೋಗುವವರು ಸ್ವಲ್ಪ ಜಾಗ್ರತೆ ವಹಿಸುವುದು ಮುಖ್ಯ. ವಿಡಿಯೋವನ್ನು ನದಿ ಬದಿ ವಾಸಿಸುವವರು ಒಮ್ಮೆ ನೋಡಿ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಇದೆ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಚಿರತೆಯೊಂದು ನದಿ ದಡದಲ್ಲಿ ಹೊಂಚುಹಾಕಿ ಮೊಸಳೆಯನ್ನು ಭೇಟೆಯಾಡಿದ ದೃಶ್ಯವು ಉತ್ತರ ಕನ್ನಡ ಜಿಲ್ಲೆಯ ಬಂಟ್ವಾಳದ್ದು ಎಂದು ಪ್ರತಿಪಾದಿಸಿ ಹಂಚಿಕೊಂಡ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 29 ಮೇ 2024ರಂದು Guainía Cultural ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ವಿಡಿಯೋವನ್ನು ಹೋಲುವ ವಿಡಿಯೋವೊಂದು ಲಭ್ಯವಾಗಿದೆ, ಈ ವಿಡಿಯೋದಲ್ಲಿ “ಅಮೆಜಾನ್ ಕಾಡಿನ ರಾಜ” ಎಂದು ಬರೆದಿರುವುದನ್ನು ನೋಡಬಹುದು.
https://www.facebook.com/reel/1165388927958645
9 ಜೂನ್ , 2024ರಂದು Gancet World ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, “jaguar hunting caiman” ಎಂಬ ಶೀರ್ಷಿಕೆ ನೀಡಲಾಗಿದೆ.
ಇವುಗಳ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಪ್ರೀಮಿಯರ್ ಅಪಾಗಿನಾ ಹೆಸರಿನ ವೆಬ್‌ಸೈಟ್ ನಲ್ಲಿ ಮೇ 28, 2024ರಂದು ಮಾಡಿದ ಪೋಸ್ಟ್ ಲಭ್ಯವಾಗಿದ್ದು ಜಾಗ್ವಾರ್ ಕೂಯ್ಬಾ ನದಿಯಲ್ಲಿ ಮೊಸಳೆಯನ್ನು ಹಿಡಿದಿರುವುದು ಎಂದಿದೆ. (ಅನುವಾದಿಸಲಾಗಿದೆ) ಈ ಪೋಸ್ಟ್ ನಲ್ಲೂ ವೈರಲ್ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನೋಡಬಹುದು. ಕೂಯ್ಬಾ ನದಿಯು ದಕ್ಷಿಣ ಅಮೆರಿಕದ ಬ್ರೆಜಿಲ್ ನಲ್ಲಿದೆ ಎಂಬುದು ಗಮನಾರ್ಹ. ಚಿರತೆ ಮೊಸಳೆಯನ್ನು ಬೇಟಿಯಾಡಿದ ದೃಶ್ಯವು ಬಂಟ್ವಾಳದಲ್ಲಿ ನಡೆದಿದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಸಾಕ್ಷ್ಯಾಧಾರಗಳ ಪ್ರಕಾರ, ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯ ಬಂಟ್ವಾಳದ್ದಲ್ಲ, ಅದು ದಕ್ಷಿಣ ಅಮೆರಿಕ ಮೂಲದ್ದು ಎಂದು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ಅಮೆರಿಕಾದಲ್ಲಿ ಚಿತರೆಯೊಂದು ಮೊಸಳೆಯನ್ನು ಭೇಟೆಯಾಡಿದ ದೃಶ್ಯವನ್ನು, ಉತ್ತರ ಕನ್ನಡದ ಬಂಟ್ವಾಳದ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಬುರ್ಖಾಧಾರಿ ಮಹಿಳೆಯರಿಗೆ ಸರಪಳಿ ಬಿಗಿದು ಕರೆದೊಯ್ಯುತ್ತಿರುವ ಫೋಟೋ ಎಡಿಟೆಡ್


