HomeದಿಟನಾಗರFACT CHECK : ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸಿದ್ದಾಳೆ ಎನ್ನಲಾದ ವಿಡಿಯೋ ಕರ್ನಾಟಕದ್ದಲ್ಲ

FACT CHECK : ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸಿದ್ದಾಳೆ ಎನ್ನಲಾದ ವಿಡಿಯೋ ಕರ್ನಾಟಕದ್ದಲ್ಲ

- Advertisement -
- Advertisement -

ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ಧಯವಾಗಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಒಂದು ನಿಮಿಷ ಮೂವತ್ತು ಸೆಕೆಂಡ್‌ನ ವಿಡಿಯೋದಲ್ಲಿ ತಾಯಿ ತನ್ನ ಮಗನ ಎದೆಯ ಮೇಲೆ ಕುಳಿತು ಮುಖಕ್ಕೆ ಹಲ್ಲೆ ಮಾಡುತ್ತಿರುವುದಲ್ಲದೇ, ಎದೆಯ ಭಾಗಕ್ಕೆ ಕಚ್ಚುತ್ತಿರುವುದನ್ನು ಕಾಣಬಹುದಾಗಿದೆ.

ಕೆಲವರು ಈ ವಿಡಿಯೋ ಹಂಚಿಕೊಂಡು “ಇದು ಕರ್ನಾಟಕದ್ದು ಎಂದು ಕಾಣುತ್ತದೆ. ಆ ಕ್ರೂರ ತಾಯಿಯನ್ನು ಪತ್ತೆ ಹಚ್ಚಬೇಕು, ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ವಿಡಿಯೋ ಪೊಲೀಸರಿಗೆ ತಲುಪುವವರೆಗೆ ಶೇರ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಹಾಗಾದರೆ, ಈ ವೈರಲ್ ವಿಡಿಯೋದಲ್ಲಿರುವಂತಹ ಘಟನೆ ಕರ್ನಾಟಕದಲ್ಲಿ ನಡೆದಿದೆಯೇ? ನಡೆದಿದ್ದರೆ ಎಲ್ಲಿ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಅದು ಕರ್ನಾಟಕದಲ್ಲಿ ನಡೆದ ಘಟನೆಯದ್ದಲ್ಲ. ವಿಡಿಯೋದಲ್ಲಿರುವ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಖುದ್ದು ಮಾಹಿತಿ ನೀಡಿರುವ ಹರಿದ್ವಾರ ಪೊಲೀಸರು, “ಈ ವಿಡಿಯೋ ಸುಮಾರು 2 ತಿಂಗಳ ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ” ಎಂದು ತಿಳಿಸಿದ್ದರು.

ಹರಿದ್ವಾರ ಪೊಲೀಸರು ತಿಳಿಸಿದ್ದೇನು?

ಈ ಘಟನೆ ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಮಗುವಿಗೆ ಥಳಿಸುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಸುಮಾರು 2 ತಿಂಗಳ ಹಳೆಯದಾಗಿದ್ದು, ಇತ್ತೀಚಿನ ದಿನಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮಗುವಿಗೆ ಹಲ್ಲೆ ನಡೆಸುತ್ತಿರುವಾಕೆ ಜಬ್ರೇದಾ ನಿವಾಸಿಯಾಗಿದ್ದಾರೆ. ಆಕೆ ಮಗನಿಗೆ ಥಳಿಸುವ ವಿಡಿಯೋ ಮಾಡಿಕೊಂಡು ಅದನ್ನು ಉತ್ತರ ಪ್ರದೇಶದ ಸಹರಾನ್‌ಪುರದ ದೇವಬಂದ್‌ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತಿ ಮನೋಜ್‌ಗೆ ಕಳುಹಿಸಿದ್ದಾರೆ. ಆ ಬಳಿಕ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಹರಿದ್ವಾರ ಪೊಲೀಸರು ಮಕ್ಕಳ ಆರೈಕೆ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ವಿವರವನ್ನು ಕಲೆ ಹಾಕಿ, ಆಕೆಯನ್ನು ಹರಿದ್ವಾರದ ಸಿಡಬ್ಲ್ಯೂಸಿ (ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಲಾಗಿತ್ತು. ಆ ಬಳಿಕ ಈ ರೀತಿ ನಡೆದುಕೊಂಡಿದ್ದು ಏಕೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಎಲ್ಲ ವಿವರಗಳನ್ನು ತಿಳಿಸಿರುವುದಾಗಿ ಹರಿದ್ವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಖರ್ಚಿಗೆ ಹಣ ನೀಡದ್ದಕ್ಕೆ ಗಂಡನನ್ನು ಹೆದರಿಸಲು ವಿಡಿಯೋ ಮಾಡಿದ್ದಂತೆ!

ಘಟನೆಯ ವಿಡಿಯೋ ವೈರಲಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳು ಮತ್ತು ತಾಯಿಯನ್ನು ಕೌನ್ಸೆಲಿಂಗ್‌ ನಡೆಸಿದ್ದರು. ಈ ವೇಳೆ ಹಲವು ವಿಚಾರಗಳು ಬಯಲಿಗೆ ಬಂದಿದೆ. ‘ಖರ್ಚಿಗೆ ಹಣ ನೀಡದ್ದಕ್ಕೆ ಗಂಡನನ್ನು ಹೆದರಿಸಲು ವಿಡಿಯೋ ಮಾಡಿದ್ದೆ’ ಎಂದು ಮಹಿಳೆ ತಿಳಿಸಿದ್ದಾರೆ.

“ಪತಿ ಮನೆಯ ಖರ್ಚಿಗೆ ಯಾವುದೇ ಹಣವನ್ನು ನೀಡುತ್ತಿಲ್ಲ. ಬಹಳ ಸಮಯದಿಂದ ಮನೆಗೂ ಬರುತ್ತಿಲ್ಲ ಮತ್ತು ಮಾದಕ ದ್ರವ್ಯ ಸೇವಿಸುತ್ತಿದ್ದಾನೆ” ಎಂದು ಮಹಿಳೆ ಕೌನ್ಸೆಲಿಂಗ್ ವೇಳೆ ಮಾಹಿತಿ ನೀಡಿದ್ದಾರೆ.

“ಪತಿ ಖರ್ಚಿಗೆ ಹಣ ನೀಡದ್ದರಿಂದ ಜೀವನ ಸಾಗಿಸಲು ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ತನ್ನ ಮನೆಯ ಖರ್ಚುಗಳನ್ನು ನಿರ್ವಹಿಸುತ್ತಿದ್ದೇನೆ. ತನ್ನ ಪತಿಯನ್ನು ಹೆದರಿಸಲು ಮತ್ತು ಮನೆಯ ಜವಾಬ್ದಾರಿಯನ್ನು ಅರಿತುಕೊಳ್ಳಲು ಮತ್ತು ಬುದ್ಧಿ ಕಲಿಸಲೆಂದು ಸುಮಾರು ಎರಡು ತಿಂಗಳ ಹಿಂದೆ ತನ್ನ ಹಿರಿಯ ಮಗನಿಗೆ ಹಲ್ಲೆ ಮಾಡುವಂತಹ ವಿಡಿಯೋ ಮಾಡಿಕೊಂಡು, ಗಂಡನಿಗೆ ಕಳಿಸಿದ್ದೆ. ಆತ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ವೈರಲ್ ಆಗಿದೆ” ಎಂದು ಮಾಹಿತಿ ನೀಡಿದ್ದಾರೆ.

“ಥಳಿಸುವಂತೆ ನಟಿಸಲು ಮಗುವಿನ ಎದೆಯ ಮೇಲೆ ತಲೆ ಇಟ್ಟುಕೊಂಡಿದ್ದೆ. ಆದರೆ ಮಗನ ಎದೆಗೆ ಯಾವುದೇ ರೀತಿಯಲ್ಲಿ ಕಚ್ಚಿಲ್ಲ. ತಂದೆಗೆ ನಟನೆ ಎಂದು ಗೊತ್ತಾಗಬಾರದು ಎಂದು ಮಗನಿಗೂ ಕೂಡ ನೈಜವಾಗಿ ನಟಿಸುವಂತೆ ತಿಳಿಸಿದ್ದೆ ಎಂದು ಮಹಿಳೆ ಹೇಳಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಳಿಕ ಜಬ್ರೇದಾ ಪೊಲೀಸ್ ಠಾಣೆಯ ಅಧಿಕಾರಿಗಳು, ನೆರೆಮನೆಗಳಲ್ಲಿ ಮಹಿಳೆಯ ವರ್ತನೆಯ ಬಗ್ಗೆ ಕೂಡ ಮಾಹಿತಿ ಕಲೆ ಹಾಕಿದ್ದಾರೆ. “ಮಹಿಳೆಯು ನೆರೆಮನೆಯ ಜನರೊಂದಿಗೆ ಕಡಿಮೆ ಸಂವಹನ ನಡೆಸುತ್ತಿದ್ದಳು. ಆದರೆ ತನ್ನ ಮಕ್ಕಳೊಂದಿಗೆ ಆಕೆಯ ವರ್ತನೆಯು ಉತ್ತಮವಾಗಿದೆ. ಅಂತಹ ಯಾವುದೇ ಘಟನೆಯು ಮೊದಲು ನಡೆದಿಲ್ಲ” ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹರಿದ್ವಾರ ಜಿಲ್ಲೆಯ ಜಬ್ರೆದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ನಾಟಕೀಯ ಘಟನೆಯನ್ನು (ಹರಿದ್ವಾರ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ) ಕರ್ನಾಟಕದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ : FACT CHECK : ಹಿಂದೂ ಹುಡುಗಿಗೆ ಮುಸ್ಲಿಮರು ಥಳಿಸಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...