“ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಜನರಿಗೆ ಮೂರು ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದೆ” ಎಂಬ ಸ್ಕ್ರೀನ್ ಶಾಟ್ ಮತ್ತು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಉಚಿತವಾಗಿ 3 ತಿಂಗಳ ರೀಚಾರ್ಜ್, 200 ಜಿಬಿ ಸೂಪರ್ ಫಾಸ್ಟ್ 4ಜಿ,5ಜಿ ಡೇಟಾ, ಅನಿಯಮಿತ ಉಚಿತ ವಾಯ್ಸ್ ಕರೆ” ಇತ್ತೀಚೆಗೆ ಮೊಬೈಲ್ ರೀಚಾರ್ಜ್ ದರ ಹೆಚ್ಚಾಗಿರುವುದರಿಂದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) 3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದೆ” ಎಂದು ವೈರಲ್ ಸಂದೇಶದಲ್ಲಿ ಬರೆಯಲಾಗಿದೆ. ಜೊತೆಗೆ ಒಂದು ಯುಆರ್‌ಎಲ್ ಲಿಂಕ್ ಕೊಟ್ಟು ಕ್ಲಿಕ್ ಮಾಡುವಂತೆ ಸೂಚಿಸಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ಲಿಂಕ್ ಮತ್ತು ಸಂದೇಶ ನಕಲಿ ಮತ್ತು ಹಗರಣ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ಪಷ್ಟಪಡಿಸಿದೆ. ಜನರು ಈ ಬಗ್ಗೆ ಎಚ್ಚರವಾಗಿರುವಂತೆ ಸೂಚಿಸಿದೆ.

ಇನ್ನು ವೈರಲ್ ಪೋಸ್ಟ್‌ನಲ್ಲಿ ಒಂದು ಲಿಂಕ್ ಕೊಡಲಾಗಿದ್ದು, ಅದರ ಡೊಮೈನ್ ಹಿನ್ನೆಲೆ ಪರಿಶೀಲಿಸಿದಾಗ ಆ ಲಿಂಕ್ ಇತ್ತೀಚೆಗೆ, ಅಂದರೆ ಜುಲೈ 2024ರಲ್ಲಿ ಚೀನಾದಲ್ಲಿ ನೋಂದಣಿಯಾಗಿರುವುದು ಗೊತ್ತಾಗಿದೆ.
ಅಲ್ಲದೆ ಲಿಂಕ್‌ನ ಡೊಮೈನ್ ನಿಜವಾದುದಲ್ಲ ಎಂದು ತಿಳಿದು ಬಂದಿದೆ. ಟ್ರಾಯ್ ಅಥವಾ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಕುರಿತು ಯಾವುದೇ ಉಲ್ಲೇಖ ಡೊಮೈನ್‌ನಲ್ಲಿ ಕಂಡುಬಂದಿಲ್ಲ.

ಮತ್ತೊಂದು ಸಾಮಾನ್ಯ ಮಾಹಿತಿಯೆಂದರೆ ಟ್ರಾಯ್ ಯಾವುದೇ ಟೆಲಿಕಾಂ ಕಂಪನಿಯಲ್ಲ ಅದು ದೇಶದ ಟೆಲಿಕಾಂ ಸೇವೆಗಳನ್ನು ನಿಯಂತ್ರಿಸುವ ಒಂದು ಸಂಸ್ಥೆಯಾಗಿದೆ. ಹಾಗಾಗಿ, ಟ್ರಾಯ್ ರೀಚಾರ್ಜ್ ಆಫರ್ ನೀಡುವ ಸಾಧ್ಯತೆಯಿಲ್ಲ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶ ಮತ್ತು ಲಿಂಕ್ ನಕಲಿಯಾಗಿದ್ದು, ಅದನ್ನು ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಯಿಂದ ಹಣ ಅಥವಾ ಇತರ ಯಾವುದಾದರು ಗೌಪ್ಯ ಮಾಹಿತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಈ ಬಗ್ಗೆ ಜನರು ಎಚ್ಚರದಿಂದ ಇರಬೇಕಿದೆ.
ಇದನ್ನೂ ಓದಿ : FACT CHECK : ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸಿದ್ದಾಳೆ ಎನ್ನಲಾದ ವಿಡಿಯೋ ಕರ್ನಾಟಕದ್ದಲ್ಲ


