ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ ದಿನಗಳದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಹರಿದಾಡುತ್ತಿದೆ.
“ಬಹಳ ದಿನಗಳ ಪರಿಶ್ರಮದ ನಂತರ ಎಪಿಜೆ ಅಬ್ದುಲ್ ಕಲಾಂ ಅವರ ಈ ಫೋಟೋ ಲಭ್ಯವಾಗಿದೆ” ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗಾಗಿ ಫೋಟೋ ಸಾಕಷ್ಟು ವೈರಲ್ ಕೂಡ ಆಗಿದೆ.

ವೈರಲ್ ಆಗಿರುವ ಫೋಟೋ ತುಂಬಾ ಹಳೆಯದ್ದಾಗಿರುವುದರಿಂದ, ಅದು ನಿಜಕ್ಕೂ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ ಫೋಟೋ ಎಂದು ನಂಬಿ, ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ಫೋಟೋ ನಿಜವಾಗಿಯೂ ಅಬ್ದುಲ್ ಕಲಾಂ ಅವರ ಬಾಲ್ಯದ ದಿನಗಳದ್ದಾ? ಎಂದು ನಾವು ಪರಿಶೀಲನೆ ನಡೆಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಫೋಟೋ ಹಾಕಿ ಹುಡುಕಿದಾಗ ‘ಮರಿಯಾಲ ಶ್ರೀನಿವಾಸ್‘ ಎಂಬವರ ಫೇಸ್‌ಬುಕ್ ಖಾತೆಯಲ್ಲಿ ಮೂಲ ಫೋಟೋ ಕಂಡು ಬಂದಿದೆ. ಫೋಟೋ ಬಗ್ಗೆ ಬರೆದುಕೊಂಡಿದ್ದ ಶ್ರೀನಿವಾಸ್ ಅವರು, “ಇದು ಅಬ್ದುಲ್ ಕಲಾಂ ಅವರದ್ದೋ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರದ್ದೋ ಫೊಟೋ ಅಲ್ಲ. ಇದು ನಮ್ಮ ಕುಟುಂಬದ ಫೋಟೋ ಎಂದು” ಸ್ಪಷ್ಟನೆ ನೀಡಿದ್ದರು.
ಫೋಟೋ ಕುರಿತು 3 ಮೇ 2020ರಂದು ಬರೆದುಕೊಂಡಿದ್ದ ಶ್ರೀನಿವಾಸ್ ಅವರು, ಇದು ಅಕ್ಷರಶಃ ನಮ್ಮ ಕುಟುಂಬದ ಫೋಟೋ. ಅಮ್ಮನ ಪಕ್ಕದಲ್ಲಿ ಬಟ್ಟಲು ಹಿಡಿದುಕೊಂಡು ನಗುತ್ತಿರುವ ಮುದ್ದಾದ ಮಗು ನನ್ನ ಕಿರಿಯ ಸಹೋದರ ಶ್ರೀಧರ್ ಮರಿಯಾಳ” ಎಂದು ತಿಳಿಸಿದ್ದರು.
ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂಬುವುದು ಸುಳ್ಳು. ಆ ಫೋಟೋ ಮರಿಯಾಲ ಶ್ರೀನಿವಾಸ್ ಅವರ ಕುಟುಂಬಕ್ಕೆ ಸೇರಿದ್ದಾಗಿದೆ. ಹಲವರು ಆ ಫೋಟೋ ಬಳಸಿಕೊಂಡು ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : FACT CHECK : ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್


