ಪುರುಷರ ತಂಡವೊಂದು ಮಹಿಳೆಯೊಬ್ಬರನ್ನು ಎತ್ತಿಕೊಂಡು ಹೋಗಿ ವಾಹನದೊಳಕ್ಕೆ ತುರುಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು ಇದು ಬಾಂಗ್ಲಾದಲ್ಲಿ ಹಿಂದೂ ಮಹಿಳೆಯನ್ನು ಅಪಹರಿಸಿದ ದೃಶ್ಯ ಎಂದು ಬರೆದುಕೊಂಡಿದ್ದಾರೆ.
‘ಕನ್ನಡ ನಾಡು ನುಡಿ ಜಲ’ ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಆಗಸ್ಟ್ 9,2024 ವಿಡಿಯೋ ಪೋಸ್ಟ್ ಮಾಡಿರುವ ಕುಮಾರ್ ಅಭಿನಯ್ ಎಂಬ ಬಳಕೆದಾರ “ಬಾಂಗ್ಲಾದೇಶ: ಹಾಡಹಗಲೇ ಅಪ್ರಾಪ್ತ ಹಿಂದೂ ಹುಡುಗಿಯನ್ನ ಅಪಹರಿಸಿದ ಮುಸಲ್ಮಾನರು. ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ಶೋಚನೀಯ” ಎಂದು ಬರೆದುಕೊಂಡಿದ್ದಾರೆ.
ಸಲ್ಮಾನ್ ಸೀಮಾ ಎಂಬ ಎಕ್ಸ್ ಬಳಕೆದಾರರು ಆಗಸ್ಟ್ 8, 2024ರಂದು ವಿಡಿಯೋ ಹಂಚಿಕೊಂಡಿದ್ದು, “ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯನ್ನು ಹಾಡಹಗಲೇ ಇಸ್ಲಾಮಿಸ್ಟ್‌ಗಳು ಅಪಹರಿಸಿದ್ದಾರೆ. ಇದೇ ರೀತಿಯ ದೃಶ್ಯಗಳನ್ನು ನಾವು ಬೇರೆಲ್ಲಿ ನೋಡಿದ್ದೇವೆ?. IRGC ಭಯೋತ್ಪಾದಕರು ಕೆಚ್ಚೆದೆಯ ಇರಾನಿನ ಮಹಿಳೆಯರ ಮೇಲೆ ದಾಳಿ ಮಾಡಿದಾಗ ಈ ರೀತಿಯ ಘಟನೆ ಕಂಡಿದ್ದೇವೆ. ಹಮಾಸ್, ಐಆರ್‌ಜಿಸಿ, ಐಸಿಸ್, ಹಿಜ್ಬುಲ್ಲಾ, ಹೌತಿಗಳು, ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು, ನೈಜೀರಿಯಾದ ಬೊಕೊ ಹರಾಮ್ ಮತ್ತು ಅಲ್ ಖೈದಾ ಇವೆಲ್ಲವೂ ಒಂದೇ ಬೇರುಗಳು. ಸಿಸಿಪಿ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಪಾಕಿಸ್ತಾನದಿಂದ ಬೆಂಬಲಿತವಾಗಿರುವ ಈ ರೀತಿಯ ದಾಳಿಗಳು ಬಾಂಗ್ಲಾದೇಶದ ಭವಿಷ್ಯವನ್ನು ನಾಶಮಾಡುತ್ತವೆ. ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ” ಎಂದು ಬರೆದುಕೊಂಡಿದ್ದಾರೆ.
A Hindu woman being kidnapped in broad daylight by the Islamists in Bangladesh. Where else have we have seen similar scenes? In Iran. When IRGC terrorists attack brave Iranian women. Also in Israel when Hamas terrorists attacked on October 7th. Any movement that includes the rape… pic.twitter.com/z4gYqdJtna
— Salman Sima (@SalmanSima) August 8, 2024
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ en.prothomalo.com ಎಂಬ ವೆಬ್‌ಸೈಟ್‌ವೊಂದು ಆಗಸ್ಟ್ 9, 2024ರಂದು ವಿಡಿಯೋ ಕುರಿತು ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ. ವರದಿಯಲ್ಲಿ ” ಕೌಟುಂಬಿಕ ಕಲಹದ ವಿಡಿಯೋವನ್ನು ಕೋಮುಗಲಭೆ ಅಥವಾ ದೌರ್ಜನ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ” ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಬಾಂಗ್ಲಾದೇಶ ನೊವಾಖಾಲಿಯ ಸೆನ್‌ಬಾಗ್ ಎಂಬಲ್ಲಿ ಕೌಟುಂಬಿದ ಕಲಹದಿಂದ ತವರು ಮನೆಗೆ ತೆರಳಿದ್ದ ಮಹಿಳೆಯನ್ನು ಆಕೆಯ ಪತಿ ಕೆಲ ವ್ಯಕ್ತಿಗಳೊಂದಿಗೆ ಕೂಡಿ ಒತ್ತಾಯಪೂರ್ವಕವಾಗಿ ಕರೆದೊಯ್ಯಲು ಮುಂದಾಗಿದ್ದಾನೆ. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ, ಪತಿ ಮತ್ತು ಆತನ ಜೊತೆಗಿದ್ದವರು ಮಹಿಳೆಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ವಾಹನಕ್ಕೆ ಹತ್ತಿಸಲು ನೋಡಿದ್ದಾರೆ. ಈ ವೇಳೆ ಮಹಿಳೆ ಕೂಗಿಕೊಂಡಿದ್ದು, ಸ್ಥಳೀಯರು ಧಾವಿಸಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆಯ ಪತಿ ಮತ್ತು ಮೂವರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ವಾಹನವನ್ನು ಹಾನಿಗೊಳಿಸಿದ್ದಾರೆ.
ಆಗಸ್ಟ್ 9, 2024ರಂದು ವೈರಲ್ ವಿಡಿಯೋ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ” ಹೌದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿರುವ ಹಲವಾರು ಘಟನೆಗಳು ವರದಿಯಾಗಿವೆ. ಆದರೆ @Salwan_Momika1 ಮತ್ತು ಓಪ್‌ಇಂಡಿಯಾ ಸಂಪಾದಕ @UnSubtleDesi ಹಂಚಿಕೊಂಡಿರುವ ಈ ನಿರ್ದಿಷ್ಟ ವಿಡಿಯೋಗೂ ಹಿಂದೂ-ಮುಸ್ಲಿಮರಿಗೆ ಯಾವುದೇ ಸಂಬಂಧವಿಲ್ಲ. ಹಿಂದೂ ಮಹಿಳೆಯನ್ನು ಅಪಹರಿಸಿದ ವ್ಯಕ್ತಿ ಆಕೆಯ ಮಾದಕ ವ್ಯಸನಿ ಹಿಂದೂ ಪತಿಯಾಗಿದ್ದು, 6 ತಿಂಗಳ ಹಿಂದೆ ಆಕೆಯಿಂದ ಬೇರ್ಪಟ್ಟಿದ್ದಾನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಕೌಟುಂಬಿದ ಕಲಹದಿಂದ ತವರು ಮನೆ ಸೇರಿದ್ದ ಹಿಂದೂ ಮಹಿಳೆಯರನ್ನು ಆಕೆಯ ಪತಿ ಮತ್ತು ಆತನ ತಂಡ ಅಪಹರಿಸಿದ ವಿಡಿಯೋವನ್ನು ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯನ್ನು ಮುಸ್ಲಿಮರು ಅಪಹರಿಸಿದ್ದಾರೆ ಎಂಬರ್ಥದಲ್ಲಿ ತಪ್ಪಾಗಿ ಹಂಚಿಕೊಳ್ಳುತ್ತಿರುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ದೇವಾಲಯವೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ


