ಉತ್ತರ ಪ್ರದೇಶದ ರಾಮ್‌ಪುರ ಮೂಲದ ಪೇಂಟರ್‌ನನ್ನು ಕೇರಳದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಸಂದೇಶದೊಂದಿಗೆ ವಿಡಿಯೋವೊಂದು ವೈರಲ್ ಆಗಿದೆ.
ಕೆಲವರು ಈ ಘಟನೆ ಉತ್ತರಾಖಂಡದದಲ್ಲಿ ನಡೆದಿದೆ ಎಂದರೆ, ಮತ್ತೆ ಕೆಲವರು ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದೂ ಬರೆದುಕೊಂಡಿದ್ದಾರೆ.

ಗೋಡೆಗೆ ಪೇಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ಮಳೆಗರೆಯುವ ಭಯಾನಕ ವಿಡಿಯೋ ಇದಾಗಿದೆ. ಮರದ ಬೆಂಚಿನ ಮೇಲೆ ನಿಂತುಕೊಂಡು ಗೋಡೆಗೆ ಪೇಂಟಿಂಗ್ ಮಾಡುತ್ತಿರುವಂತೆ ಕಾಣುವ ವ್ಯಕ್ತಿಯ ಮೇಲೆ, 13 ಸೆಕೆಂಡ್‌ಗಳ ಅಂತರದಲ್ಲಿ ಕನಿಷ್ಠ ಹದಿನೇಳು ಬಾರಿ ಗುಂಡು ಹಾರಿಸಲಾಗಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದ್ದೇವೆ. ಈ ವೇಳೆ 30 ಜೂನ್ 2024ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಮೂಲ ವಿಡಿಯೋ ದೊರೆತಿದೆ. ಎಕ್ಸ್ ಪೋಸ್ಟ್‌ನಲ್ಲಿ ಪೋರ್ಚ್‌ಗೀಸ್ ಭಾಷೆಯಲ್ಲಿ ಬರೆದುಕೊಂಡಿರುವುದರಿಂದ ನಾವು ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅರ್ಥ ಕಂಡುಕೊಂಡಿದ್ದೇವೆ.

ಹುಚ್ಚ ಕ್ರಿಮಿನಲ್ ಓರ್ವ ಮನೌಸ್‌ನ ನೊವೊ ಅಲೆಕ್ಸೊದಲ್ಲಿ ಓಲ್ಹಾವೊ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.
ನಾವು ಘಟನೆ ವಿಡಿಯೋ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ 28 ಜೂನ್ 2024 ರಂದು ಪೋರ್ಚುಗೀಸ್ ಭಾಷೆಯ portaltucuma.com.br ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ವರದಿಯೊಂದು ಪತ್ತೆಯಾಗಿದೆ. ಆ ವರದಿಯಲ್ಲಿ ಬ್ರೆಝಿಲ್‌ನ ಮನೌಸ್ ನಗರದ ನೊವೊ ಅಲೆಕ್ಸೊ ಎಂಬಲ್ಲಿನ ಮನೆಯೊಂದರಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಲ್ಯೂಕಾಸ್ ಪೆರೇರಾ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ಪೋರ್ಟಾಲ್ ಡೊ ಹೋಲಾಂಡ ಎಂಬ ಯೂಟ್ಯೂಬ್ ಚಾನೆಲ್‌ನಲ್ಲೂ ಜೂನ್ 29, 2024ರಂದು ಘಟನೆ ಕುರಿತು ವಿಡಿಯೋ ವರದಿ ಪ್ರಕಟಿಸಲಾಗಿದ್ದು, ಅದರಲ್ಲಿ ಹತ್ಯೆಗೊಳಗಾದ ಲ್ಯೂಕಾಸ್ ಪೆರೇರಾ ಮಾದಕ ವಸ್ತು ಕಳ್ಳ ಸಾಗಾಟದ ಆರೋಪ ಹೊಂದಿದ್ದು, ಈತ ಈ ವಿಚಾರದಲ್ಲಿ ಗುಂಪೊಂದರ ಜೊತೆ ಜಗಳವಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಆತನ ಹತ್ಯೆ ನಡೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಈ ಅಂಶಗಳಿಂದ ವೈರಲ್ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಕೇರಳದಲ್ಲಿ ನಡೆದ ಘಟನೆಯದ್ದಲ್ಲ. ಅಸಲಿಗೆ ಆ ವಿಡಿಯೋ ಭಾರತಕ್ಕೇ ಸಂಬಂಧಿಸಿಲ್ಲ. ಅದು ಬ್ರೆಝಿಲ್‌ನಲ್ಲಿ ನಡೆದ ಘಟನೆಯದ್ದಾಗಿದೆ. ಹಾಗಾಗಿ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : ‘ಸ್ಟಾರ್’ ಚಿಹ್ನೆಯಿರುವ 500 ರೂ. ನೋಟು ನಕಲಿಯೇ?


