ವಕ್ಫ್, ಪಡಿತರ ಚೀಟಿ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿ ಬೀಳುತ್ತಿದ್ದ ರಾಜ್ಯ ಬಿಜೆಪಿ ನಾಯಕರು, ಈಗ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವೆ ನಡೆಯುತ್ತಿದ್ದ ಶೀತಲಸಮರ ಈಗ ಬಹಿರಂಗ ವಾಗ್ಯುದ್ಧವಾಗಿ ಮಾರ್ಪಟ್ಟಿದ್ದು, ವಿವಾದ ದೆಹಲಿಯ ಅಂಗಳ ತಲುಪಿದೆ.
ಆರಂಭದಿಂದಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಬಣದ ಕುರಿತು ಅಸಮಾಧಾನ ಹೊರ ಹಾಕುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಇತ್ತೀಚೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ತಂಡದ ವಿರುದ್ಧ ನೇರಾ ವಾಗ್ದಾಳಿ ಶುರು ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.
ಭಾನುವಾರೂ (ಡಿ.1) ವಿಜಯೇಂದ್ರ ಬಣದ ವಿರುದ್ದ ವಾಗ್ದಾಳಿ ನಡೆಸಿರುವ ಯತ್ನಾಳ್, “ರಮೇಶ್ ಜಾರಕಿಹೊಳಿ ಅಪರೇಶನ್ ಮಾಡಿದ್ದರಿಂದ ಯಡಿಯೂರಪ್ಪ ಸಿಎಂ ಆದರು. ಈಗ ನಮ್ಮನ್ನು ಅಪರೇಶನ್ ಮಾಡುತ್ತಾರಂತೆ. ಇಡೀ ರಾಜ್ಯದಲ್ಲಿ ಅಪರೇಶನ್ ಮಾಡುವಲ್ಲಿ ನಾವು ಟಾಪ್ ಮೋಸ್ಟ್ ಡಾಕ್ಟರ್‌ಗಳಿದ್ದೇವೆ. ನಿಮ್ಮ ನರನಾಡಿಗಳನ್ನೇ ಕಟ್ ಮಾಡುತ್ತೇವೆ” ಎಂದು ನೇರಾ ಸವಾಲು ಹಾಕಿದ್ದಾರೆ.
ಕೇವಲ ಯತ್ನಾಳ್ ಮಾತ್ರವಲ್ಲದೆ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಅರವಿಂದ ಲಿಂಬಾವಳಿ ಕೂಡ ವಿಜಯೇಂದ್ರ ವಿರುದ್ದ ಗಂಭೀರ ಆರೋಪ ಮಾಡಿ ಕಿಡಿಕಾರಿದ್ದಾರೆ “ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿಮ್ಮನ್ನು ರಾಜ್ಯಾಧ್ಯಕ್ಷ ಮಾಡಿಲ್ಲ. ಈ ಬಗ್ಗೆ ಹುಷಾರಾಗಿರಿ” ಎಂದಿದ್ದಾರೆ.
ಯತ್ನಾಳ್ ಬಣದ ಮತ್ತೋರ್ವ ನಾಯಕ ರಮೇಶ್ ಜಾರಕಿಹೊಳಿ “ವಕ್ಫ್ ಹೋರಾಟದ ಕೊನೆಗೆ ದಾವಣಗೆರೆಯಲ್ಲಿ ಸಮಾವೇಶ ನಡೆಸಿ, 10 ಲಕ್ಷ ಜನರನ್ನು ಸೇರಿಸುತ್ತೇವೆ” ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ಹೇಳಿಕೆ ವಕ್ಫ್ ಹೋರಾಟದ ನೆಪದಲ್ಲಿ ವಿಜಯೇಂದ್ರ ಬಣದ ವಿರುದ್ದ ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನವೇ? ಎಂಬ ಪ್ರಶ್ನೆ ಮೂಡಿದೆ.
ಇತ್ತ ಯತ್ನಾಳ್ ಬಣ ಸರಣಿ ಆರೋಪಗಳನ್ನು ಮಾಡುತ್ತಿದ್ದರೆ, ಅತ್ತ ಯಡಿಯೂರಪ್ಪ ಮತ್ತು ವಿಜಯೇಂದ್ರ ಬಣ ಕೂಡ ಅಲರ್ಟ್ ಆಗಿದೆ. ಭಾನುವಾರ (ಡಿ.1) ಯಡಿಯೂರಪ್ಪ ಮನೆಯಲ್ಲಿ ನಡೆದ ನಿಷ್ಠರ ಸಭೆಯಲ್ಲಿ ಎಂ.ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಸಿ ಪಾಟೀಲ್, ಹರತಾಳು ಹಾಲಪ್ಪ ಸೇರಿಂದೆ 25ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದಾರೆ.
ಯತ್ನಾಳ್ ಆರೋಪ ಮತ್ತು ಟೀಕೆಗಳಿಗೆ ವಿಜಯೇಂದ್ರ ಆರಂಭದಲ್ಲಿ ಶಾಂತವಾಗಿ ಉತ್ತರ ಕೊಡುತ್ತಿದ್ದರು. ಆದರೆ, ಇಡೀ ಯತ್ನಾಳ್ ಬಣ ನೇರಾ ಸಮರಕ್ಕೆ ಇಳಿದಿರುವ ಹಿನ್ನೆಲೆ, ಮೊದಲ ಬಾರಿಗೆ ನಿಷ್ಠರ ಸಭೆ ನಡೆಸಿ, ಭಿನ್ನಮತೀಯರಿಗೆ ಎಚ್ಚರಿಕೆ ನೀಡಿದ್ದಾರೆ.
“ನಾನು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿರಕೊಂಡಿದ್ದೇನೆ ಎಂಬುವುದಕ್ಕೆ ದಾಖಲೆಗಳು ಇವೆ ಎಂದಿದ್ದಾರೆ. ಇದ್ದರೆ ತಕ್ಷಣವೇ ಬಹಿರಂಗಪಡಿಸಲಿ” ಎಂದು ಯತ್ನಾಳ್ ಬಣಕ್ಕೆ ವಿಜಯೇಂದ್ರ ಸವಾಲು ಹಾಕಿದ್ದಾರೆ.
ಮತ್ತೊಂದೆಡೆ ತಮ್ಮ ನಾಯಕರ ವಿರುದ್ದ ಯತ್ನಾಳ್ ಬಣ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿ ಸುಮ್ಮನಿರಳಾದರೆ ಯಡಿಯೂರಪ್ಪ ಅವರ ಆಪ್ತ ಎಂ.ಪಿ ರೇಣುಕಾಚಾರ್ಯ ಕಣಕ್ಕೆ ಇಳಿದಿದ್ದಾರೆ.
ಯತ್ನಾಳ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಯತ್ನಾಳ್ ಹಿಂದಿರುವ ಶಕ್ತಿ ಯಾವುದು? ಅವರಿಗೆ ವರಿಷ್ಠರ ಬೆಂಬಲ ಇಲ್ಲ. ಅವರ ಹಿಂದೆ ಇರುವುದು ನಾಲ್ಕಾರು ಜನರು ಮಾತ್ರ. ಇದೇ 10ರಂದು ದಾವಣಗೆರೆಯಲ್ಲಿ 10ಕ್ಕೂ ಹೆಚ್ಚು ಶಾಸಕರು ಸೇರುತ್ತೇವೆ. ಯತ್ನಾಳರ ಉಚ್ಛಾಟನೆಯ ತೀರ್ಮಾನ ಮಾಡುತ್ತೇವೆ” ಎಂದಿದ್ದಾರೆ.
“ಸ್ವಪಕ್ಷೀಯರ ವಿರುದ್ದವೇ ಮಾತನಾಡುತ್ತಿರುವ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ವಿಷಯದಿಂದ ನಾವು ಹಿಂದೆ ಸರಿದಿಲ್ಲ” ಎಂದು ಯಡಿಯೂರಪ್ಪ ಬಣ ಬಿ.ಸಿ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ವಾಕ್ಸಮರದ ನಡುವೆ, ಯತ್ನಾಳ್ ಮತ್ತು ಅವರ ಬಣದ ಸದಸ್ಯರು ಭಾನುವಾರ (ಡಿ.1) ಸಂಜೆ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಹೈಕಮಾಂಡ್ ನಾಯಕರು ಅವರೇ ನೇಮಿಸಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ನಿಲ್ಲುತ್ತಾರಾ? ಇಲ್ಲ ಯತ್ನಾಳ್ ವಾದ ಆಲಿಸುತ್ತಾರಾ? ಎಂದು ಕಾದು ನೋಡಬೇಕಿದೆ. ಈ ನಡುವೆ ಡಿಸೆಂಬರ್ 10ರಂದು ದಾವಣಗೆರೆಯಲ್ಲಿ ಏನಾಗಲಿದೆ? ಎಂಬ ಕುತೂಹಲವೂ ಮೂಡಿದೆ.
ಇದನ್ನೂ ಓದಿ : ‘ಭಾರತ ವಿಕಾಸ ಸಂಗಮ ಸಂಸ್ಥೆ’ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ, ಅಧಿಕೃತ ಆಹ್ವಾನವೂ ಬಂದಿಲ್ಲ: ಸಿಎಂ ಸಿದ್ದರಾಮಯ್ಯ


