ಸುಳ್ಳು ಸುದ್ದಿ ಎಂಬುದು ಕೊರೋನಾಗಿಂತ ಮಾರಣಾಂತಿಕ ವೈರಸ್ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕೊರೋನಾ ಹರಡುವಿಕೆ ಅತಿಯಾದಂತೆಲ್ಲಾ ಸುಳ್ಳು ಸುದ್ದಿಯ ಹರಡುವಿಕೆಯೂ ಎಗ್ಗಿಲ್ಲದೆ ಸಾಗುತ್ತಲೇ ಇದೆ. ಇನ್ನೂ ಕರ್ನಾಟಕದ ಮಟ್ಟಿಗೆ ಈ ಸುಳ್ಳು ಸುದ್ದಿಗಳ ಶೂರರು ಯಾರು? ಸುಳ್ಳೇ ಮನೆ ದೇವರು ಎಂದು ನಂಬಿ ಜೈಲುವಾಸವನ್ನೂ ಅನುಭವಿಸಿ ಬಂದವರು ಯಾರು? ಎಂಬುದನ್ನು ಕನ್ನಡಿಗರಿಗೆ ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ ಇವೆಲ್ಲಾ ಪೋಸ್ಟ್ ಕಾರ್ಡ್ ಕನ್ನಡ ಎಂಬ ಪೋರ್ಟಲ್ ಕೆಲಸ ಎಂಬುದು ಬಹುತೇಕರಿಗೆ ಗೊತ್ತು.
ಸುಳ್ಳು ಸುದ್ದಿಗೆ ಇಡೀ ರಾಜ್ಯದಲ್ಲಿ ಕುಖ್ಯಾತಿ ಪಡೆದಿರುವ ಪೋಸ್ಟ್ ಕಾರ್ಡ್, ದಿನಕ್ಕೊಂದು ಸುಳ್ಳು ಹೇಳಿ ಮನರಂಜನೆ ನೀಡುವಲ್ಲಿ ಎತ್ತಿದ ಕೈ. ಅಂದಹಾಗೆ ಈ ಪೋರ್ಟಲ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಸುಳ್ಳು ಯಾವುದು ಗೊತ್ತಾ? ಅದೇ ಪ್ರಸ್ತುತ ಕೊರೋನಾ ಸೋಂಕಿನ ಚಿಕಿತ್ಸೆಗೆ ಉಪಯೋಗಿಸಲಾಗುತ್ತಿರುವ ’ಹೈಡ್ರಾಕ್ಸಿಕ್ಲೋರೋಕ್ವಿನ್’ ಔಷಧಿ ಪಿತಾಮಹ ಆಚಾರ್ಯ ಪ್ರಫುಲ್ಲಚಂದ್ರ ರಾಯ್ ಎಂಬುದು.
Posted by Postcard ಕನ್ನಡ on Friday, April 10, 2020
ಪಶ್ಚಿಮ ಬಂಗಾಳ ಮೂಲದ ಆಚಾರ್ಯ ಪ್ರಫುಲ್ಲಾಚಂದ್ರ ರಾಯ್ ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ದೇಶದ ರಸಾಯನ ಶಾಸ್ತ್ರ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರ ಮತ್ತು ಶ್ಲಾಘನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕುರಿತು ಭಾರತೀಯರೆನಿಸಿಕೊಂಡವರೆಲ್ಲರಿಗೂ ಅಪಾರ ಗೌರವ ಇದೆ. ಆದರೆ, ಪ್ರಸ್ತುತ ಚರ್ಚೆಯ ಕೇಂದ್ರವಾಗಿರುವ ’ಹೈಡ್ರಾಕ್ಸಿಕ್ಲೋರೋಕ್ವಿನ್’ ಔಷಧವನ್ನು ಕಂಡು ಹಿಡಿದದ್ದು ಇವರಲ್ಲ ಎಂಬುದೇ ಸತ್ಯ. ಏಕೆಂದರೆ ಅವರು ನಿಧನವಾಗಿದ್ದು 1944ರಲ್ಲಿ. ಔಷಧಿ ಕಂಡುಹಿಡಿದಿದ್ದು 1945ರ ನಂತರ.
ಆದರೆ ಪೋಸ್ಟ್ ಕಾರ್ಡ್ ಹರಡಿದ ಈ ಹಸಿ ಸುಳ್ಳನ್ನು ಎರಡು ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದರೆ, 1800 ಜನ ಷೇರ್ ಮಾಡಿದ್ದಾರೆ.
ಹಾಗಾದ್ರೆ ಈ ಔಷಧಿ ಕಂಡು ಹಿಡಿದದ್ದು ಯಾರು? ಇಲ್ಲಿದೆ ಅಸಲಿ ಅತ್ಯ
ಅಸಲಿಗೆ ಮಲೇರಿಯಾಗೆ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಮೊಟ್ಟಮೊದಲ ಬಾರಿಗೆ ’ಹೈಡ್ರಾಕ್ಸಿಕ್ಲೋರೋಕ್ವಿನ್’ ಔಷಧವನ್ನು ಕಂಡು ಹಿಡಿದದ್ದು ಜರ್ಮನಿಯ ಬಾಯರ್ ಫಾರ್ಮ. ಇದನ್ನು ಅನ್ವೇಷಿಸಲಾದ ವರ್ಷ 1945.
ಇವತ್ತು ಜಗತ್ತಿನ 70% ’ಹೈಡ್ರಾಕ್ಸಿಕ್ಲೋರೋಕ್ವೀನ್’ ನನ್ನು ಭಾರತ ಉತ್ಪಾದಿಸುತ್ತದೆ. ಭಾರತದ ಹೀಗೆ ಅತಿಹೆಚ್ಚು ಪ್ರಮಾಣದಲ್ಲಿ ಈ ಔಷಧವನ್ನು ಉತ್ಪಾದಿಸುತ್ತದೆ ಎಂದರೆ ಅದಕ್ಕೆ ಏಕೈಕ ಕಾರಣ ಈ ದೇಶ ಮಲೇರಿಯಾ ಮತ್ತು ಡೆಂಗ್ಯೂ ಬಾಧಿತ ರಾಷ್ಟ್ರ ಎಂಬುದೊಂದೆ.
ಆದರೆ, 1945ನೇ ವರ್ಷದಲ್ಲಿ ಜರ್ಮನಿ ಮೂಲದ ಫಾರ್ಮಾ ಕಂಪೆನಿಯಿಂದ ಮಲೇರಿಯಾಗೆ ಕಂಡು ಹಿಡಿಯಲ್ಪಟ್ಟ ’ಹೈಡ್ರಾಕ್ಸಿಕ್ಲೋರೋಕ್ವಿನ್’ ಎಂಬ ಔಷಧಿಯನ್ನು, 1944ಕ್ಕೂ ಮುಂಚಿತವಾಗಿಯೇ ಮೃತಪಟ್ಟ ಆಚಾರ್ಯ ಪ್ರಫುಲ್ಲಚಂದ್ರ ರೇ ಹೇಗೆ ಕಂಡು ಹಿಡಿದರು ಎಂಬುದು ಮಾತ್ರ ಈವರೆಗೆ ತರ್ಕಕ್ಕೆ ನಿಲುಕದ್ದಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್ ಕಾರ್ಡ್ ಕನ್ನಡ: ಕ್ರಮ ಯಾವಾಗ?
ಈ ಸುಳ್ಳು ಹರಡುವುದರ ಹಿಂದೆ ಒಂದು ಕಾರಣವೂ ಇದೆ. ಅದೆಂದರೆ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಸದ್ಯಕ್ಕೆ ಕೊರೊನಾಗೆ ಔಷಧಿಯಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಪ್ರಧಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ಮಾರ್ಚ್ 25ರಂದು ನಿಷೇಧಿಸಿದರು. ಕಾರಣ ಸ್ಪಷ್ಟ ನಮ್ಮ ದೇಶಕ್ಕೆ ಸಾಕಷ್ಟು ಮಾತ್ರೆಗಳು ಬೇಕು ಎಂಬುದಷ್ಟೆ. ಆದರೆ ಏಪ್ರಿಲ್ 7ರಂದು ಅಮೆರಿಕಾ ಟ್ರಂಪ್‌ರವರು ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡದಿದ್ದರೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಕೂಡಲೇ ನಮ್ಮ ಪ್ರಧಾನಿಗಳು ರಫ್ತು ಮೇಲಿನ ನಿಷೇಧ ತೆರವುಗೊಳಿಸಿದರು. ಆದ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಪೋಸ್ಟ್ ಕಾರ್ಡ್ ಈ ರೀತಿ ಸುಳ್ಳು ಹರಡುತ್ತಿದೆ.
ಪೊಲೀಸರೇ ಕ್ರಮ ಎಂದು?
ಕೊರೋನಾ ಭೀತಿ ಹಿನ್ನೆಲೆ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ವತಃ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದರು. ಆದರೆ, ಪೋಸ್ಟ್ ಕಾರ್ಡ್ ಎಂಬ ಪೋರ್ಟಲ್ ಸುಳ್ಳು ಹೇಳುವುದನ್ನೇ ತನ್ನ ಕುಲಕಸುಬನ್ನಾಗಿಸಿಕೊಂಡಿದೆ.
ಇದೇ ಕಾರಣಕ್ಕೆ ಓ ಪೋರ್ಟಲ್ ಮುಖ್ಯಸ್ಥ ಇತ್ತೀಚೆಗೆ ಜೈಲು ಪಾಲಾಗಿ ಹಿಂದಿರುಗಿದ್ದರು. ಆದರೂ, ಸುಳ್ಳು ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲೂ ಸುಳ್ಳು ಹೇಳುವ ಇಂತವರ ವಿರುದ್ಧ ಕ್ರಮ ಎಂದು ಎಂಬುದು ಹಲವರ ಪ್ರಶ್ನೆಯಾಗಿದೆ.


