ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಅತ್ಯಾಚಾರ ಆರೋಪಿ ಅಪ್ರಾಪ್ತ ಸಂತ್ರಸ್ತೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಕಳೆದ ವಾರ ವರದಿಯಾಗಿತ್ತು. ಆದರೆ, ಈಗ ಈ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ಪೊಲೀಸರು ಪ್ರಕರಣದ ಕುರಿತು ಅಳವಾದ ತನಿಖೆ ನಡೆಸಿದಾಗ, ಕುಟುಂಬಸ್ಥರೇ (ಹೆತ್ತ ತಾಯಿಯೇ) ಸಂತ್ರಸ್ತ ಬಾಕಿಯನ್ನು ಹತ್ಯೆ ಮಾಡಿರುವುದು ಬಯಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತಾಯಿ, ಇಬ್ಬರು ಸಹೋದರರು ಮತ್ತು ಮಾವ ಸಂಚು ರೂಪಿಸಿ ಗುಂಡಿಕ್ಕಿ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ವಾರ ಬಾಲಕಿಯ ಕೊಲೆ ನಡೆದ ಸಂದರ್ಭ, ಆಕೆಯ ತಾಯಿ ಮತ್ತು ಸಹೋದರ ಜೊತೆಗಿದ್ದರು. ಆದರೆ, ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೊಲೆಗಾರ ಬಾಲಕಿಯನ್ನೇ ಗುರಿಯಾಗಿಸಿದ್ದ ಎಂದು ವರದಿಗಳು ಹೇಳಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ತನಿಖೆಯಿಂದ ಸತ್ಯ ಬಯಲಾಗಿದೆ.
ಬಾಲಕಿಯ ಅತ್ಯಾಚಾರ ಆರೋಪಿ ರಿಂಕು ಕುಮಾರ್ ಎಂಬಾತ ಹತ್ಯೆ ಮಾಡಿದ್ದ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಕೊಲೆ ನಡೆದಾಗ ಆತ ಆಸ್ಪತ್ರೆಯಲ್ಲಿರುವ ತನ್ನ ತಂದೆಯ ಜೊತೆಗಿದ್ದ ಸಿಸಿಟಿವಿ ವಿಡಿಯೋಗಳು ಹರಿದಾಡಿದ್ದವು. ಇದು ತನಿಖೆಯ ದಿಕ್ಕನ್ನೇ ಬದಲಿಸಿತ್ತು.
ತನಿಖೆ ಮುಂದುವರೆಸಿದ ಪೊಲೀಸರು, ಸಂತ್ರಸ್ತೆಯ ಕುಟುಂಬದವರನ್ನೇ ವಿಚಾರಣೆಗೆ ಒಳಪಡಿಸಿದ್ದರು. ಆಗ ತಾಯಿಯೇ ಮಗಳ ಹತ್ಯೆಗೆ ಸಂಚು ರೂಪಿಸಿದ ವಿಷಯ ಬೆಳಕಿಗೆ ಬಂದಿದೆ. ಈ ಮೊದಲು ರಿಂಕು ಜೊತೆ ಮಗಳು ತೆರಳಿದ್ದಳು, ಹಾಗಾಗಿ, ಆಕೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ವಿರುದ್ಧ ಸಾಕ್ಷ್ಯ ಹೇಳಲಾರಳಲು ಎಂಬ ಭೀತಿಯಿಂದ ಈ ಕೃತ್ಯ ಎಸಗಿದ್ದಾಗಿ ವಿಚಾರಣೆಯಿಂದ ಗೊತ್ತಾಗಿದೆ.
ತಾಯಿ ತನ್ನ ಮಗಳನ್ನು ಇತ್ತೀಚೆಗೆ ಗಾಝಿಯಾಬಾದ್‌ನಿಂದ ಕರೆ ತಂದಿದ್ದಳು. ಸಂಭಾಲ್‌ನ ಮನೆಗೆ ವಾಪಸ್ಸಾದಾಗ, ಸಂಬಂಧಿಕರ ಮನೆಗೆ ಹೋಗುವಂತೆ ಮನವೊಲಿಸಿ ಸಹೋದರನ ಜೊತೆ ಬೈಕ್‌ನಲ್ಲಿ ಕರೆದೊಯ್ದಿದ್ದಳು. ಮಾವ ದಾರಿಯಲ್ಲಿ ಬಂದೂಕು ಹಿಡಿದು ನಿಂತಿದ್ದಾನೆ ಎನ್ನುವ ಅರಿವು ಇಲ್ಲದೇ ಹೋಗುತ್ತಿದ್ದ ಬಾಲಕಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ ಚಿಕ್ಕಪ್ಪ, ಸಾಯಿಸಿದ್ದ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಮಗಳು ಕುಟುಂಬಕ್ಕೆ ಅವಮಾನ ತರಬಹುದು ಎಂದು ಹೆತ್ತ ತಾಯಿಯೇ ಮುಂದೆ ನಿಂತು ಕೊಲೆ ಮಾಡಿಸಿದ್ದಾರೆ. ದುಷ್ಕೃತ್ಯಕ್ಕೆ ಆಕೆಯ ಮಾವ ಮತ್ತು ಇಬ್ಬರು ಸಹೋದರರು ಸಹಕರಿಸಿದ್ದಾರೆ ಎಂದು ಸಂಭಾಲ್ ಎಸ್ಪಿ ಕ್ರಿಶನ್ ಕುಮಾರ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಹೇಳಿದೆ.
ಬಾಲಕಿಯ ಕೊಲೆ ನಡೆದ ಕೆಲವೇ ದಿನಗಳಲ್ಲಿ, ಆಕೆಯ ಅತ್ಯಾಚಾರ ಆರೋಪಿ ರಿಂಕು ಕುಮಾರ್‌ನ ತಂದೆ ಸಾವನ್ನಪ್ಪಿದ್ದಾರೆ. ನಾವು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ, ಕೊಲೆ ನಡೆದ ಸಂದರ್ಭ ರಿಂಕು ಕುಮಾರ್ ತಂದೆಯ ಜೊತೆಗಿದ್ದ. ಇದು ನಮ್ಮ ತನಿಖೆಯ ದಿಕ್ಕನ್ನು ಬದಲಿಸಿತು. ಕುಟುಂಬದ ಗೌರವಕ್ಕಾಗಿ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಬಂಧನದ ಬಳಿಕ ಅವರಲ್ಲಿ ಕೊಲೆ ಬಗ್ಗೆ ಯಾವುದೇ ಪಶ್ಚಾತಾಪ ಕಂಡು ಬಂದಿಲ್ಲ ಎಂದು ಎಸ್ಪಿ ಕ್ರಿಶನ್ ಕುಮಾರ್ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.
ಬಾಲಕಿಯ ಹತ್ಯೆಯ ಕುರಿತ ವರದಿ ಕೆಳಗಿದೆ
ಜಾಮೀನಿನ ಮೇಲೆ ಹೊರ ಬಂದಿದ್ದ ಅತ್ಯಾಚಾರ ಆರೋಪಿಯಿಂದ ಸಂತ್ರಸ್ತೆಯ ಗುಂಡಿಕ್ಕಿ ಹತ್ಯೆ!


