ಆಂಧ್ರ ಪ್ರದೇಶ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸರ ವಿರುದ್ದ ಕುಟುಂಬಸ್ಥರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸರು ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮೇ 21ರಂದು ಛತ್ತೀಸ್‌ಗಢದ ನಾರಾಯಣಪುರ ಪ್ರದೇಶದ ಅಬುಜ್ಮರ್ ಅರಣ್ಯದಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ನಡೆಸಿದ ಎನ್‌ಕೌಂಟರ್‌ನಲ್ಲಿ ಬಲಿಯಾದವರಲ್ಲಿ ಬಸವರಾಜು ಕೂಡ ಒಬ್ಬರು.
ಶವ ಪರೀಕ್ಷೆ ಪೂರ್ಣಗೊಳಿಸಿದ ನಂತರ ಬಸವರಾಜು ಸೇರಿದಂತೆ ಏಳು ಮಾವೋವಾದಿ ನಾಯಕರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಮೇ 24ರಂದು ಆಂಧ್ರ ಪ್ರದೇಶ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿತ್ತು. ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೃತರ ಕುಟುಂಬಸ್ದರು ಮೇ 22ರಿಂದ ನಾರಾಯಣಪುರ ಜಿಲ್ಲಾಸ್ಪತ್ರೆಯ ಹೊರಗೆ ಬೀಡು ಬಿಟ್ಟಿದ್ದರು. ಆದರೂ, ಮೃತದೇಹಗಳನ್ನು ಹಸ್ತಾಂತರಿಸದೆ ಮೇ 26ರಂದು ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆ.
ಮೃತದೇಹಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಧಾರ್ಮಿಕ ಪದ್ಧತಿಗಳ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನಡೆಸಲು ಮೃತರ ಕುಟುಂಬಸ್ಥರು ಬಯಸಿದ್ದರು. ಆದರೆ, ಏಳು ಶವಗಳಿಗೆ “ಯಾವುದೇ ಕಾನೂನುಬದ್ಧ ಹಕ್ಕುದಾರರು” ಇರಲಿಲ್ಲ ಎಂದು ಹೇಳಿ ಪೊಲೀಸರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಉನ್ನತ ಶ್ರೇಣಿಯ ನಕ್ಸಲ್ ಕೇಡರ್ ಸಿಪಿಐ ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರದ್ದು ಸೇರಿದಂತೆ 7 ನಕ್ಸಲರ ಮೃತದೇಹಗಳಿಗೆ ಸ್ಪಷ್ಟ ಕಾನೂನು ಹಕ್ಕುದಾರರು ಇರಲಿಲ್ಲ. ಹಾಗಾಗಿ, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರ ಸೂಕ್ತ ಆದೇಶದೊಂದಿಗೆ ಕಾನೂನು ಕಾರ್ಯವಿಧಾನದ ಪ್ರಕಾರ ನಾರಾಯಣಪುರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮಾವೋವಾದಿ ಕೇಡರ್ ಕೋಸಿ ಅಲಿಯಾಸ್ ಹಂಗಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಕೂಡ ಅವರ ಕುಟುಂಬ ಸದಸ್ಯರು ನಾರಾಯಣಪುರದಲ್ಲಿ ನೆರವೇರಿಸಿದ್ದಾರೆ” ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
“ಹಕ್ಕುದಾರರು ಇಲ್ಲದಿದ್ದ ನಕ್ಸಲರ ಮೃತ ದೇಹಗಳನ್ನು ಸೂಕ್ತ ಕಾನೂನು ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸುವಾಗ ಎಲ್ಲಾ ರೀತಿಯ ಮೂಲಭೂತ ಮತ್ತು ಮಾನವೀಯ ಗೌರವವನ್ನು ನೀಡಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.
ನಾವು ನಿಜವಾದ ಕುಟುಂಬ ಸದಸ್ಯರು ಎಂದು ದೃಢೀಕರಿಸಲು ಪ್ರಮಾಣಪತ್ರ ಕೊಡಬೇಕಾಗಿತ್ತು. ಅದಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮತ್ತು ಆಸ್ಪತ್ರೆ ನಡುವೆ ಅಲೆದಾಟ ಮಡಬೇಕಾಯಿತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾಗಿ ವರದಿಯಾಗಿದೆ.
ನಕ್ಸಲ್ ಬಸವರಾಜ್ ಮೃತದೇಹವನ್ನು ಕುಟುಂಬಕ್ಕೆ ನೀಡದೆ ಬಲತ್ಕಾರವಾಗಿ ತಾವೇ ಅಂತ್ಯಕ್ರಿಯೆ ನಡೆಸಿದ ಛತ್ತೀಸ್‌ಗಢ ಪೊಲೀಸ್


