ಮುಸ್ಲಿಮರ ಪವಿತ್ರ ‘ಶಬೇ ಬರಾಅತ್’ ದಿನವಾದ ಗುರುವಾರ (ಫೆ.13) ಶ್ರೀನಗರದ ಪ್ರಸಿದ್ದ ಜಾಮಿಯಾ ಮಸೀದಿಯಲ್ಲಿ ರಾತ್ರಿಯ ವಿಶೇಷ ಪ್ರಾರ್ಥನೆಗೆ ಅವಕಾಶ ನಿರಾಕರಿಸಿದ ಆಡಳಿತ, ಮಸೀದಿಗೆ ಬೀಗ ಜಡಿದಿದೆ. ಅಲ್ಲದೆ, ಪ್ರಾರ್ಥನೆಗೆ ನೇತೃತ್ವ ವಹಿಸಬೇಕಿದ್ದ ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಲ್ಲಿಟ್ಟಿದೆ ಎಂದು ವರದಿಯಾಗಿದೆ.
“ಗುರುವಾರ ಅಧಿಕಾರಿಗಳು ಹಠಾತ್ ಮಸೀದಿಯ ದ್ವಾರಗಳನ್ನು ಮುಚ್ಚಿದರು ಮತ್ತು ಪೊಲೀಸ್ ಸಿಬ್ಬಂದಿ ಜನರನ್ನು ಮಸೀದಿಯಿಂದ ಹೊರ ಹೋಗುವಂತೆ ಸೂಚಿಸಿದರು” ಎಂದು ಮಸೀದಿಯ ಉಸ್ತುವಾರಿ ವಹಿಸಿರುವ ಅಂಜುಮನ್ ಔಕಾಫ್ ಹೇಳಿದೆ.
“ಜಾಮಿಯಾ ಮಸೀದಿಯಲ್ಲಿ ಶಬೇ ಬರಾತ್ ಆಚರಣೆಗೆ ಅನುಮತಿ ನೀಡುವುದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಧರ್ಮಗುರು ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ. ಅವರು ತನ್ನ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯಲಾಗಿದೆ” ಎಂದು ಔಕಾಫ್ ಆರೋಪಿಸಿದೆ.
ವಿಶೇಷ ಧಾರ್ಮಿಕ ದಿನಗಳಂದು ಹೆಚ್ಚಿನ ಜನರು ಮಸೀದಿಗಳಿಗೆ ಭೇಟಿ ನೀಡುತ್ತಾರೆ. ಆದರೆ, ಎಲ್ಲಾ ವಿಶೇಷ ದಿನಗಳಂದು ಜಾಮಿಯಾ ಮಸೀದಿಯನ್ನು ಮುಚ್ಚಲಾಗ್ತಿದೆ. ಅಲ್ಲದೆ, ಪ್ರಾರ್ಥನೆಗೆ ನೇತೃತ್ವ ವಹಿಸಬೇಕಿದ್ದ ಧಾರ್ಮಿಕ ಗುರು ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಲ್ಲಿಡಲಾಗುತ್ತಿದೆ. ಇದು ಬಹಳ ದುರದೃಷ್ಟಕರ. ಇಂತಹ ಪುನರಾವರ್ತಿತ ನಿರ್ಬಂಧಗಳು ಜನರ ಭಾವನೆಗಳಿಗೆ ನೋವುಂಟು ಮಾಡುವುದಲ್ಲದೆ, ಅವರ ಮೂಲಭೂತ ಧಾರ್ಮಿಕ ಹಕ್ಕುನ್ನು ತಡೆದಂತೆಯಾಗುತ್ತದೆ ಎಂದು ಅಂಜುಮನ್ ಔಕಾಫ್ ಹೇಳಿದೆ.
ದುರದೃಷ್ಟಕರ : ಸಿಎಂ ಉಮರ್ ಅಬ್ದುಲ್ಲಾ
“ಶಬೇ ಬರಾಅತ್ ದಿನವೇ ಶ್ರೀನಗರದ ಜಾಮಿಯಾ ಮಸೀದಿಯನ್ನು ಮುಚ್ಚಿರುವುದು ದುರದೃಷ್ಟಕರ. ಈ ಕ್ರಮ ಜನರಿಗೆ ಕಾನೂನು ಸುವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗುವಂತೆ ಮಾಡುತ್ತದೆ. ಕಾಶ್ಮೀರದ ಜನರು ಈ ಪರಿಸ್ಥಿತಿ ಎದುರಿಸಬೇಕಾದವರಲ್ಲ. ಅವರು ಇದಕ್ಕಿಂತ ಉತ್ತಮ ಪರಿಸ್ಥಿತಿ ಅನುಭವಿಸಬೇಕಾದವರು” ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
It is very unfortunate that the security establishment has taken the decision to seal the historic Jamia Masjid, Srinagar on one of the holiest nights in the Islamic calendar – #shabebaraat. This decision betrays a lack in confidence in the people & a lack of confidence in the…
— Omar Abdullah (@OmarAbdullah) February 13, 2025
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಇಲ್ತಿಜಾ ಮುಫ್ತಿ ಕೂಡ ಆಡಳಿತದ ಕ್ರಮವನ್ನು ಖಂಡಿಸಿದ್ದಾರೆ. “ಶಬೇ ಬರಾಅತ್ ಹಬ್ಬದ ಪವಿತ್ರ ದಿನದಂದು ಮಿರ್ವೈಝ್ ಸಾಹಬ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಮತ್ತು ಜಾಮಿಯಾ ಮಸೀದಿಯ ದ್ವಾರಗಳನ್ನು ಹಠಾತ್ತನೆ ಮುಚ್ಚಲಾಗಿದೆ. ಕಾಶ್ಮೀರದಲ್ಲಿ ನಮ್ಮ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಹಕ್ಕುಗಳನ್ನು ಮಾತ್ರವಲ್ಲದೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕೂಡ ತಡೆಯಲಾಗುತ್ತಿದೆ. ಇದು ಅಪರಾಧ ಮತ್ತು ದುಃಖಕರ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸರ್ಕಾರ ಚರ್ಚ್ ಇಲಿಯಂತೆ ಮೌನವಾಗಿರುವುದು ಆಘಾತಕಾರಿ. ನೀವು ಯಾವ ಸಂವಿಧಾನವನ್ನು ಅನುಸರಿಸುತ್ತಿದ್ದೀರಿ?” ಎಂದು ಇಲ್ತಿಜಾ ಮುಫ್ತಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
On the blessed occasion of Shab-e-Baarat Mirwaiz Sahab has been placed under house arrest & the gates of Jama Masjid have been abruptly locked up. In Kashmir not only are our fundamental rights to speech & expression muzzled but also the very right to freedom of religion.… pic.twitter.com/KTWehIZiel
— Iltija Mufti (@IltijaMufti_) February 13, 2025
ಆರನೇ ವರ್ಷವೂ ಮಸೀದಿ ಬಂದ್
ಶಬೇ ಬರಾಅತ್ ದಿನ ಸತತ ಆರನೇ ವರ್ಷವೂ ಜಾಮಿಯಾ ಮಸೀದಿಗೆ ಬೀಗ ಜಡಿಯಲಾಗಿದೆ ಎಂದು ವರದಿಗಳು ಹೇಳಿವೆ. ಆದರೆ, ಯಾವ ಕಾರಣಕ್ಕೆ ಶಬೇ ಬರಾಅತ್ ದಿನ ಮಸೀದಿಯನ್ನು ಬಂದ್ ಮಾಡಲಾಗಿದೆ ಎಂಬುವುದು ಸ್ಪಷ್ಟವಾಗಿಲ್ಲ.
ಮಣಿಪುರ | ಇಬ್ಬರು ಸಹೋದ್ಯೋಗಿಗಳನ್ನು ಕೊಂದು, ಗುಂಡು ಹಾರಿಸಿ ಆತ್ಮಹತ್ಯೆ ಮಾಡಿದ ಯೋಧ


