ಅಭಿಮಾನ ಎನ್ನುವುದು ನಮ್ಮ ಕಾಲದ ಬಹುದೊಡ್ಡ ಸಾಮಾಜಿಕ ವಿದ್ಯಮಾನ. ಇದನ್ನು ಸಮಾಜಶಾಸ್ತ್ರಜ್ಞರು ಮತ್ತು ಮನಶಾಸ್ತ್ರಜ್ಞರು ವಿಶ್ಲೇಷಣೆಗೆ ಒಳಪಡಿಸಬೇಕು, ಏಕೆಂದರೆ ಇತ್ತೀಚೆಗೆ ಅಭಿಮಾನದ ಮೂಲದಿಂದ ಹುಟ್ಟಿಕೊಂಡಿವೆ ಎಂದು ಆರೋಪಿಸಲಾಗಿರುವ ಅಪರಾಧಗಳು ಕಂಡುಬರುತ್ತಿವೆ. ಕರ್ನಾಟಕವನ್ನು ತಲ್ಲಣಿಸಿದ ಘಟನೆ ಎಂದರೆ ಪ್ರಸಿದ್ಧ ಚಲನಚಿತ್ರ ನಟ ದರ್ಶನ್ ಅವರು ತಮ್ಮ ಸಂಗಡಿಗರ ಒಡಗೂಡಿ ತನ್ನ ಅಭಿಮಾನಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಕ್ಕೆ ಈಡಾಗಿರುವುದು. ಆರೋಪದ ಸತ್ಯಾಸತ್ಯತೆಗಳು ಏನೇ ಇರಲಿ, ಅಭಿಮಾನ ಎನ್ನುವ ವಿಷಯವನ್ನು ಸಮಾಜಶಾಸ್ತ್ರೀಯ ವಿಶ್ಲೇಷಣೆಗೆ ಒಳಪಡಿಸೋಣ. ನನಗೆ ತಿಳಿದಿರುವಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಚಲನಚಿತ್ರ ನಟರ ಮೇಲೆ ಅಭಿಮಾನ, ಅತಿರೇಕದ ಅಭಿಮಾನ ಮತ್ತು ದುರಭಿಮಾನ ಇಟ್ಟುಕೊಂಡಿರುವ ಜನರ ಸಂಖ್ಯೆ ಗಮನಾರ್ಹವಾಗಿದೆ. ಆಂಧ್ರಪ್ರದೇಶದಲ್ಲಿ ಸಿನಿಮಾ ನಟರ ಅಭಿಮಾನಿಗಳು ಜಾತಿಯ ಆಧಾರದ ಮೇಲೆ ವಿಭಜನೆಗೊಂಡಿದ್ದಾರೆ. ತಮಿಳುನಾಡಿನಲ್ಲಿಯೂ ನಟರ ಸಮ್ಮೋಹನ ಶಕ್ತಿಯ ಆಧಾರದ ಮೇಲೆ ಅಭಿಮಾನಿಗಳು ಕಂಡುಬರುತ್ತಾರೆ. ಕರ್ನಾಟಕದಲ್ಲಿ ಅಭಿಮಾನಕ್ಕೂ ಕನ್ನಡ ಚಲನಚಿತ್ರ ಪರಂಪರೆಗೂ ವಿಶೇಷವಾದ ನಂಟಿದೆ. ಈ ಲೇಖನದ ವ್ಯಾಪ್ತಿಯಲ್ಲಿ ವಿಸ್ತೃತವಾದ ಉದಾಹರಣೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಟ್ಯಾಟು ಹಾಕಿಸಿಕೊಳ್ಳುವುದು, ಆಟೋ ಮತ್ತು ವಾಹನಗಳ ಮೇಲೆ ಫೋಟೋ ಅಂಟಿಸಿಕೊಳ್ಳುವುದು, ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವುದು, ಕುರಿ ಕಡಿಯುವುದು, ಚಲನಚಿತ್ರ ಯಶಸ್ಸಿಗಾಗಿ ಹರಕೆ, ಪೂಜೆ ಪುನಸ್ಕಾರಗಳನ್ನು ಮಾಡುವುದು, ಕೂದಲು ಬೆಳೆಸುವುದು ಮತ್ತು ಬೋಳಿಸುವುದು, ಅಭಿಮಾನದ ಹೆಸರಿನಲ್ಲಿ ಹೊಡೆದಾಟ ಮಾಡಿಕೊಳ್ಳುವುದು, ತಾನು ಅಭಿಮಾನಿಸುವ ನಟನ ಪ್ರತಿಸ್ಪರ್ಧಿ ಎಂದು ಭ್ರಮಿಸಿ ಮತ್ತೊಬ್ಬ ನಟನ ಪೋಸ್ಟರ್‌ಗಳಿಗೆ ಸಗಣಿ ಎರಚುವುದು, ಸಂದರ್ಭ ಸಿಕ್ಕರೆ ಚಪ್ಪಲಿ, ಟೊಮ್ಯಾಟೊ, ಮೊಟ್ಟೆ ಎಸೆದು ಪ್ರತಿಭಟನೆ ಮಾಡುವುದು. ಸಾಮಾಜಿಕ ಮಾಧ್ಯಮಗಳು ಪ್ರಬಲವಾದ ಮೇಲೆ ಅನಾಮಿಕತೆಯ ದುರ್ಲಾಭ ಪಡೆದು ಅಸಭ್ಯ, ಅಶ್ಲೀಲ, ವೈಯಕ್ತಿಕ ನಿಂದನೆಯ ಸಂದೇಶಗಳನ್ನು ಕಳಿಸುವುದು, ತನ್ನ ನಟನ ಎದುರಾಳಿಗಳೆಂದು ಭಾವಿಸಿ ಅವರ ಇಮೇಜನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಂಪೂರ್ಣ ನಾಶ ಮಾಡುವುದು ಅತಿರೇಕಕ್ಕೆ ತಿರುಗಿ ಕೊಲೆ ಮಾಡುವುದು- ಇವೆಲ್ಲವೂ ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೆಲ್ಲವೂ ಏಕೆ ಜರುಗುತ್ತದೆ ಎಂಬುದಕ್ಕೆ ಯೂರೋಪ್ ಮತ್ತು ಅಮೆರಿಕಗಳಲ್ಲಿ ಗಂಭೀರವಾದ ಅಧ್ಯಯನಗಳು ನಡೆದಿವೆ. ಭಾರತದಲ್ಲಿಯೂ ಅಂತಹ ಕೆಲವು ಅಧ್ಯಯನಗಳಿವೆ. ಆದರೆ ಜನಸಾಮಾನ್ಯರಿಗೆ ಎಟುಕುವ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಇವುಗಳನ್ನು ಕುರಿತ ಚಿಂತನೆ ಸಾಪೇಕ್ಷವಾಗಿ ಬಹಳ ಕಡಿಮೆ.
ಇಂಗ್ಲಿಷ್‌ನಲ್ಲಿ Fandom ಎನ್ನುವ ಪದ ಇದೆ. ಕನ್ನಡದಲ್ಲಿ ಅದನ್ನು ಅಭಿಮಾನಿಗಳ ಮನೋಲೋಕದ ಸಾಮ್ರಾಜ್ಯ ಎಂದು ಅನುವಾದಿಸಿಕೊಳ್ಳೋಣ. ಫ್ಯಾನ್‌ಡಮ್‌ಗೆ ಮೊದಲ ಸಮಾಜಶಾಸ್ತ್ರೀಯ ತಳಹದಿ ಹಾಕಿದವನು ಮಾರ್ಕ್ಸ್‌ವಾದದ ಕಟು ವಿಮರ್ಶಕ ಮ್ಯಾಕ್ಸ್‌ವೆಬರ್. ಅವನು ಪ್ರಪಂಚದಲ್ಲಿ ಮೂರು ಬಗೆಯ ಅಧಿಕಾರವನ್ನು ಗುರುತಿಸುತ್ತಾನೆ. ಒಂದು ಸಾಂಪ್ರದಾಯಿಕ ಅಧಿಕಾರ, ಶಾಸನಬದ್ಧ ಅಧಿಕಾರ ಮತ್ತು ಸಮ್ಮೋಹನ ಅಧಿಕಾರ. ಸಾಂಪ್ರದಾಯಿಕ ಅಧಿಕಾರ ದೈವದತ್ತವಾಗಿ ಬಂದಿದೆ ಎಂದು ಆರೋಪಿಸಿಕೊಂಡ ಧಾರ್ಮಿಕ ಮೂಲದ್ದು ಮತ್ತು ವಂಶಪಾರಂಪರ್ಯವಾಗಿರುತ್ತದೆ. ಅದನ್ನು ಪ್ರಶ್ನಿಸದೆ ಪಾಲಿಸುತ್ತಾರೆ. ಮತ್ತೊಂದು ಶಾಸನಬದ್ಧ ಅಧಿಕಾರ; ಜನರಿಂದ ಆಯ್ಕೆಯಾಗಿ ಸಕಾರಣ ಮತ್ತು ತರ್ಕದೊಡನೆ ಅಧಿಕಾರಕ್ಕೆ ಬಂದು ಅಧಿಕಾರವನ್ನು ಚಲಾಯಿಸುವುದು. ಸಮ್ಮೋಹನ ಅಧಿಕಾರ ಸ್ವಲ್ಪ ವಿಶೇಷವಾದುದು. ವ್ಯಕ್ತಿಯೊಬ್ಬನು/ಳು ತನ್ನ ವಿಶೇಷವಾದ ವ್ಯಕ್ತಿತ್ವ, ಭಾಷಣ ಪ್ರತಿಭೆ, ನಟನಾ ಸಾಮರ್ಥ್ಯ, ಜನರನ್ನು ಒಪ್ಪಿಸುವ ಕಲೆ, ಪ್ರಚೋದಿಸುವ ಗುಣ, ಸಾಮಾನ್ಯ ಜನರಲ್ಲಿ ಕಂಡುಬರದ ವಿಶೇಷ ಬಗೆಯ ತಿಳಿವಳಿಕೆ ಅಥವಾ ಸಿದ್ಧಾಂತ, ಯಾವುದೋ ರೀತಿಯ ಪವಾಡ, ಸಾಮಾನ್ಯ ಜನರಿಗಿಂತ ಭಿನ್ನವಾದ ಜೀವನಶೈಲಿ ಮತ್ತು ಇನ್ನು ವಿವರಿಸಲಾಗದ ಅನೇಕ ಪ್ರಭಾವಶಾಲಿ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಸಮ್ಮೋಹಕ ಅಧಿಕಾರವನ್ನು ಪಡೆದಿರುತ್ತಾರೆ. ಗಾಂಧಿ, ತನ್ನದೇ ವಿಶಿಷ್ಟ ಶೈಲಿಯ ಬದುಕಿನ ಕ್ರಮದಿಂದ ಯಾವ ಶಾಸನದ ನೆರವೂ ಇಲ್ಲದೆ ಕೋಟ್ಯಂತರ ಭಾರತೀಯರ ಮೇಲೆ ಪ್ರಭಾವ ಬೀರಿ ಅವರ ಜೀವನಕ್ರಮವನ್ನು ಮತ್ತು ದೃಷ್ಟಿಕೋನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಇಂದಿಗೂ ಅವರ ಅನುಯಾಯಿಗಳಲ್ಲಿ ಅತಿರೇಕದ ಅಭಿಮಾನವನ್ನು ಹೊಂದಿರುವವರಾಗಿದ್ದಾರೆ. ಎಷ್ಟೋ ಬಾರಿ ಈ ಧಾರ್ಮಿಕ ಪ್ರವಾದಿಗಳ ಹೆಸರಿನಲ್ಲಿ ಒಂದು ಸಣ್ಣ ಸೂಕ್ಷ್ಮ ಟೀಕೆ, ನಡೆನುಡಿಯಲ್ಲಿ ಸ್ವಲ್ಪ ವ್ಯತ್ಯಾಸ, ಸಣ್ಣ ವಿಮರ್ಶೆಯನ್ನು ಸಹಿಸಲಾರದ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಕ್ರಿಸ್ತರ ಹೆಸರಿನಲ್ಲಿ ಅನೇಕ ರಹಸ್ಯ ಪಂಥಗಳು ಹುಟ್ಟಿವೆ. ಶುದ್ಧ ಕ್ರೈಸ್ತ ರಕ್ತವನ್ನು ಹುಡುಕುತ್ತಾ ಅದನ್ನು ಕಾಪಾಡಲು ಪಣತೊಟ್ಟಿವೆ. ಇವು ಅಭಿಮಾನದ ಅತಿರೇಕವನ್ನು ಸೂಚಿಸುವ ಉದಾಹರಣೆಗಳು. ಹಿಟ್ಲರ್, ಸ್ಟಾಲಿನ್, ಮಾವೋ, ಸಾವರ್ಕರ್ ಮೊದಲಾದವರಿಗೆ ಸೈದ್ಧಾಂತಿಕ ಅಭಿಮಾನಿಗಳಿದ್ದಾರೆ. ಅವರ ತರ್ಕ ಮತ್ತು ವಿಚಾರಗಳೇ ಅಂತಿಮ ಸತ್ಯವೆಂದು ತಿಳಿದು ಅದಕ್ಕಾಗಿ ತಮ್ಮ ಜೀವವನ್ನೇ ಬಲಿಕೊಡಲು ತಯಾರಿದ್ದಾರೆ. ಹೋರಾಟ ಮತ್ತು ಸಿದ್ಧಾಂತ ಕಡೆಗಣಿಸಲ್ಪಟ್ಟ ಮತ್ತು ಶೋಷಿತ ವರ್ಗದ ಪರವಾಗಿ ಕಟ್ಟಿಕೊಂಡಿರುವ ನಕ್ಸಲೈಟರು ಇಂತಹ ಅಭಿಮಾನದ ಒಂದು ಬದಿಯಲ್ಲಿದ್ದರೆ ಮತ್ತೊಂದು ಕಡೆಗೆ ಬಹುಸಂಖ್ಯಾತ ಧರ್ಮೀಯರ ಪರವಾಗಿ ಕಾದಾಡುವ ಭಜರಂಗದಳದವರು ಉದಾಹರಣೆಯಾಗಿದ್ದಾರೆ.
ಮ್ಯಾಕ್ಸ್‌ವೆಬರ್‌ನ ಸಮ್ಮೋಹಕ ಅಧಿಕಾರ ಎನ್ನುವ ಪರಿಕಲ್ಪನೆಯು ನಮಗೆ ವಿಶೇಷ ತಿಳಿವಳಿಕೆಯನ್ನು ನೀಡುತ್ತದೆ. ಯಾವುದೇ ಬಗೆಯಲ್ಲಿ ಇದನ್ನು ವಿವರಿಸಿದರೂ ವ್ಯಕ್ತಿಗತ ನೆಲೆಯಲ್ಲಿನ ಸಮ್ಮೋಹಕ ಅಧಿಕಾರದ ಶಕ್ತಿಯನ್ನು ನಿರಾಕರಿಸಲು ಕಷ್ಟವಾಗುತ್ತದೆ. ಕಾರ್ಯಕಾರಣ ಮತ್ತು ತರ್ಕದ ಮಿತಿಯಲ್ಲಿ ಇದನ್ನು ಒಗ್ಗಿಸಲು ಸಾಧ್ಯವಿಲ್ಲ. ಆದರೆ ಕಾರ್ಯಕಾರಣ ಸಂಬಂಧ ಮತ್ತು ವೈಜ್ಞಾನಿಕ ವಿಧಾನದಲ್ಲಿ ವಿವರಿಸಿಕೊಳ್ಳಬಹುದು.
ಮನಶಾಸ್ತ್ರಜ್ಞ ಫ್ರಾಯ್ಡ್‌ನ ಶಿಷ್ಯ ವಿಲಿಯಂ ರೀಚ್ ತನ್ನ ‘ಕ್ಯಾರೆಕ್ಟರ್ ಅನಾಲಿಸಿಸ್’ ಎನ್ನುವ ಪುಸ್ತಕದಲ್ಲಿ ಇದರ ಆಳಕ್ಕೆ ಇಳಿಯುತ್ತಾನೆ. ಗಂಡಾಳಿಕೆ, ಅತೀಂದ್ರಿಯ ಭ್ರಮೆ, ಮಾನಸಿಕ ವಿಕಾರ, ಅಸಾಧ್ಯವಾದ ಪ್ರಣಾಳಿಕೆ ಅಥವಾ ಆದರ್ಶ, ಜೊತೆಗೆ ಮಣಿಸಲಾಗದ ಅಹಂಅನ್ನು ಹೊಂದಿರುವ ವ್ಯಕ್ತಿಯು ಸಾಮಾನ್ಯ ಜನರ ಮೇಲೆ ಅತಿಹೆಚ್ಚು ಅಧಿಕಾರವನ್ನು ಚಲಾಯಿಸಬಲ್ಲವನಾಗಿರುತ್ತಾನೆ. ಮ್ಯಾಕ್ಸ್ ವೆಬರ್ ಮತ್ತು ವಿಲಿಯಂ ರೀಚ್ ಅವರ ಅಭಿಪ್ರಾಯಗಳಲ್ಲಿ ಒಂದು ರೀತಿಯ ಸಾಮ್ಯತೆ ಕಂಡುಬರುವುದರಿಂದ ಇದನ್ನು ಪ್ರಸ್ತಾಪಿಸಬೇಕಾಯಿತು. ಮುಂದೆ ನಾವು ನಡೆಸಲಿರುವ ವಿಶ್ಲೇಷಣೆಗಳಿಗೆ ಈ ವಿಚಾರಗಳು ತಳಹದಿಯಾಗಬಹುದೆಂಬ ಸಣ್ಣ ಆಸೆಯೂ ಇದರ ಹಿಂದೆ ಇದೆ. ಅಭಿಮಾನ ಎನ್ನುವ ಪರಿಕಲ್ಪನೆಗೆ ಮತ್ತೆ ಮರಳುವುದಾದರೆ ಕರ್ನಾಟಕಕ್ಕೆ ಸೀಮಿತಗೊಂಡಂತೆ ಚರ್ಚಿಸಬಹುದು. ಇಡೀ ಭಾರತದಲ್ಲಿ ಅಭಿಮಾನಿಗಳು ಮತ್ತು ಅಭಿಮಾನದ ಕುರಿತ ಚಿಂತನೆಗೆ ಸ್ಪಷ್ಟ ರೂಪ ಕೊಟ್ಟಿದ್ದು ಡಾ. ರಾಜ್ ಕುಮಾರ್. ತಮ್ಮ ಅನೇಕ ಭಾಷಣಗಳು ಅದರಲ್ಲೂ ಈ-ಟಿವಿ ನೀಡಿದ ‘ವರ್ಷದ ಕನ್ನಡಿಗ’ ಪ್ರಶಸ್ತಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಆಡಿದ ಮಾತುಗಳು ಗಮನಾರ್ಹ. ಅವರು ಪುನರಾವರ್ತಿತವಾಗಿ ಹೇಳುವುದೇನೆಂದರೆ, ನನಗೆ ಏಕೆ ಈ ಕೀರ್ತಿ ಬಂದಿತು? ನನ್ನನ್ನು ಜನರು ಏಕೆ ಹೀಗೆ ಅಭಿಮಾನಿಸುತ್ತಾರೆ, ಇದು ಪೂರ್ವಜನ್ಮದ ಪುಣ್ಯ, ಇದಕ್ಕೆ ನಾನು ಅರ್ಹನಲ್ಲದಿದ್ದರೂ ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ. ಅವರೇ ದೇವರುಗಳ ರೂಪದಲ್ಲಿ ಅವತರಿಸಿದ್ದಾರೆ, ಆದುದರಿಂದ ಅವರು ಅಭಿಮಾನಿ ದೇವರುಗಳು. ಈ ಅಭಿಮಾನ ಎನ್ನುವುದು ಆಧ್ಯಾತ್ಮಿಕ ಎಂದು ಭಾವಿಸಿದ ರಾಜ್ ಕುಮಾರ್ ‘ಅಭಿಮಾನಿ ದೇವರುಗಳು’ ಎನ್ನುವ ಮೂಲಕ ತಾರ್ಕಿಕ ಅಂತ್ಯ ನೀಡಿದರು. ಅವರನ್ನು ಬಿಟ್ಟರೆ ಅಭಿಮಾನ ಕುರಿತ ವಿಭಿನ್ನ ಬಗೆಯ ಸಂಕಥನಗಳನ್ನ ಇತರ ನಟ/ನಟಿಯರಾಗಲಿ, ಸಮಾಜ ವಿಜ್ಞಾನಿಗಳಾಗಲಿ ನೀಡಲಿಲ್ಲ. ಅಭಿಮಾನಿಗಳ ನಡವಳಿಕೆಯನ್ನು ಕುರಿತ ವಿಮರ್ಶೆ, ಮೆಚ್ಚುಗೆ, ಟೀಕೆ, ಆರೋಪ ಮತ್ತು ಆಕ್ಷೇಪಗಳು ಕಂಡುಬಂದವೇ ಹೊರತು ಡಾ. ರಾಜ್ ಕುಮಾರ್ ಅವರು ಪ್ರಾರಂಭಿಸಿದ ಸಂಕಥನವನ್ನು ಮುಂದುವರಿಸುವ ಪ್ರಯತ್ನಕ್ಕೆ ಕೈಹಾಕಿದಂತೆ ತೋರುವುದಿಲ್ಲ.
ಈ ವಿವರಗಳು ಮತ್ತೊಂದು ಸಂಶೋಧನೆಯನ್ನು ಬೇಡುವುದರಿಂದ ಅದಕ್ಕೆ ಹೋಗದೆ ದರ್ಶನ್ ಅಭಿಮಾನಿಗಳು ಮತ್ತು ನಡೆದಿರುವ ದುರದೃಷ್ಟ ಘಟನೆಯ ವಿದ್ಯಮಾನಕ್ಕೆ ಹಿಂದಿರುಗೋಣ. ಅಭಿಮಾನ ಎನ್ನುವುದು ರಾಜಕೀಯ ಸಿದ್ಧಾಂತವಾದಾಗ ಅಥವಾ ದೇಶ ಮತ್ತು ಪ್ರಭುತ್ವದ ಜೊತೆ ತಳುಕುಹಾಕಿಕೊಂಡಾಗ ಅದಕ್ಕೊಂದು ಕಾರ್ಯಕಾರಣ ಸಂಬಂಧ ಮತ್ತು ತರ್ಕ ಏರ್ಪಡುತ್ತದೆ. ಫ್ಯಾಸಿಸಂ, ನ್ಯಾಜಿಸಂ, ಮಾರ್ಕ್ಸಿಸಂ, ಗಾಂಧೀಯಿಸಂ ಮತ್ತು ಮಾವೋಯಿಸಂ- ಇವುಗಳಿಗೆ ತಮ್ಮ ಗುಣಗಳಿಂದಾಗಿಯೇ ವಿಸ್ತರಿಸಿಕೊಳ್ಳುವ, ವಿಮರ್ಶೆಗೊಳಪಡುವ, ಮರುಕಟ್ಟಲ್ಪಡುವ ಅಥವಾ ತಿರಸ್ಕರಿಸಲ್ಪಡುವ ಸಾಧ್ಯತೆಗಳನ್ನು ಹೊಂದಿರುತ್ತವೆ. ಇದನ್ನು ಅನುಸರಿಸುವವರು ಸಾಮಾನ್ಯ ಜನರಾದರೂ, ಅವುಗಳನ್ನು ಹರಡುವವರು ಗ್ರಾಂಷಿ ಅರ್ಥದ ಬುದ್ಧಿಜೀವಿಗಳು. ಆದರೆ ಈ ಚಲನಚಿತ್ರ ನಟರ ಅಭಿಮಾನಿಗಳದ್ದು ವಿಚಿತ್ರ, ಕುತೂಹಲಕಾರಿ ಮತ್ತು ಅಧ್ಯಯನ ಯೋಗ್ಯವಾದ ವಿಷಯ. ಚಲನಚಿತ್ರ ನಟರಿಗೆ ತಮ್ಮ ನಟನೆ ಮತ್ತು ಅವರನ್ನ ಪರದೆಯ ಮೇಲೆ ಪ್ರಸ್ತುತಪಡಿಸುವ ರೀತಿಯಿಂದಾಗಿ ವಿಶೇಷ ಮೇಲ್ತೋರಿಕೆಯ ಸಮ್ಮೋಹಕ ಅಧಿಕಾರ ಲಭ್ಯವಾಗುತ್ತದೆ. ದರ್ಶನ್‌ರವರ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ದರ್ಶನ್ ಅವರ ಹುಟ್ಟು, ಬೆಳವಣಿಗೆ ಮತ್ತು ಚಲನಚಿತ್ರದ ಚರಿತ್ರೆಯನ್ನು ಗಮನಿಸಬಹುದು. ದರ್ಶನ್ ಯಾವಾಗಲೂ ಹೇಳಿಕೊಳ್ಳುವಂತೆ ತುಂಬಾ ಕಷ್ಟಪಟ್ಟು ಮೇಲೆಬಂದವರು. ಎಲ್ಲ ಪ್ರಸಿದ್ಧರಲ್ಲೂ ಈ ಗುಣ ಇರುತ್ತದೆ. ತಾವು ಕಷ್ಟಪಟ್ಟು ಮೇಲೆ ಬಂದವರು ಎಂದು ಹೇಳಿಕೊಳ್ಳುವುದರಲ್ಲಿ ಒಂದು ರೀತಿ ತೃಪ್ತಿಯನ್ನು ಕಾಣುತ್ತಾ, ಇತರರನ್ನು ಅವಹೇಳನ ಮಾಡುತ್ತಿರುತ್ತಾರೆ. ಬಲಿಪಶುತನವನ್ನು ಪ್ರತಿಪಾದಿಸುತ್ತಾ ಇತರರಿಗಿಂತ ತಾನು ಉತ್ತಮ, ನನ್ನನ್ನು ಹೆಚ್ಚು ಗೌರವಿಸುವುದು ನಾಡಿನ ಉಳಿದ ಪ್ರಜೆಗಳ ಕರ್ತವ್ಯ ಎನ್ನುವ ಮನೋಸೂಚನೆಯನ್ನು ನೀಡುತ್ತಿರುತ್ತಾರೆ. ಅಸಂಖ್ಯಾತ ಬಡವರು, ಕಾರ್ಮಿಕರು ತಮ್ಮ ಅಗಾಧ ಶ್ರಮದ ಹೊರತಾಗಿಯೂ ಏನನ್ನೂ ಗಳಿಸದೆ ಇರುವ ದುರದೃಷ್ಟವಂತರು ಇಂತಹ ಮನೋಸೂಚನೆಗಳಿಗೆ ಬಲಿಯಾಗುತ್ತಾರೆ. ಇಲ್ಲಿ ಎರಡು ಸಾಧ್ಯತೆಗಳಿರುತ್ತವೆ. ಒಂದು, ನಾನು ಅವರಂತೆ ಆಗಬಹುದು ಅಥವಾ ಅವರಲ್ಲಿ ನನ್ನನ್ನು ಕಾಣಬಹುದು. ನಾನು ಅವರಂತೆ ಆಗಬಹುದು ಎನ್ನುವುದು ಅಪರೂಪದಲ್ಲಿ ಅಪರೂಪದ ಸಾಧ್ಯತೆ. ನನ್ನನ್ನು ಅವರಲ್ಲಿ ಕಾಣುವುದು ಸಿಕ್ಕಸಿಕ್ಕ ಕನ್ನಡಿಯ ಮುಂದೆ ನಿಂತಂತೆ, ಸುಲಭ ಸಾಧ್ಯತೆ. ಈ ಸುಲಭ ಸಾಧ್ಯತೆಯು ಅಭಿಮಾನಿಗಳ ಸಮೂಹವನ್ನೇ ಹುಟ್ಟುಹಾಕುತ್ತದೆ. ಎರಡನೆಯದಾಗಿ ಅತಿಯಾದ ಗಂಡಾಳಿಕೆ ಅಥವಾ ಸ್ನಾಯುಬಲ ಮತ್ತು ಹಿಂಸೆಯ ಸೂಚನೆ. ಗಂಡಾಳಿಕೆ ಹಿಂಸೆಯ ಕೇಂದ್ರ ಬಿಂದು. ಅವರ ಬಹುಪಾಲು ಚಲನಚಿತ್ರಗಳಲ್ಲಿ ಅತಿರಂಜಿತ ಮತ್ತು ಕಲ್ಪಿತ ಗಂಡಸಿನ ರೂಪವನ್ನು ನೀಡಲಾಗುತ್ತದೆ. ಇದು ದರ್ಶನ್‌ರವರಿಗೆ ಮಾತ್ರವಲ್ಲದೆ ಚಲನಚಿತ್ರದ ಗಂಡಸಿನ ಚಿತ್ರಣದ ವ್ಯಾಕರಣಕ್ಕೆ ಅನ್ವಯಿಸುತ್ತದೆ. ಆದರೆ ದರ್ಶನ್ ನಮ್ಮ ಹುಡುಗ, ಕನ್ನಡದ ಹುಡುಗ, ಖಳನಾಯಕನ ಪಾತ್ರ ಮಾಡುತ್ತಿದ್ದ ನಟನ ಮಗ, ಲೈಟ್ ಬಾಯ್ ಆಗಿದ್ದವನು, ಕ್ಯಾಮೆರಾ ಹೊರುತ್ತಿದ್ದವನು, ಸೆಟ್‌ನಲ್ಲಿ ಹೀರೋಗಳಿಂದ ಅವಮಾನಿತನಾದವನು ಮೊದಲಾದ ಅಂಶಗಳು ಸೇರಿ ಆತನ ಬಗ್ಗೆ ಕರುಣೆ ಉಕ್ಕುತ್ತದೆ. ಇಂಥವನೊಬ್ಬನು ಪರದೆಯ ಮೇಲೆ ಅತಿರಂಜಿತ ಸೂಪರ್ ಮ್ಯಾನ್ ಆಗಿ ಕಾಣಿಸಿಕೊಂಡಾಗ ಅಭಿಮಾನವು ಉಕ್ಕಿ ಹರಿಯುತ್ತದೆ. ಈ ರೀತಿಯ ಚಿತ್ರಣವು ಎಲ್ಲ ಬಡ ಯುವಕಯುವತಿಯರಿಗೂ ಇದೆ. ಗಂಡಾಳಿಕೆಯ ಈ ಚಿತ್ರಣದಲ್ಲಿ ಲೈಂಗಿಕತೆಯ ವೈಭವೀಕರಣವೂ ತುಂಬಿಕೊಂಡಿರುತ್ತದೆ. ಇಂತಹ ಗಂಡಸು ಲೈಂಗಿಕವಾಗಿ ತೃಪ್ತಿಪಡಿಸಬಲ್ಲವನು, ಎದುರಾಳಿಯನ್ನು ಸದೆಬಡಿಯಬಲ್ಲವನು, ಮಹಿಳೆಯರಿಗೆ ರಕ್ಷಣೆಯನ್ನು ಒದಗಿಸಬಲ್ಲ ಎಂಬ ಭಾವನೆಯು ಬಲಗೊಳ್ಳುತ್ತದೆ. ಇದರಿಂದಾಗಿ ಮಧ್ಯಮ ವರ್ಗದ, ಕೆಳ ಮಧ್ಯಮ ವರ್ಗದ ಮತ್ತು ಬಡ ಯುವಕರು ಅವರಲ್ಲಿ ತಮ್ಮನ್ನು ಕಾಣುತ್ತಾರೆ.
ಇದನ್ನೂ ಓದಿ: FACT CHECK : ನಟ ದರ್ಶನ್ ಪತ್ನಿ ದೇವರ ಮೊರೆ ಎಂದು ಒಂದು ವರ್ಷದ ಹಿಂದಿನ ಹಳೆಯ ಫೋಟೊ…
ವೀಕೆಂಡ್ ವಿತ್ ರಮೇಶ್ ಮತ್ತು ಇತರ ಮೀಡಿಯಾಗಳಲ್ಲಿನ ಸಂದರ್ಶನಗಳಲ್ಲಿ ದರ್ಶನ್ ತೆರೆಯ ಮೇಲಿನ ತಮ್ಮ ಪಾತ್ರಗಳನ್ನು ಜೀವಿಸಲು ಆರಂಭಿಸಿದರು. ಆಂಗಿಕ ಭಾಷೆ ಮತ್ತು ಜೀವನ ಶೈಲಿಯಲ್ಲಿ ಗಂಡಾಳಿಕೆ, ಅದರ ಮೂಲಕ ಒದಗುವ ರೌಡಿಸಂ ಮತ್ತು ಮಹಿಳೆಯ ಮೇಲಿನ ದಬ್ಬಾಳಿಕೆಯ ಸಮರ್ಥನೆಯನ್ನು ಅಭಿಮಾನಿಗಳಿಗೆ ರವಾನಿಸಿದರು. ಇವೆಲ್ಲವೂ ಅವರ ಧ್ವನಿ ಮುದ್ರಣ, ಖಾಸಗಿ ಮಾತುಕತೆ, ಸಂದರ್ಶನ ಮೊದಲಾದವುಗಳಲ್ಲಿ ಕಂಡುಬರುತ್ತವೆ. ಹೀಗೆ ತನ್ನ ಅಭಿಮಾನಿಗಳಿಗೆ ಗಂಡಾಳಿಕೆ, ಹೆಣ್ಣಿನ ಮೇಲಿನ ದಬ್ಬಾಳಿಕೆ ಮತ್ತು ಕ್ರೌರ್ಯ ಸರಿ ಎಂಬ ಸಂದೇಶವನ್ನು ದಾಟಿಸಿದರು. ದರ್ಶನ್‌ರವರು ಪ್ರಜ್ಞಾಪೂರ್ವಕವಾಗಿ ಇದನ್ನೆಲ್ಲ ಮಾಡಿದರು ಎಂಬ ಅಭಿಪ್ರಾಯ ನಮಗಿಲ್ಲ. ಆದರೆ ನಡೆದಿರುವ ಘಟನಾವಳಿಗಳ ಹಿನ್ನೆಲೆಯಲ್ಲಿ ಇದನ್ನು ಹೀಗೆ ವಿಶ್ಲೇಷಿಸಲು ಸಾಧ್ಯ ಎನಿಸುತ್ತದೆ.
ಇಲ್ಲಿ ದರ್ಶನ್ ಅಭಿಮಾನಿಗಳು ಎನಿಸಿಕೊಂಡವರು ಮೇಲಿನ ವಿಚಾರಗಳ ಪ್ರತಿಬಿಂಬದಂತೆ ವರ್ತಿಸುತ್ತಾರೆ. ಹಿಂಸೆ ಮಾಡುವುದು, ಒರಟಾಗಿ ನಡೆದುಕೊಳ್ಳುವುದು, ಪುರುಷತ್ವವನ್ನು ಪ್ರದರ್ಶಿಸಿಕೊಳ್ಳುವುದು ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವುದು. ಮಾಧ್ಯಮಗಳ ವರದಿಯನ್ನು ನೋಡಿ ರೇಣುಕಾಸ್ವಾಮಿ ಇದನ್ನೆಲ್ಲಾ ಮಾಡಿದ್ದಾರೆ ಎಂದು ಊಹಿಸಬಹುದು. ನಿವೃತ್ತರಾದ ತಂದೆತಾಯಿಗಳು, ಒಂದು ಹೆಣ್ಣು ಮಗು, ಗರ್ಭಿಣಿ ಹೆಂಡತಿ, ಅತಿ ಕಡಿಮೆ ಸಂಬಳಕ್ಕೆ ದುಡಿಯುವ ಶ್ರಮಿಕ. ಆತನ ದೇಹದ ಆಕಾರವನ್ನು ನೋಡಿದರೆ ದರ್ಶನ್‌ಗೆ ಯಾವ ತಾಳೆಯೂ ಇಲ್ಲ, ಆದರೂ ತಾನು ಅಭಿಮಾನಿಸುವ ಹೀರೋನಂತೆ ಕಾಣಿಸಿಕೊಳ್ಳಬೇಕೆಂಬ ಬಯಕೆ. ಪುರುಷತ್ವದ ಪ್ರದರ್ಶನ ಎಂಬುದು ಖಾಸಗಿ ಅಂಗದಲ್ಲಿ ಕಾಣಿಸುತ್ತದೆ ಎಂಬ ಜನಪ್ರಿಯ ತಿಳಿವಳಿಕೆ. ತಾನು ಅಭಿಮಾನಿಸುವ ನಟ (ಅಣ್ಣ)ನ ದಾಂಪತ್ಯದಲ್ಲಿ ಯಾವುದೇ ಬಿರುಕುಂಟಾದರೂ ಅವನಿಗೆ ನೋವುಂಟಾಗುತ್ತದೆ ಎಂಬ ಕಳವಳ. ದರ್ಶನ್‌ನ ಕೂದಲೂ ಕೊಂಕಬಾರದೆಂಬ ರಕ್ಷಣಾ ಮನೋಭಾವ. ದರ್ಶನ್ ಅವರ ಪವಿತ್ರ ದಾಂಪತ್ಯದಲ್ಲಿ ಮತ್ತೊಬ್ಬ ಮಹಿಳೆ ಅಡ್ಡಿಯುಂಟುಮಾಡಿದಳೆಂಬ ಆಕ್ರೋಶ ಮತ್ತು ಕೇವಲ ಲೈಂಗಿಕತೆಗಾಗಿಯೇ ಸ್ನೇಹ ಬೆಳೆಸಿದ್ದಾರೆ ಎಂಬ ಮೂಢನಂಬಿಕೆ. ಹಾಗಾಗಿಯೇ ದರ್ಶನ್ ಮಾಡಿದ ಲೈಂಗಿಕ ಕ್ರಿಯೆಯನ್ನು ನಾನೂ ಮಾಡಿದರೆ ತನ್ನ ಅಣ್ಣನ ಕುಟುಂಬ ಚೆನ್ನಾಗಿ ಉಳಿಯುತ್ತದೆ ಎಂಬ ನಂಬಿಕೆ. ದರ್ಶನ್ ಅವರ ಕೌಟುಂಬಿಕ ಜೀವನಕ್ಕೆ ಅಡ್ಡಿಯಾಗಿರುವ ಮಹಿಳೆಯು ಲೈಂಗಿಕತೆಗಾಗಿಯೇ ಅವರ ಬಳಿ ಬಂದಿರುವಳೆಂಬ ಭ್ರಮೆಯಿಂದ ಆ ಶಕ್ತಿ ತನಗೂ ಇದೆ ಎಂದು ತೋರಿಸುವ ಹಂಬಲ. ಅದಕ್ಕಾಗಿಯೇ ತನ್ನ ಖಾಸಗಿ ಅಂಗದ ಸಂದೇಶದ ರವಾನೆ. ಹೀಗೆ ಅಭಿಮಾನವೆನ್ನುವುದು ಅಂತಿಮವಾಗಿ ಗಂಡಾಳಿಕೆಯ ಮಾನಸಿಕ ವಿಕೃತಿ ಮತ್ತು ಹತ್ಯೆಯಲ್ಲಿ ಕೊನೆಗೊಂಡಿತು.
ರಾಜಕೀಯ ಸಿದ್ಧಾಂತ ಮತ್ತು ಅದರ ಪ್ರವರ್ತಕರ ಮೇಲಿನ ಅಭಿಮಾನಕ್ಕೆ ಬೌದ್ಧಿಕ ಪರಿಕರಗಳು ಮತ್ತು ಚಿಂತನೆಯ ತಳಹದಿ ಇರುತ್ತದೆ. ಅದು ಭಾವನೆಗಳನ್ನು ಒಳಗೊಂಡಿದ್ದರೂ ಕಾರ್ಯಕಾರಣ ಸಂಬಂಧ ಮತ್ತು ತರ್ಕವನ್ನು ಒಳಗೊಳ್ಳುವ ಸಣ್ಣ ಅವಕಾಶವನ್ನು ಪಡೆದಿರುತ್ತದೆ. ಆದರೆ ಸಮ್ಮೋಹಕ ಅಭಿಮಾನದ ವ್ಯಾಪ್ತಿಯಲ್ಲಿ ಬರುವ ಚಲನಚಿತ್ರ ನಟರು, ಸ್ವಾಮೀಜಿಗಳು, ಧರ್ಮ ಪ್ರವರ್ತಕರು ತರ್ಕಾತೀತ ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ವಶಪಡಿಸಿಕೊಂಡಿರುತ್ತಾರೆ. ಅಲ್ಲಿ ವಿಮರ್ಶಾ ಪ್ರಜ್ಞೆಯು ನಶಿಸಿಹೋಗಿರುತ್ತದೆ. ಪ್ರಚಲಿತದಲ್ಲಿರುವ ನೈತಿಕ ಪ್ರಜ್ಞೆ, ಒಪ್ಪಿತ ಮೌಲ್ಯಗಳ ಬಗೆಗಿನ ಪರಿಜ್ಞಾನ ಮರೆಯಾಗಿ ತಾನು ಮಾನಸಿಕವಾಗಿ ಅವಲಂಬಿಸಿರುವ ತನ್ನನ್ನೇ ತಾನು ಕಂಡುಕೊಳ್ಳುವ ವ್ಯಕ್ತಿಯ ಪ್ರತಿರೂಪವಾಗಿ ಪ್ರತಿಫಲಿಸುತ್ತದೆ. ಆದ್ದರಿಂದ ಇಂಥ ಅಭಿಮಾನವು ಅಂತಿಮವಾಗಿ ಹತಾಶೆ, ಆತ್ಮಹತ್ಯೆ, ಖಿನ್ನತೆ ಮತ್ತು ಅಪರಾಧದಲ್ಲಿ ಕೊನೆಗೊಳ್ಳುತ್ತದೆ. ದರ್ಶನ್ ಮತ್ತು ರೇಣುಕಾಸ್ವಾಮಿ ಪ್ರಕರಣದಲ್ಲೂ ಅಂದರೆ ಅಭಿಮಾನಿತ ಮತ್ತು ಅಭಿಮಾನಿಯ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

ಡಾ. ಸಿ.ಜಿ. ಲಕ್ಷ್ಮೀಪತಿ
ಸಮಾಜಶಾಸ್ತ್ರಜ್ಞರು. ಕ್ಯಾಸ್ಟ್ ಕೆಮಿಸ್ಟ್ರಿ, ಅಂಬೇಡ್ಕರ್‌ವಾದದ ಆಚರಣೆ, ಲೋಕದೃಷ್ಟಿ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ.


