ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸೋಮವಾರ (ಜು.21) ಮಧ್ಯಾಹ್ನದವರೆಗೂ ರಾಜ್ಯಸಭೆಯ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡಿದ್ದ ಅವರು ಸಂಜೆಯ ವೇಳೆ ರಾಜೀನಾಮೆ ನೀಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.
ಧನಕರ್ ಅವರ ಹಠಾತ್ ರಾಜೀನಾಮೆ ಅಚ್ಚರಿ ತಂದಿದೆ ಎಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಉಪ ರಾಷ್ಟ್ರಪತಿ ತನ್ನ ರಾಜೀನಾಮೆಗೆ ಆರೋಗ್ಯದ ಕಾರಣ ನೀಡಿದ್ದರೂ, ‘ಕಣ್ಣ ಮುಂದೆ ಕಾಣುತ್ತಿರುವುದಕ್ಕಿಂತ ಹೆಚ್ಚಾಗಿ ಏನೋ ಇದೆ’ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಜೈರಾಮ್ ರಮೇಶ್ “ಇದು ಅಚ್ಚರಿದಾಯಕ ಮತ್ತು ವಿವರಿಸಲಾಗದ್ದು” ಎಂದಿದ್ದು, ಈ ಬೆಳವಣಿಗೆಯ ಹಠಾತ್ ಸ್ವರೂಪದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
“ನಾನು ಇಂದು ಸಂಜೆ 5 ಗಂಟೆಯ ಸುಮಾರಿಗೆ ಇತರ ಹಲವು ಸಂಸದರೊಂದಿಗೆ ಜಗದೀಪ್ ಧನಕರ್ ಅವರ ಜೊತೆಗಿದ್ದೆ. ಸಂಜೆ 7:30ಕ್ಕೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಆಗ ಅವರು ರಾಜೀನಾಮೆ ನೀಡುವ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ” ಎಂದಿದ್ದಾರೆ.
“ಖಂಡಿತವಾಗಿಯೂ ಧನಕರ್ ಅವರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದರೆ, ಸ್ಪಷ್ಟವಾಗಿ, ಅವರ ಅನಿರೀಕ್ಷಿತ ರಾಜೀನಾಮೆಯಲ್ಲಿ ಕಣ್ಣಿಗೆ ಕಾಣುತ್ತಿರುವುದಕ್ಕಿಂತ ಹೆಚ್ಚಾಗಿ ಏನೋ ಇದೆ. ಆದಾಗ್ಯೂ ಇದು ಊಹಾಪೋಹಗಳಿಗೆ ಸಮಯವಲ್ಲ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
The sudden resignation of the Vice President and Chairman of the Rajya Sabha is as shocking as it is inexplicable. I was with him alongside a number of other MPs till around 5 PM today and had spoken to him over the phone at 7:30 PM.
No doubt Mr. Dhankar has to give topmost…
— Jairam Ramesh (@Jairam_Ramesh) July 21, 2025
ಉಪರಾಷ್ಟ್ರಪತಿ ಧನಕರ್ ಅವರು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ ನಿರ್ಣಾಯಕ ಸಭೆಯನ್ನು ನಿಗದಿಪಡಿಸಿದ್ದರು ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಮಹತ್ವದ ಕ್ರಮಗಳನ್ನು ಘೋಷಿಸುವ ನಿರೀಕ್ಷೆಯಿತ್ತು. ಈ ನಡುವೆ ಅವರು ರಾಜೀನಾಮೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಇಂದು ಮುಂಜಾನೆ, 63 ಸಂಸದರು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪದಚ್ಯುತಿಗೆ ನೋಟಿಸ್ ಸಲ್ಲಿಸಿದ್ದರು.
“ಧನಕರ್ ಅವರು ಸರ್ಕಾರ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“ನಾವು ಅವರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ. ಆದರೆ, ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆಯೂ ವಿನಂತಿಸುತ್ತೇವೆ. ಪ್ರಧಾನ ಮಂತ್ರಿಗಳು ಧನಕರ್ ಅವರು ಮನಸ್ಸು ಬದಲಾಯಿಸುವಂತೆ ಮನವೊಲಿಸುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಇದು ರಾಷ್ಟ್ರದ ಹಿತಾಸಕ್ತಿಗೆ, ವಿಶೇಷವಾಗಿ ರೈತ ಸಮುದಾಯಕ್ಕೆ ಇದರಿಂದ ಹೆಚ್ಚಿನ ಸಮಾಧಾನವಾಗುತ್ತದೆ” ಎಂದಿದ್ದಾರೆ.
74 ವರ್ಷದ ಧನಕರ್ ಅವರು ಆಗಸ್ಟ್ 2022ರಲ್ಲಿ ಉಪ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡವರು. ಅವರು 2027ರವರೆಗೆ ಈ ಹುದ್ದೆಯಲ್ಲಿ ಇರಬೇಕಿತ್ತು.
ಧನಕರ್ ಅವರು ಅಧಿಕಾರವಧಿ ಪೂರ್ಣಗೊಳಿಸುವ ಮುನ್ನ ಹುದ್ದೆಯಿಂದ ಕೆಳಗಿಳಿದ ಭಾರತದ ಆರನೇ ಉಪರಾಷ್ಟ್ರಪತಿಯಾಗಿದ್ದಾರೆ.
ವಿ.ವಿ. ಗಿರಿ, ಆರ್. ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್. ನಾರಾಯಣನ್ ಮತ್ತು ಭೈರೋನ್ ಸಿಂಗ್ ಶೇಖಾವತ್ ಅವರ ಹೆಜ್ಜೆಗಳನ್ನು ಧನಕರ್ ಅನುಸರಿಸಿದ್ದಾರೆ. ಮೊದಲ ನಾಲ್ವರು ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ನಂತರ ರಾಷ್ಟ್ರಪತಿ ಹುದ್ದೆಯನ್ನು ವಹಿಸಿಕೊಳ್ಳಲು ರಾಜೀನಾಮೆ ನೀಡಿದರೆ, 2007ರ ರಾಷ್ಟ್ರಪತಿ ಚುನಾವಣೆಯಲ್ಲಿ ಸೋತ ನಂತರ ಶೇಖಾವತ್ ರಾಜೀನಾಮೆ ನೀಡಿದ್ದರು.
ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಮಧ್ಯಂತರ ರಾಜೀನಾಮೆ: ಮುಂದೇನು?


