ಭಾರತ ಸರ್ಕಾರವು ಅಂಗೀಕರಿಸಿದ ಕೃಷಿ ಮಸೂದೆಗಳು ಮಹತ್ವದ ಕೃಷಿ ಸುಧಾರಣೆಗಳನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು IMF ಹೇಳಿದೆ. ಆದರೆ ಈ ಹೊಸ ವ್ಯವಸ್ಥೆಗೆ ಪರಿವರ್ತನೆಯ ಸಮಯದಲ್ಲಿ ತೊಂದರೆಗೊಳಗಾದವರಿಗೆ ರಕ್ಷಿಸಲು ಸಾಮಾಜಿಕ ಸುರಕ್ಷತಾ ಜಾಲದ ಅಗತ್ಯವಿದೆ ಎಂದು ಐಎಂಎಫ್ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.
ಐಎಂಎಫ್ ಸಂವಹನ ನಿರ್ದೇಶಕ ಗೆರ್ರಿ ರೈಸ್ ವಾಷಿಂಗ್ಟನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ “ಈ ಕಾಯ್ದೆಗಳಿಂದ ರೈತರಿಗೆ ನೇರವಾಗಿ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಹೆಚ್ಚುವರಿ ಲಾಭವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಬೆಳವಣಿಗೆಗೆ ಸಹಕರಿಸುತ್ತದೆ” ಎಂದಿದ್ದಾರೆ.
ಆದರೂ ಈ ಹೊಸ ವ್ಯವಸ್ಥೆಗೆ ಪರಿವರ್ತನೆಯಾಗುವ ಸಮಯದಲ್ಲಿ ಒಂದಷ್ಟು ಜನರ ಮೇಲೆ ಪ್ರತಿಕೂಲಕ ಪರಿಣಾಮ ಬೀರಬಹುದು. ಅವರ ರಕ್ಷಣೆಗೆ ಸಾಮಾಜಿಕ ಜಾಲಗಳನ್ನು ಬಲಪಡಿಸಬೇಕು. ಉದ್ಯೋಗ ಮಾರುಕಟ್ಟೆಯು ಅವರನ್ನು ರಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.
ಇಂದು ಹೋರಾಟನಿರತ ರೈತರು ಮತ್ತು ಕೇಂದ್ರ ಸಚಿವರೊಂದಿಗೆ 9 ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅದಕ್ಕೂ ಮುನ್ನ ಐಎಂಎಫ್ ತನ್ನ ನಿಲುವನ್ನು ವ್ಯಕ್ತಪಡಿಸಿದೆ.
ಕಳೆದ 51 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇದುವರೆಗೂ ವಿಭಿನ್ನ ಹೋರಾಟಗಳನ್ನು ನಡೆಸಿರುವ ರೈತರು ಜನವರಿ 26ರ ಗಣರಾಜ್ಯೋತ್ಸವದಂದು ಕಿಸಾನ್-ಜವಾನ್ ಟ್ರ್ಯಾಕ್ಟರ್ ಪೆರೇಡ್ ನಡೆಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ


