ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಶುಕ್ರವಾರ (ಮಾ.28) ಬೆಳಿಗ್ಗೆ ನೀರು ಸ್ವೀಕರಿಸಿ ಉಪವಾಸ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಖಾನೌರಿ ಮತ್ತು ಶಂಭು ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸಲಾಗಿದೆ. ಎಲ್ಲಾ ನಿರ್ಬಂಧಿತ ರಸ್ತೆಗಳು ಮತ್ತು ಹೆದ್ದಾರಿಗಳನ್ನು ತೆರೆಯಲಾಗಿದೆ ಎಂದು ಪಂಜಾಬ್ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠಕ್ಕೆ ಮಾಹಿತಿ ನೀಡಿದ್ದಾರೆ.
ದಲ್ಲೆವಾಲ್ ಅವರ ಹೋರಾಟವನ್ನು ಶ್ಲಾಘಿಸಿದ ನ್ಯಾಯಪೀಠ, ಅವರು ಯಾವುದೇ ರಾಜಕೀಯ ಅಜೆಂಡಾ ಇಲ್ಲದ ನಿಜವಾದ ರೈತ ನಾಯಕ ಎಂದು ಶ್ಲಾಘಿಸಿರುವುದಾಗಿ ವರದಿಗಳು ಹೇಳಿವೆ.
“ರೈತರ ಸಮಸ್ಯೆಗಳನ್ನು ಪರಿಹರಿಸುವುದು ಕೆಲವು ಜನರಿಗೆ ಇಷ್ಟವಿಲ್ಲ ಎಂಬುದು ನಮಗೆ ಗೊತ್ತಿದೆ. ನಾವು ದಂತ ಗೋಪುರದಲ್ಲಿ ಕುಳಿತಿಲ್ಲ. ನಮಗೆ ಎಲ್ಲವೂ ತಿಳಿದಿದೆ” ಎಂದು ಹೇಳಿದ ಪೀಠ, ಪಂಜಾಬ್ ಮತ್ತು ಹರಿಯಾಣ ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ರೈತರ ಸಮಸ್ಯೆಗಳನ್ನು ಆಲಿಸಲು ಮತ್ತು ಪೂರಕ ಸ್ಥಿತಿಗತಿ ವರದಿ ಸಲ್ಲಿಸಲು ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು ನೀಡುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸದಿದ್ದಕ್ಕಾಗಿ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಕೋರ್ಟ್ ಕೈಬಿಟ್ಟಿದೆ.
ಮಾರ್ಚ್ 19ರಂದು, ಕೇಂದ್ರ ಸರ್ಕಾರದ ನಿಯೋಗದೊಂದಿಗೆ ಸಭೆ ನಡೆಸಿ ಹಿಂತಿರುಗುತ್ತಿದ್ದಾಗ ಸರ್ವಾನ್ ಸಿಂಗ್ ಪಂಧೇರ್ ಮತ್ತು ದಲ್ಲೆವಾಲ್ ಸೇರಿದಂತೆ ಹಲವು ರೈತ ನಾಯಕರನ್ನು ಪಂಜಾಬ್‌ನ ಮೊಹಾಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ನಂತರ, ಪೊಲೀಸರು ಶಂಭು ಮತ್ತು ಖಾನೌರಿ ಗಡಿಗಳಿಂದ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿ, ರೈತರನ್ನು ಅಲ್ಲಿಂದ ಕಳಿಸಿದ್ದಾರೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಶಂಭು, ಖಾನೌರಿ ಗಡಿಗಳಲ್ಲಿ ರೈತರು ಪ್ರತಿಭಟಿಸುತ್ತಿದ್ದರು.
ಕಳೆದ ವರ್ಷ ಫೆಬ್ರವರಿ 13ರಂದು ದೆಹಲಿಗೆ ರೈತರು ನಡೆಸುತ್ತಿದ್ದ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ, ಎಸ್‌ಕೆಎಂ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್‌ಗಳ ಅಡಿಯಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಬುಲ್ಡೋಜರ್ ನಿಂದ ರೋಶನ್ ಅಲಿ ಶಾ ಬಾಬಾ ಸಮಾಧಿ ನೆಲಸಮ ಮಾಡಿದ ಜಿಲ್ಲಾಡಳಿತ: ಇಲ್ಲಿಯವರೆಗೆ 550 ಸಮಾಧಿಗಳ ಧ್ವಂಸ!


