ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗೊಳಿಸುವ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ದೆಹಲಿ ಗಡಿಗಳ ಜೊತೆಗೆ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ರೈತರ ಬೃಹತ್ ಮಹಾಪಂಚಾಯತ್‌ಗಳು ನಡೆಯುತ್ತಿದ್ದು ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿವೆ. ಈಗ ಅದೇ ಮಾದರಿಯಲ್ಲಿ ರಾಜ್ಯದ ಸಮಾಜವಾದಿ ಹೋರಾಟದ ಜಿಲ್ಲೆ, ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗದಲ್ಲಿ ಮಾರ್ಚ್ 20 ರಂದು ಮೊದಲ ಬೃಹತ್ ‘ರೈತ ಮಹಾಪಂಚಾಯತ್’ ನಡೆಸಲು ವೇದಿಕೆ ಸಜ್ಜಾಗಿದೆ. ಅದೇ ರೀತಿಯಲ್ಲಿ ಮಾರ್ಚ್ 21 ರಂದು ಹಾವೇರಿ ಮತ್ತು ಮಾರ್ಚ್ 22 ರಂದು ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್ ನಡೆಸಲು ನಿರ್ಧರಿಸಲಾಗಿದೆ. ಎಲ್ಲಾ ರೈತ, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ನಿರ್ಣಯ ಕೈಗೊಂಡಿದ್ದಾರೆ.
ಶಿವಮೊಗ್ಗ ಮಹಾ ಪಂಚಾಯತ್‌ನ ಸಂಚಾಲಕರಾದ ಎಂ ಶ್ರೀಕಾಂತ್, ಸೂಡದ ಮಾಜಿ ಅಧ್ಯಕ್ಷರಾದ ಎನ್ ರಮೇಶ್, ಸ್ವರಾಜ್ ಇಂಡಿಯಾದ ವಕ್ತಾರರಾದ ಕೆ ಪಿ ಶ್ರೀಪಾಲ್, ದ.ಸ.ಸಂ (ಅಂಬೇಡ್ಕರ್ ವಾದ) ದ ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ ಹೆಚ್ ಹಾಲೇಶಪ್ಪ, ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್. ಸಿ ಯೋಗೇಶ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, ಸುದ್ದಿ ಸಾಗರದ ಸಂಪಾದಕರಾದ ಚಾರ್ವಾಕ ರಾಘವೇಂದ್ರ, ದಸಸಂ ದ ಜಿಲ್ಲಾಸಂಚಾಲಕರಾದ ದೂಗೂರು ಪರಮೇಶ್ವರ್‌ರವರು ಈಗಾಗಲೇ ದೆಹಲಿಯ ಹೋರಾಟದ ಸ್ಥಳಗಳಿಗೆ ತಲುಪಿದ್ದಾರೆ. ಅಲ್ಲಿನ ಸಂಯುಕ್ತ ಕಿಸಾನ್ ಮೋರ್ಚಾದ ಡಾ. ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ರವರಿಗೆ ಶಿವಮೊಗ್ಗದ ರೈತ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.

ಕರ್ನಾಟಕದಲ್ಲಿ ಮೂರು ದಿನ ನಡೆಯುವ ಈ ಮೂರು ಮಹಾಪಂಚಾಯತ್‌ಗಳಿಲ್ಲಿ ಭಾಗವಹಿಸಲು ದೆಹಲಿ ಹೋರಾಟದ ರೈತ ಮುಖಂಡರುಗಳಾದ ಡಾ. ದರ್ಶನ್ ಪಾಲ್, ಯೋಗೇಂದ್ರ ಯಾದವ್, ಜಗಮೋಹನ್ ಸಿಂಗ್, ರಾಕೇಶ್ ಟಿಕಾಯತ್‌ರವರು ಒಪ್ಪಿದ್ದಾರೆ ಎಂದು ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್ ತಿಳಿಸಿದ್ದಾರೆ.
ಈ ರೈತ ಮಹಾಪಂಚಾಯತ್‌ಗಳಲ್ಲಿ ಕರ್ನಾಟಕದ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ನೂರಾರು ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಎಲ್ಲಾ ರೈತ ಮುಖಂಡರು, ದಲಿತ ಮುಖಂಡರು, ಎಡಪಕ್ಷಗಳ ಮುಖಂಡರು, ಕಾರ್ಮಿಕ ಮುಖಂಡರು, ಮಹಿಳಾ ಮುಖಂಡರು, ಯುವಜನರು ಮಹಾಪಂಚಾಯತ್‌ನಲ್ಲಿ ಮಾತನಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದನ್ನೂ ಓದಿ; ಜಾಬ್‌ಕಿ ಬಾತ್, ಕಿಸಾನ್ ಕಿ ಬಾತ್ ಬೇಕು: ಮೋದಿ ವಿರುದ್ಧ ಸಿಡಿದೆದ್ದ ಯುವಜನರು – ಮನ್‌ಕಿ ಬಾತ್‌ಗೆ ಡಿಸ್‌ಲೈಕ್‌ಗಳ ಸುರಿಮಳೆ


