Homeಮುಖಪುಟಕೃಷಿ ಮಸೂದೆಗಳ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ: ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆ

ಕೃಷಿ ಮಸೂದೆಗಳ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ: ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆ

ದಲ್ಲಾಳಿಗಳನ್ನು ತಪ್ಪಿಸಿ ಕಾರ್ಪೊರೇಟ್ ಕೈಗೆ ಕೊಟ್ಟರೆ ರೈತರು ಉಳಿಯುವರೆ? ಕಾರ್ಪೊರೇಟ್ ಕಂಪನಿಗಳು ಸಹ ದೊಡ್ಡ ದಲ್ಲಾಳಿಗಳಲ್ಲವೇ? ಎಂದು ರೈತರು ಪ್ರಶ್ನಿಸಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳು ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ರಾಜ್ಯಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸುವ ಮೂಲಕ ಈ ತಿದ್ದುಪಡಿಗಳನ್ನು ವಾಪಸ್ ಪಡೆಯಿರಿ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಒಪ್ಪುವುದಿಲ್ಲ, ಕಾರ್ಪೊರೇಟ್ ಕಂಪನಿಗಳ ಪರ ನಿಂತಿರುವ ಕೇಂದ್ರ ರಾಜ್ಯ ಸರ್ಕಾರಗಳಿಗೆ ಧಿಕ್ಕಾರ ಎಂಬ ಘೋಷಣೆಗಳು ಕೇಳಿಬಂದವು.

ದೇಶದಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ.

Posted by Naanu Gauri on Thursday, September 24, 2020

ಕೈಯಲ್ಲಿ ಚಾವಟಿ ಕೋಲುಗಳನ್ನು ಹಿಡಿದಿದ್ದ ರೈತರು ರಸ್ತೆಯಲ್ಲಿಯೇ ಉರುಳುಸೇವೆ ಮಾಡುವ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಧಾನಿ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ರೈತರ ಜೊತೆ ಚರ್ಚೆ ನಡೆಸದೇ ಏಕಾಏಕಿ ತಿದ್ದುಪಡಿಗಳನ್ನು ತರುತ್ತಿದ್ದಾರೆ. ಮಂಡ್ಯ ತಾಲ್ಲೂಕಿನಿಂದ ನಾನು ಇಂದು ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರೆ ನಮ್ಮ ಕಷ್ಟ ಎಷ್ಟಿರಬೇಡ ಎಂಬುದನ್ನು ನೀವೇ ಯೋಚಿಸಿ. ಸರ್ಕಾರ ಈ ನಿರ್ಧಾರಗಳಿಂದ ಹಿಂದೆ ಸರಿಯದಿದ್ದಲ್ಲಿ ಸೆಪ್ಟಂಬರ್ 28ಕ್ಕೆ ಬಂದ್ ನಡೆಸುತ್ತೇವೆ. ನಮ್ಮ ಮನೆಯಲ್ಲಿರುವ ದನಕರು, ಕೋಳಿಗಳನ್ನು ಬೆಂಗಳೂರಿಗೆ ತಂದು ಪ್ರತಿಭಟನೆ ನಡೆಸುತ್ತೇವೆ” ಎಂದು ರೈತರು ಕಿಡಿಕಾರಿದ್ದಾರೆ.

ಕೊರೊನಾ ಬಂದಿದೆಯೆಂದು ಸರ್ಕಾರ ನಮ್ಮನ್ನು ಮನೆಯಲ್ಲಿರಲು ಹೇಳಿತು. ಆದರೆ ಅದು ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಅಸೆಂಬ್ಲಿಯಲ್ಲಿ ಚರ್ಚಿಸದೇ ಅಂಗೀಕರಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಈ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಿದೆ. ದಲ್ಲಾಳಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಹಾಗಾಗಿ ಈ ತಿದ್ದುಪಡಿ ಎಂದು ಸರ್ಕಾರಗಳು ಹೇಳುತ್ತಿವೆ. ಕೈ ಕೆಸರಾದರೆ ಕೈ ತೊಳೆದುಕೊಳ್ಳಬೇಕೆ ಹೊರತು ಕೈ ಕತ್ತರಿಸಬಾರದು ಅಲ್ಲವೇ? ದಲ್ಲಾಳಿಗಳನ್ನು ತಪ್ಪಿಸಿ ಕಾರ್ಪೊರೇಟ್ ಕೈಗೆ ಕೊಟ್ಟರೆ ರೈತರು ಉಳಿಯುವರೆ? ಕಾರ್ಪೊರೇಟ್ ಕಂಪನಿಗಳು ಸಹ ದೊಡ್ಡ ದಲ್ಲಾಳಿಗಳಲ್ಲವೇ? ಎಂದು ರೈತರು ಪ್ರಶ್ನಿಸಿದ್ದಾರೆ.

ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಪಿಎಂ, ಸಿಐಟಿಯು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಂತಾದ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಎಲ್ಲಾ ಪ್ರತಿಭಟನಕಾರರನ್ನು ಬಂಧಿಸಿದ್ದಾರೆ.

ಶಿವಮೊಗ್ಗದಲ್ಲಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ.. ಭೂಸ್ವಾಧೀನ ಕಾಯ್ದೆಗೆ ಭಾರೀ ವಿರೋಧ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ…

Posted by Naanu Gauri on Thursday, September 24, 2020

ಶಿವಮೊಗ್ಗದಲ್ಲಿ ರೈತ ವಿರೋಧಿ, ದಲಿತ ವಿರೋಧಿ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ರಸ್ತೆ ತಡೆ ಚಳುವಳಿ ನಡೆಯಿತು. ಶಿವಮೊಗ್ಗದ ಹೊನ್ನಾಳಿ ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪ ಹಾಗೂ ಕರ್ನಾಟಕ ಜನಶಕ್ತಿಯ ರಾಜ್ಯ ಮುಖಂಡರಾದ ಕೆ.ಎಲ್ ಅಶೋಕ್ ರವರು ಪಾಲ್ಗೊಂಡಿದ್ದರು‌.

ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಎದುರು ರೈತಸಂಘಟನೆಗಳಿಂದ ಬೃಹತ್ ಹೋರಾಟ ಮತ್ತು ರಸ್ತೆ ತಡೆ ನಡೆಸಲಾಯಿತು.


ಇದನ್ನೂ ಓದಿ; ಸೆ. 26ಕ್ಕೆ ವಿಧಾನಸಭಾ ಅಧಿವೇಶನ ಅಂತ್ಯ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...