“ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ರೈತರ ಬೆಂಬಲವಿಲ್ಲ. ಪ್ರತಿಭಟನಾಕಾರರು ರೈತ ಸಮುದಾಯದ ನಿಜವಾದ ಭಾವನೆಗಳನ್ನು ಪ್ರತಿನಿಧಿಸುವುದಿಲ್ಲ” ಎಂದು ಮಧ್ಯಪ್ರದೇಶ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ಹೇಳಿದ್ದಾರೆ.
ರೈತ ನಾಯಕ ಎಂದು ಹೇಳಿಕೊಳ್ಳುವ ಸಚಿವ ಪಟೇಲ್, “ರೈತ ನಾಯಕನಾದ ನನಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿದೆ. ಕೆಲವರು ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ರೈತರು ಪ್ರತಿಭಟನಾಕಾರರೊಂದಿಗೆ ಇಲ್ಲ” ಎಂದು ಹೇಳಿದ ಪಟೇಲ್, ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಅವರು ಸಾಕ್ಷಿಯಾಗಿ ತೋರಿಸಿದರು, ರೈತರು ಹೋರಾಟಗಳಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ನಿರಂತರವಾಗಿ ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಸವಲತ್ತುಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಮಧ್ಯೆ, ಪಂಜಾಬ್‌ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಾಗಿ ಕಾನೂನು ಖಾತರಿ, ಸಾಲ ಮನ್ನಾ ಮತ್ತು ಕೃಷಿ ಸುಧಾರಣೆಗಳಿಗೆ ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಫೆಬ್ರವರಿ 13, 2023 ರಂದು, ಭದ್ರತಾ ಪಡೆಗಳು ರೈತರನ್ನು ದೆಹಲಿಗೆ ಹೋಗದಂತೆ ತಡೆದು, ಪಂಜಾಬ್‌ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಬಿಡಾರ ಹೂಡಿದ್ದಾರೆ. ಶನಿವಾರ, ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಅಶ್ರುವಾಯು ಶೆಲ್‌ಗಳೊಂದಿಗೆ ಚದುರಿಸಿದರು.
ಇದನ್ನೂ ಓದಿ; ಇಂಡಿಯಾ ಬಣದ ನಾಯಕತ್ವವನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳಬೇಕು: ಒಮರ್ ಅಬ್ದುಲ್ಲಾ ಸಲಹೆ


