ರೈತರ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಸಂಭವಿಸಿದ ನವರೀತ್ ಸಿಂಗ್ ಅವರ ಸಾವಿನ ಕುರಿತ ದಿ ವೈರ್ ವರದಿಯನ್ನು ಟ್ವೀಟ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಭಾನುವಾರ ರಾಂಪುರ್ ಜಿಲ್ಲೆಯಲ್ಲಿ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವರದರಾಜನ್ ಶನಿವಾರ ದಿ ವೈರ್‌ನ ವರದಿಯೊಂದನ್ನು ಟ್ವೀಟ್ ಮಾಡಿದ್ದು, ಅದರ ಪ್ರಕಾರ, ಸಿಂಗ್ ಕುಟುಂಬವು ತನ್ನ ಟ್ರ್ಯಾಕ್ಟರ್ ಪಲ್ಟಿಯಾಗಿರುವುದರಿಂದ ಪ್ರತಿಭಟನಾಕಾರ ಸಾವನ್ನಪ್ಪಿದ್ದಾನೆ ಎಂಬ ದೆಹಲಿ ಪೊಲೀಸರ ಹೇಳಿಕೆಗೆ ತಕರಾರು ತೆಗೆದಿದೆ.
‘ಗುಂಡು ತಗುಲಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ನವರೀತ್‌ಸಿಂಗ್ ಚಾಲನೆ ಮಾಡಲಾಗದೇ ಇದ್ದುದರಿಂದ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಇದರಿಂದ ತಲೆಗೆ ಗಾಯವಾಗಿ ಮೃತನಾಗಿದ್ದಾನೆ’ ಎಂದು ಕುಟುಂಬವು ಆರೋಪಿಸಿದೆ.
ಸಿಂಗ್ ಅವರ ಅಜ್ಜ ಕೊಟ್ಟ ಹೇಳಿಕೆಯನ್ನು ವರದರಾಜನ್ ಉಲ್ಲೇಖಿಸಿದ್ದಾರೆ, “ಶವಪರೀಕ್ಷೆಯ ಭಾಗವಾಗಿದ್ದ ವೈದ್ಯರೊಬ್ಬರು ಗುಂಡಿನ ಗಾಯಗಳಾಗಿವೆ ಎಂದು ಹೇಳಿದರು. ಆದರೆ ನನ್ನ ಕೈಗಳನ್ನು ಕಟ್ಟಲಾಗಿದೆ ಎಂದು ಆ ವೈದ್ಯರು ತಿಳಿಸಿದರು” ಎಂದು ಮೃತನ ಅಜ್ಜ ಹೇಳಿರುವುದಾಗಿ ವೈರ್ ವರದಿ ತಿಳಿಸಿದೆ.
ರಾಂಪುರ್ ನಿವಾಸಿ ಸಂಜು ತುರಾಹಾ ಅವರ ದೂರಿನ ಆಧಾರದ ಮೇಲೆ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ (ಪ್ರಚೋದನೆಗಳು, ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ) ಮತ್ತು 505 (2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ಶನಿವಾರದ ವರದರಾಜನ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿದೆ. ಟ್ವೀಟ್‌ನಲ್ಲಿ ಪ್ರಸ್ತಾಪಿತ ವರದಿಯನ್ನು, ಶವಪರೀಕ್ಷೆ ವೈದ್ಯರಿಂದಲೇ ಹೇಳಲಾಗಿದೆ ಎಂದು ತೋರುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ, ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.
“ಇದರ ಪರಿಣಾಮವಾಗಿ, ರಾಂಪುರದ ಜನರು ಅಸಮಾಧಾನಗೊಂಡಿದ್ದಾರೆ ಮತ್ತು ಉದ್ವಿಗ್ನತೆ ಹೆಚ್ಚಾಗಿದೆ” ಎಂದು ಎಫ್‌ಐಆರ್ ಹೇಳಿದೆ. “ಈ ಪೋಸ್ಟ್ ಖಂಡಿತವಾಗಿಯೂ ಸಾರ್ವಜನಿಕರಿಗೆ ಹಾನಿ ಮಾಡುವ ಮೂಲಕ ಹಿಂಸೆಯನ್ನು ಪ್ರಚೋದಿಸುವ ಪಿತೂರಿಯ ಒಂದು ಭಾಗವೆಂದು ತೋರುತ್ತದೆ’ ಎಂದು ವಿವರಿಸಲಾಗಿದೆ.
ನವರೀತ್ ಸಿಂಗ್ ಅವರ ಮರಣೋತ್ತರ ಪರೀಕ್ಷೆಯನ್ನು ಮೂವರು ಪ್ಯಾನಲ್ ವೈದ್ಯರು ನಡೆಸಿದ್ದಾರೆ ಮತ್ತು ಅದನ್ನು ಸರಿಯಾಗಿ ವಿಡಿಯೋಗ್ರಾಫ್ ಮಾಡಲಾಗಿದೆ ಎಂದು ಎಫ್‌ಐಆರ್ ಪ್ರತಿಪಾದಿಸಿದೆ. ದಿ ವೈರ್‌ನ ವರದಿಯಲ್ಲಿ ಪ್ರತಿಪಾದಿಸಲ್ಪಟ್ಟಂತೆ, ಮೂವರು ವೈದ್ಯರಲ್ಲಿ ಯಾರೂ ಅಂತಹ ಯಾವುದೇ ಹೇಳಿಕೆಯನ್ನು ಯಾರಿಗೂ ನೀಡಿದ್ದನ್ನು ನಿರಾಕರಿಸಿದ್ದಾರೆ ಎಂದು ಎಫ್‌ಐಆರ್ ಹೇಳುತ್ತದೆ.
“ಇದರ ಹೊರತಾಗಿಯೂ, ಟ್ವೀಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ” ಎಂದು ಎಫ್‌ಐಆರ್ ಆಕ್ಷೇಪಿಸಿದೆ. “ಸರಿಯಾದ ಸಂಗತಿಗಳನ್ನು ತಿಳಿಯದೆ ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮ- ಟ್ವಿಟ್ಟರ್ ಮೂಲಕ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ” ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಉದ್ದೇಶವನ್ನು ಟ್ವೀಟ್ ಹೊಂದಿದೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕರನ್ನು “ಪ್ರಚೋದಿಸುವ” ಸಲುವಾಗಿ, ಗುಂಡೇಟಿನಿಂದ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಹೇಳಲು ಸರ್ಕಾರಿ ವೈದ್ಯಕೀಯ ಅಧಿಕಾರಿಯನ್ನು ಪೋಸ್ಟ್ ತಪ್ಪಾಗಿ ಉಲ್ಲೇಖಿಸಿದೆ ಎಂದು ತಿಳಿಸಲಾಗಿದೆ.
ಈ ವಿಷಯದ ಬಗ್ಗೆ ಉತ್ತರ ಪ್ರದೇಶದಲ್ಲಿ ಕಳೆದ ವಾರದಲ್ಲಿ ಪತ್ರಕರ್ತರು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ ಎರಡನೆ ಪ್ರಕರಣವಿದು. ಮಂಗಳವಾರ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಾವಿಗೀಡಾದ ನವರೀತ್ ಸಿಂಗ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದ ಆರು ಜನ ಪತ್ರಕರ್ತರು ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಆರರಲ್ಲಿ ಮೃಣಾಲ್ ಪಾಂಡೆ, ರಾಜ್‌ದೀಪ್ ಸರ್ದೇಸಾಯಿ, ವಿನೋದ್ ಜೋಸ್, ಜಾಫರ್ ಆಘಾ, ಪರೇಶ್ ನಾಥ್ ಮತ್ತು ಅನಂತ್ ನಾಥ್ ಸೇರಿದ್ದಾರೆ.
ಎಫ್‌ಐಆರ್‌ಗೂ ಮೊದಲು ಡಿಸಿ ಟ್ವೀಟ್
ವರದರಾಜನ್ ವಿರುದ್ಧದ ಎಫ್‌ಐಆರ್‌ಗೆ ಮೊದಲು ದಿ ವೈರ್‌ನ ಸಂಸ್ಥಾಪಕ ಸಂಪಾದಕ ಮತ್ತು ರಾಂಪುರ್ ಜಿಲ್ಲಾಧಿಕಾರಿಯ ಅಧಿಕೃತ ಟ್ವಿಟರ್ ಖಾತೆಯ ನಡುವೆ ಟ್ವೀಟ್ ಸಂಭಾಷಣೆ ನಡೆದಿದೆ.
ಟ್ವಿಟರ್‌ನಲ್ಲಿ ಇನ್ನೂ ಇರುವ ವರದರಾಜನ್ ಅವರ ಮೂಲ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ರಾಂಪುರ್ ಜಿಲ್ಲಾಧಿಕಾರಿ ಅವರ ಅಧಿಕೃತ ಖಾತೆಯು ಪ್ರತಿಕ್ರಿಯಿಸಿ, “ದಯವಿಟ್ಟು ನಾವು ನಿಮಗೆ ಸತ್ಯಕ್ಕೆ ಮಾತ್ರ ಅಂಟಿಕೊಳ್ಳಬೇಕೆಂದು ವಿನಂತಿಸುತ್ತೇವೆ. ನಮ್ಮ ವಿನಂತಿಗೆ ತಮ್ಮ ಪ್ರತಿಕ್ರಿಯೆಯನ್ನು ನಿಮ್ಮಿಂದ ಪ್ರಾಮಾಣಿಕವಾಗಿ ನಿರೀಕ್ಷಿಸುತ್ತೇವೆ. ಧನ್ಯವಾದ.” ಈ ಟ್ವೀಟ್ ಜೊತೆಗೆ ಪೋಸ್ಟ್ ಮಾರ್ಟಮ್ ನಡೆಸಿದ ಮೂವರು ಸರ್ಕಾರಿ ವೈದ್ಯಕೀಯ ಅಧಿಕಾರಿಗಳು ಹೇಳಿಕೆ ನೀಡಿದ್ದನ್ನು ನಿರಾಕರಿಸಿದ ಟಿಪ್ಪಣಿ ಲಗತ್ತಿಸಲಾಗಿದೆ. ಅವರಲ್ಲಿ ಯಾರೂ ಮಾಧ್ಯಮದ ಯಾರೊಂದಿಗೂ ಮಾತನಾಡಿಲ್ಲ ಮತ್ತು ಶವಪರೀಕ್ಷೆಯ ಬಗ್ಗೆ ಯಾವುದೇ ಪತ್ರಕರ್ತರಿಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ವರದರಾಜನ್ ಅವರು, ಮೂವರು ವೈದ್ಯರ ಅಧಿಕೃತ ಘೋಷಣೆಯನ್ನು ಸೇರಿಸಿ ದಿ ವೈರ್ ವರದಿಯನ್ನು ಅಪ್ಡೇಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಜಿಲ್ಲಾಧಿಕಾರಿ, “ನಿಮ್ಮ ಸ್ಟೋರಿ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ಇದು ಈಗಾಗಲೇ ಇಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಯಾರು ಜವಾಬ್ದಾರಿ?’ ಎಫ್‌ಐಆರ್ ದಾಖಲಾದ ಗಂಟೆಗಳ ನಂತರ ವರದರಾಜ್‌ನ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ಭಾನುವಾರ ಬೆಳಿಗ್ಗೆ ಎಫ್‌ಐಆರ್‌ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ವರದರಾಜನ್ ಇದನ್ನು “ದುರುದ್ದೇಶಪೂರಿತ ಕಾನೂನು ಕ್ರಮ” ಎಂದು ಕರೆದಿದ್ದಾರೆ. “ಈ ದುರುದ್ದೇಶಪೂರಿತ ಕಾನೂನು ಕ್ರಮಕ್ಕಾಗಿ ಐಪಿಸಿಯ ಯಾವ ನಿಬಂಧನೆ ಅವಕಾಶ ಮಾಡಿಕೊಡುತ್ತದೆ? ಟ್ರ‍್ಯಾಕ್ಟರ್ ಪೆರೇಡ್‌ನಲ್ಲಿ ಮೃತಪಟ್ಟ ರೈತನ ಅಜ್ಜ ದಾಖಲೆಯಲ್ಲಿ ಏನು ಹೇಳಿದ್ದಾರೆಂಬುದನ್ನು ಟ್ವೀಟ್ ಮಾಡಿದ್ದಕ್ಕಾಗಿ ಯುಪಿ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ! ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಟಿಕಾಯತ್ ಮನವಿಗೆ ಭಾರೀ ಬೆಂಬಲ: ರೈತರೊಟ್ಟಿಗೆ ಹರಿದುಬರುತ್ತಿರುವ ಸಾವಿರಾರು ಯುವಜನರು


