ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದ ಭೂ ಸ್ವಾಧೀನ ವಿರೋಧಿ ಹೋರಾಟದ ಸ್ಥಳಕ್ಕೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಭಾನುವಾರ (ಜು.6) ಭೇಟಿ ನೀಡಿದರು. ಸ್ಥಳೀಯ ರೈತ ಮುಖಂಡರು ಮತ್ತು ಹೋರಾಟಗಾರರು ಅವರನ್ನು ಹೂಗುಚ್ಚಿ ನೀಡಿ ಸ್ವಾಗತಿಸಿದರು.
ದಲ್ಲೆವಾಲ್ ಭಾರತೀಯ ಕಿಸಾನ್ ಒಕ್ಕೂಟದ (ಏಕ್ತಾ ಸಿಧುಪುರ) ಅಧ್ಯಕ್ಷರು ಮತ್ತು 2022ರಲ್ಲಿ ಮೂಲ ಸಂಯುಕ್ತ ಕಿಸಾನ್ ಮೋರ್ಚಾದಿಂದ ಹೊರಬಂದ ನಂತರ ರಚಿಸಲಾದ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಪ್ರಮುಖ ವ್ಯಕ್ತಿಯಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಲವು ರೈತ ಹೋರಾಟಗಳನ್ನು ಮುನ್ನಡೆಸಿರುವ ದಲ್ಲೆವಾಲ್ ಅವರು, ಕಳೆದ ನವೆಂಬರ್ 26, 2024ರಿಂದ ಮಾರ್ಚ್ 2025ರವರೆಗೆ ರೈತರ ಬೆಲೆಗೆ ಎಂಎಸ್‌ಪಿ ನೀಡಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರ ಐತಿಹಾಸಿಕ ಹೋರಾಟ ಭಾನುವಾರಕ್ಕೆ 1,189 ದಿನಗಳನ್ನು ಪೂರೈಸಿದೆ. ಜುಲೈ 4ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ನಾಡ ಉಳಿಸಿ ಸಮಾವೇಶ’ದ ಬಳಿಕ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರುವ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ತೀವ್ರಗೊಳಿಸಲು ರೈತರು, ಹೋರಾಟಗಾರರು ತೀರ್ಮಾನಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಜೂನ್ 27ರಿಂದ ಆರಂಭಿಸಿದ ‘ಭೂಮಿ ಸತ್ಯಾಗ್ರಹ’ ಕೂಡ ಮುಂದುವರಿಯಲಿದೆ ಎಂದು ನಾಡ ಉಳಿಸಿ ಸಮಾವೇಶದಲ್ಲಿ ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದ್ದಾರೆ.
ಜುಲೈ 4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಜೊತೆ ನಡೆದ ರೈತರು, ಹೋರಾಟಗಾರರ ಸಭೆ ಅಪೂರ್ಣಗೊಂಡಿದೆ. ಭೂ ಸ್ವಾಧೀನ ಸಂಪೂರ್ಣವಾಗಿ ಕೈ ಬಿಡಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಈ ಬಗ್ಗೆ ತಮ್ಮ ನಿಲುವು ತಿಳಿಸಲು ಸಿಎಂ 10 ದಿನಗಳ ಸಮಯ ಕೇಳಿದ್ದಾರೆ.
ಜುಲೈ 15ರಂದು ಮತ್ತೆ ಸಭೆ ನಡೆಯಲಿದೆ. ಅಂದು ಭೂ ಸ್ವಾಧೀನ ಕೈ ಬಿಡುವ ಅಂತಿಮ ತೀರ್ಮಾನ ಪ್ರಕಟಿಸಬೇಕು ಎಂದು ರೈತರು, ಹೋರಾಟಗಾರರು ಸಿಎಂಗೆ ಹೇಳಿ ಬಂದಿದ್ದಾರೆ. ಒಂದು ವೇಳೆ ಜುಲೈ 15ರ ಸಭೆಯಲ್ಲಿ ರೈತರ ವಿರುದ್ಧ ತೀರ್ಮಾನ ಬಂದರೆ, ಹೋರಾಟ ತೀವ್ರಗೊಳಿಸುತ್ತೇವೆಯೇ ಹೊರತು, ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ದಲಿತ ಕುಟುಂಬದ ಮೇಲೆ ದೌರ್ಜನ್ಯ: ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಆರೋಪ