ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್‌ನ ಲೂಧಿಯಾನದ ಗ್ರಾಮಗಳಲ್ಲಿ ತಾವಿರುವಲ್ಲಿಯೇ ಮೇ 26 ರಂದು `ಕರಾಳ ದಿನ’ವನ್ನು ಆಚರಿಸಿದ್ದ ರೈತರು ಇದೀಗ ಗಡಿಗಳತ್ತ ಪಯಣ ಬೆಳೆಸಿದ್ದಾರೆ. ನಾಟಿ ಆರಂಭವಾಗುವ ಮೊದಲೇ ರೈತ ಹೋರಾಟವನ್ನು ಬಲಗೊಳಿಸಲು ಪಂಜಾಬ್‌ನ ವಿವಿಧ ಭಾಗಗಳಿಂದ ರೈತರು ದೆಹಲಿ ಗಡಿಗಳತ್ತ ಹೊರಟಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಬುಧವಾರ ಮುಂಜಾನೆ ನೂರಾರು ರೈತರನ್ನು ಹೊತ್ತ ಸುಮಾರು 125ಕ್ಕೂ ಹೆಚ್ಚು ವಾಹನಗಳು ಮುಖ್ಯವಾಗಿ ಲೂಧಿಯಾನ ಜಿಲ್ಲಯ ಜಾಗ್ರಾನ್, ಸುಧಾಅರ್, ಸಿಧ್ವಾನ್ ಬೆಟ್, ರಾಯ್‌ಕೋಟ್ ಮತ್ತು ಹಂಬ್ರನ್‌ಗಳಿಂದ ಸಿಂಘು ಮತ್ತು ಟಿಕ್ರಿ ಹೋರಾಟದ ಗಡಿಗಳತ್ತ ಹೊರಟಿದ್ದಾರೆ
`ಭಾರತೀಯ ಕಿಸಾನ್ ಯೂನಿಯನ್ (ಡಕೊಂಡಾ) ಸಂಘಟನೆಯ ಬ್ಯಾನರ್‌ನೊಂದಿಗೆ ಸುಮಾರು 700 ರೈತರು ವಾಹನಗಳ ಮೂಲಕ ದೆಹಲಿ ಗಡಿಗಳಿಗೆ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋರಾಟವನ್ನು ಸೇರಿಕೊಳ್ಳಲಿದ್ದಾರೆ. ಗ್ರಾಮಗಳಲ್ಲಿ ನಡೆಯುತ್ತಿರುವ ಹೋರಾಟವು ಜೂನ್ 10ರವರೆಗೆ ಮುಂದುವರೆಯಲಿದೆ. ನಂತರ ರೈತರು ಭತ್ತದ ನಾಟಿ ಮಾಡುವತ್ತ ಗಮನಹರಿಸಬೇಕಾಗಬಹುದು ಎಂದು ರೈತ ಹೋರಾಟವನ್ನು ಬೆಂಬಲಿಸುವ ಇಕ್ವಿಂಲಾಬಿ ಕೇಂದ್ರ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಕಮಲ್‌ಜಿತ್ ಖನ್ನಾ ತಿಳಿಸಿದರು.
ಬಿಕೆಯು ಡಕೊಂಡಾ ಜೊತೆಯಲ್ಲಿ ಕೀರ್ತಿ ಕಿಸಾನ್ ಯೂನಿಯನ್ ಹಾಗೂ ಬಿಕೆಯು (ಉಗ್ರಹಾನ್) ಸಂಘಟನೆಯ ಸದಸ್ಯರು ಹೋರಾಟದ ಗಡಿಗಳಿಗೆ ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ರೈತರೊಂದಿಗೆ ಬಿಕೆಯು ಡಕೊಂಡ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮೊಹಿಂದರ್ ಸಿಂಗ್, ಜಿಲ್ಲಾ ಕಾರ್ಯದರ್ಶಿ ಇಂದರ್‌ಜಿತ್ ಸಿಂಗ್ ಹಾಗೂ ಮಾಧ್ಯಮ ಕಾರ್ಯದರ್ಶಸಿ ಗುರ್ಪ್ರೀತ್ ಸಿಂಗ್ ಅವರು ಹೋರಾಟದಲ್ಲಿ ಭಾಗವಹಿಸಲಿದ್ದು, ರೈತರು ಹತ್ತು ದಿನಗಳ ಕಾಲ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ರೈತ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದಿದ್ದಾರೆ.
ಬಿಕೆಯು ಲಖೋವಾಲ್ ಪ್ರದೇಶದ ಪ್ರಧಾನ ಕಾರ್ಯದರ್ಶಿ ಹರೀಂದರ್ ಸಿಂಗ್ ಲಖೋವಾಲ್ ಅವರ ಪ್ರಕಾರ, `ರಾಜ್ಯದ ವಿವಿಧ ಜೆಲ್ಲಿಗಳ ಸುಮಾರು 80-100 ರೈತರು ಮತ್ತು ಕೃಷಿ ಕಾರ್ಮಿಕರು ಬುಧವಾರ ದೆಹಲಿ ಗಡಿಗಳಿಗೆ ಹೋಗುತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ನಮ್ಮ ಹೆಚ್ಚಿನ ಸದಸ್ಯರು ಗಡಿಗಳಲ್ಲಿರುವ ಪ್ರತಿಭಟನಾಕಾರರನ್ನು ಸೇರುವ ನಿರೀಕ್ಷೆಯಿದೆ’ ಎಂದರು.
ಲೂಧಿಯಾನದ ಕೋಕ್ರಾನ್ ತಕ್ರಾನ್ ಗ್ರಾಮದ ರೈತ ರವೀಂದರ್ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಹೋಗುತ್ತಿರುವುದರ ಬಗ್ಗೆ ಮಾತನಾಡಿ, ಕಡು ಬಿಸಿಲಿನ ನಡುವೆಯೂ ನಾವು ಹೋರಾಟದ ಗಡಿಗಳಲ್ಲಿ ಉಳಿದುಕೊಳ್ಳಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಭತ್ತದ ನಾಟಿ ನಂತರ ಇನ್ನು ಹೆಚ್ಚು ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗವಹಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ 6 ತಿಂಗಳು ಪೂರೈಸಿರುವ ರೈತ ಹೋರಾಟ ತನ್ನ ಕಾವು ಕಳೆದುಕೊಂಡಿಲ್ಲ. ಬದಲಿಗೆ ಮತ್ತಷ್ಟು ಬಲಶಾಲಿಯಾಗುತ್ತಿದೆ. ಜೂನ್ 05 ರಂದು ಗಡಿಗಳಲ್ಲಿ ಸುಗ್ರಿವಾಜ್ಞೆಗಳಿಗೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಂಪೂರ್ಣ ಕ್ರಾಂತಿ ದಿವಸ್ ಆಚರಿಸಲು ಕರೆ ನೀಡಿದ್ದಾರೆ.
ಕೃಪೆ: ಅನ್ನದ ಋಣ
ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟ ತಾಳಲಾರದೇ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ


