ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 41 ನೇ ದಿನಕ್ಕೆ ಕಾಲಿಟ್ಟಿದೆ. ರೈತರೊಂದಿಗೆ ನಡೆಸಿದ ಏಳನೇ ಸುತ್ತಿನ ಮಾತುಕತೆಯು ವಿಫಲವಾಗಿದೆ. ಒಕ್ಕೂಟ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಎಲ್ಲರ ಚಿತ್ರ ಸುಪ್ರೀಂ ಕೋರ್ಟ್‌ನತ್ತ ತಿರುಗಿದೆ.
ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಹಾಗೂ ಅದಕ್ಕೆ ಸಂಬಂಧಿಸಿ ಒಟ್ಟು ಎಂಟು ಅರ್ಜಿಗಳು ಸಲ್ಲಿಕೆಯಾಗಿದೆ. ಮಂಗಳವಾರ(ಇಂದು) ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್ ಅರ್ಜಿಗಳಲ್ಲಿ ರೈತ ಸಂಘಟನೆಗಳನ್ನು ಕೂಡಾ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಹೇಳಿತ್ತು. ಆದರೆ ರೈತ ಸಂಘಟನೆಗಳು ಇದನ್ನು ನಿರಾಕರಿಸಿದ್ದು, ’ನಮಗೆ ಕಾನೂನು ಪರಿಹಾರ ಬೇಕಿಲ್ಲ, ಸರ್ಕಾರದಿಂದ ಪರಿಹಾರ ಬೇಕಿದೆ’ ಎಂದು ಹೇಳಿದ್ದವು.
ಇದನ್ನೂ ಓದಿ: ರೈತ ಹೋರಾಟ: 7 ನೇ ಸುತ್ತಿನ ಮಾತುಕತೆ ವಿಫಲ – ಜನವರಿ 8 ಕ್ಕೆ ಮತ್ತೊಂದು ಸಭೆ

ರೈತರು ಪ್ರತಿಭಟನೆ ನಡೆಸಿದ ದಿನದಿಂದಲೂ ಅವರೊಂದಿಗೆ ಕಠಿಣವಾಗಿ ವರ್ತಿಸಿದ್ದ ಒಕ್ಕೂಟ ಸರ್ಕಾರ, ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ತುಸು ಮಂಡಿಯೂರತೊಡಗಿದೆ. ಮೊದಲಿಗೆ ರೈತರ ಮೇಲೆ ಅಶ್ರುವಾಯು, ಜಲಫಿರಂಗಿ, ಲಾಠಿ ಚಾರ್ಜ್ ಮಾಡಿ ತನ್ನ ದರ್ಪ ಮೆರೆದಿತ್ತು. ಆದರೆ ನಂತರದಲ್ಲಿ ಈ ವಿಧಾನವನ್ನು ಕೈಚೆಲ್ಲಿ ಬೇರೆಯೆ ರೀತಿಯಲ್ಲಿ ತನ್ನ ತಂತ್ರವನ್ನು ಪ್ರಾರಂಭಿಸಿತ್ತು. ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು ಎಂದಿದ್ದ ಒಕ್ಕೂಟ ಸರ್ಕಾರ, ನಂತರದಲ್ಲಿ ಖಾಲಿಸ್ತಾನಿಗಳು ಎಂದು ಕೆರೆದಿದ್ದಕ್ಕೆ ವಿಷಾಧ ವ್ಯಕ್ತಪಡಿಸಿತ್ತು.
ಯಾವುದೇ ಪ್ರತಿಭಟನೆಗೂ ಜಗ್ಗುವುದಿಲ್ಲ ಎಂಬಂತಿದ್ದ ಸರ್ಕಾರ ಆರನೇ ಸುತ್ತಿನ ಮಾತುಕತೆಯಲ್ಲಿ ಎರಡು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದೆ. ಜೊತೆಗೆ ಆರನೇ ಸುತ್ತಿನ ಮಾತುಕತೆಯ ಸಮಯದಲ್ಲಿ ಸಚಿವರು ರೈತರೊಂದಿಗೆ ಜೊತೆಗೂಡಿ ಊಟ ಮಾಡಿದ್ದರು. ಏಳನೇ ಸುತ್ತಿನಲ್ಲಿ ಮಾತುಕತೆಯ ಸಮಯದಲ್ಲಿ ಸಭೆಯ ಪ್ರಾರಂಭಕ್ಕೆ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ದಾಂಜಲಿ ಕೋರಲಾಗಿತ್ತು.
ಅದಾಗ್ಯೂ ಏಳನೇ ಸುತ್ತಿನ ಮಾತುಕತೆಗೂ ಮುನ್ನ ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಆಶ್ರುವಾಯು ದಾಳಿ ನಡೆಸಿದೆ. ಆರನೇ ಸುತ್ತಿನಲ್ಲಿ ರೈತರೊಂದಿಗೆ ಊಟ ಮಾಡಿದ್ದ ಸಚಿವರು ಏಳನೇ ಸುತ್ತಿನ ಮಾತುಕತೆಯ ಸಮಯದಲ್ಲಿ ರೈತರೊಂದಿಗೆ ಊಟಕ್ಕೆ ಸೇರಲಿಲ್ಲ. ಅಲ್ಲದೆ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: ಗುತ್ತಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ ಎಂದು ರಿಲಾಯನ್ಸ್‌ನ ಅಂಬಾನಿಗಳು ಹೇಳುತ್ತಿರುವುದು ನಿಜವೆ?

ಪ್ರತಿಭಟನೆಗಳನ್ನು ಬಲಪ್ರಯೋಗಿಸಿಯೇ ಬಗ್ಗಿಸಿ ಅಭ್ಯಾಸವಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಇನ್ನೇನೋ ತಂತ್ರ ಹೂಡುತ್ತಿದೆ ಎಂಬ ಸಂಶಯ ವ್ಯಾಪಕವಾಗಿದೆ. ಆದರೆ ಬೇರೆ ಹೋರಾಟಗಳನ್ನು ದಮನಿಸಿದಂತೆ ಈ ಆಂದೋಲನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಭಟನೆಯ ಭಾಗವಾಗಿರುವ ಎಲ್ಲಾ ರೈತ ಸಂಘಟನೆಗಳು ಒಗ್ಗಟ್ಟಾಗಿದೆ. ಇವರನ್ನು ಒಡೆಯಲು ಆರಂಭದಲ್ಲಿ ಸರ್ಕಾರ ಪ್ರಯತ್ನಿಸಿತ್ತಾದರೂ ಅದು ಯಶಸ್ವಿಯಾಗಿಲ್ಲ. ಪ್ರತಿಭಟನೆಯ ದಿನಗಳು ಹೆಚ್ಚುತ್ತಿದ್ದಂತೆ ರೈತ ಸಂಘಟನೆಗಳ ಒಗ್ಗಟ್ಟು ಗಟ್ಟಿಯಾಗುತ್ತಲೆ ಇದೆ.
ಈ ನಡುವೆ ಏಳನೇ ಮಾತುಕತೆ ವಿಫಲವಾದರೆ ಟ್ರಾಕ್ಟರ್ ರ್‍ಯಾಲಿ ನಡೆಸುವುದಾಗಿ ಹೇಳಿದ್ದಾರೆ. ಪಂಜಾಬ್‌ನ ರೈತರು ತಮ್ಮ ರಾಜ್ಯದ ಯುವಜನರಲ್ಲಿ ಮನವಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ಬರುವಂತೆ ಕರೆ ನೀಡಿದ್ದಾರೆ. ದಕ್ಷಿಣ ಭಾರತದಿಂದಲೂ ಹಲವಾರು ಸಂಘಟನೆಗಳು ದೆಹಲಿಯತ್ತ ಮುಖ ಮಾಡಿವೆ. ಒಟ್ಟಿನಲ್ಲಿ, ಕೊರೆಯುತ್ತಿರುವ ದೆಹಲಿಯ ಚಳಿ, ಮಳೆಗೆ ಜಗ್ಗದೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಒಕ್ಕೂಟ ಸರ್ಕಾರ ಎಂಟನೇ ಸುತ್ತಿನ ಮಾತುಕತೆ ಜನವರಿ 8 ಕ್ಕೆ ನಿಗದಿಯಾಗಿದೆ. ರೈತರು ತಮ್ಮ ನಿಲುವಲ್ಲಿ ಗಟ್ಟಿಯಾಗಿದ್ದು, ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ವಾಪಾಸು ಪಡೆಯುವುದಿಲ್ಲ ಎಂದು ಅಚಲ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ದೇಶಕ್ಕೆ ಅನ್ನ ನೀಡಿ, ಗಡಿ ಕಾಯಲು ನಮ್ಮ ಮಕ್ಕಳನ್ನು ನೀಡಿ, ಈಗ ನಮ್ಮ ಜೀವವನ್ನೂ ನೀಡುತ್ತಿದ್ದೇವೆ: ರೈತ ಒಕ್ಕೂಟ


