ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಇಂದು ಕರ್ನಾಲ್ ಬಳಿಯ ಕೈಮ್ಲಾ ಎಂಬ ಗ್ರಾಮಕ್ಕೆ ಭೇಟಿ ನೀಡಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ಉಪಯೋಗಗಳ ಬಗ್ಗೆ ಭಾಷಣ ಮಾಡಬೇಕಿತ್ತು. ಮಹಾಪಂಚಾಯತ್ ಎಂಬ ಹೆಸರಿನ ಆ ಕಾರ್ಯಕ್ರಮದಲ್ಲಿ ರೈತರ ಜೊತೆ ಸಂವಾದ ನಡೆಸಬೇಕಿತ್ತು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವೇದಿಕೆಗೆ ನುಗ್ಗಿದ ಕಾಯ್ದೆ ವಿರೋಧಿ ರೈತರು ಕೃಷಿ ಕಾಯ್ದೆಗಳ ವಿರುದ್ಧ, ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸಿದ್ದಾರೆ. ಕುರ್ಚಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಇದರಿಂದ ಸಿಎಂ ಕಾರ್ಯಕ್ರಮವನ್ನೆ ರದ್ದುಗೊಳಿಸಿ ಮುಖಭಂಗಕ್ಕೊಳಾಗಾಗಿದ್ದಾರೆ.
ಇಂದು ಬೆಳಿಗ್ಗೆಯೇ ರೈತರ ಮೇಲೆ ಮುಗಿಬಿದ್ದಿರುವ ಹರಿಯಾಣ ಪೊಲೀಸರು ಕರ್ನಾಲ್ ಟೋಲ್ ಪ್ಲಾಜಾ ಬಳಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದರು. ಆದರೂ ಪೊಲೀಸರ ಭದ್ರಕೋಟೆ ಮುರಿದ ರೈತರು ಕೈಮ್ಲಾ ಗ್ರಾಮ ಪ್ರವೇಶಿಸಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಈ ಹಿಂದೆ ಇದೇ ರೈತರು ಸಿಎಂ ಕಟ್ಟರ್‌ರವರಿಗೆ ಕಪ್ಪು ಬಾವುಟ ತೋರಿಸಿದ್ದಲ್ಲದೆ ಅವರು ಬೆಂಗಾವಲು ವಾಹನವನ್ನು ರೈತರು ತಡೆದಿದ್ದರು. ಇದರಿಂದ ಕೆರಳಿದ ಪೊಲೀಸರು 13 ರೈತ ಮುಖಂಡರ ಮೇಲೆ ಕೊಲೆಯತ್ನದ ದೂರು ದಾಖಲಿಸಿದ್ದರು. ಆದರೂ ತಲೆಕೆಡಿಸಿಕೊಳ್ಳದ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರ ವಿರುದ್ಧವಿದ್ದು, ಕಾರ್ಪೊರೇಟ್‌ಗಳ ಹಿತಾಸಕ್ತಿ ಕಾಪಾಡುತ್ತವೆ ಎಂದು ರೈತರು ಆರೋಪಿಸಿದ್ದಾರೆ. ಅದರಲ್ಲಿಯೂ ಪಂಜಾಬ್ ಮತ್ತು ಹರಿಯಾಣ ರೈತರು ಅತಿ ಹೆಚ್ಚು ಗೋಧಿ ಮತ್ತು ಭತ್ತ ಬೆಳೆಯುತ್ತಿದ್ದು ಎಂಎಸ್‌ಪಿಯನ್ನೇ ನಂಬಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ಕಾಯ್ದೆಗಳಲ್ಲಿ ಎಂಎಸ್‌ಪಿ ಬಗ್ಗೆ ಚಕಾರವಿಲ್ಲ. ಹಾಗಾಗಿ ಅಲ್ಲಿನ ರೈತರ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಅಣಿಯಾಗಿದ್ದಾರೆ.
ಆದರೆ ಕೇಂದ್ರ ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ದೇಶಾದ್ಯಂತ 700 ಕಾರ್ಯಕ್ರಮಗಳ ಮೂಲಕ ಅವುಗಳ ಉಪಯೋಗಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೊರಟಿದೆ. ಅದರ ಭಾಗವಾಗಿಯೇ ಇಂದು ಹರಿಯಾಣದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರೈತರ ಹೋರಾಟಕ್ಕೆ ಬೆದರಿ ಅದನ್ನು ರದ್ದುಗೊಳಿಸಲಾಗಿದೆ.
ಇಂದು ಬೆಳಿಗ್ಗೆ ಹರಿಯಾಣದ ರೈತರ ಮೇಲೆ ದಾಳಿಯನ್ನು ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸಿಂಗ್ ಸುರ್ಜೇವಾಲ ತೀವ್ರವಾಗಿ ಖಂಡಿಸಿದ್ದಾರೆ. “ಮನೋಹರ್ ಲಾಲ್ ಕಟ್ಟರ್‌ಜಿ ದಯವಿಟ್ಟು ನೀವು ಇಂದು ಕೈಮ್ಲಾ ಗ್ರಾಮದ ಕಾರ್ಯಕ್ರಮವನ್ನು ಕೈಬಿಡಿ. ದೇಶಕ್ಕೆ ಅನ್ನ ಕೊಡುವ ರೈತರ ವಿಚಾರದಲ್ಲಿ ಭಾವನಾತ್ಮಕ ನಾಟಕ ಆಡಬೇಡಿ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ನೀವು ರೈತರೊಂದಿಗೆ ಮಾತನಾಡಬೇಕೆಂದಿದ್ದರೆ ಕಳೆದ 46 ದಿನಗಳಿಂದ ಹೋರಾಡುತ್ತಿರುವ ರೈತರೊಂದಿಗೆ ಮಾತನಾಡಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತರು ಬಿರಿಯಾನಿ ತಿಂದು ಹಕ್ಕಿ ಜ್ವರ ಹರಡುತ್ತಿದ್ದಾರೆ: ನಾಲಿಗೆ ಹರಿಯಬಿಟ್ಟ ಬಿಜೆಪಿ ಶಾಸಕ


