ಟ್ರಂಪ್ ಪರ ಬಿಜೆಪಿಯ ಧ್ವನಿಗಳು..! ಏಕಾಏಕಿ ಅಭಿವ್ಯಕ್ತಿ ಸ್ವಾಂತಂತ್ರ್ಯದ ಜಪ..!

ಫೇಸ್‌ಬುಕ್, ಟ್ವೀಟರ್‌ಗಳೇನೂ ಸಂಪೂರ್ಣ ಪ್ರಜಾಪ್ರಭುತ್ವವಾದಿಯಲ್ಲ ಎಂಬುದು ಭಾರತದಲ್ಲಿ ದೃಢಪಟ್ಟಿದೆ. ಆದರೆ ಅಮೆರಿಕದಲ್ಲಿ ಅವಕ್ಕೆ ಹೆಚ್ಚಿನ ಸ್ವಾತಂತ್ರ್ಯ ಇರುವ ಕಾರಣಕ್ಕೆ ಟ್ವೀಟರ್ ಖಾಯಂ ಆಗಿ ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಲು ಸಾಧ್ಯವಾಗಿದೆಯಷ್ಟೇ.
ಇದೊಳ್ಳೆ ಕತೆ. ಬಿಜೆಪಿಯ ಹಲವರು ಈಗ ಅಭಿವ್ಯಕ್ತಿ ಸ್ವಾತಂತ್ರ್ಯ, ಫ್ರೀ ಸ್ಪೀಚ್ ಮತ್ತು ಡೆಮಾಕ್ರಸಿ-ಇತ್ಯಾದಿ ಪದಪುಂಜಗಳನ್ನು ಬಳಸುತ್ತಿದಾರಷ್ಟೇ. ಶುಕ್ರವಾರ ಟ್ರಂಪ್ ಸಾಹೇಬರ ಟ್ವೀಟರ್ ಖಾತೆಯನ್ನು ಖಾಯಂ ಆಗಿ ಸ್ಥಗಿತಗೊಳಿಸಿದ ನಂತರ ಅವರು ನೀಡುತ್ತಿರುವ ಪ್ರತಿಕ್ರಿಯೆಗಳು ಅವರ ಆಷಾಢಭೂತಿತನಕ್ಕೆ ಸಾಕ್ಷಿಯಾಗಿವೆ.

ಟ್ವೀಟರ್ ಖಾತೆ ಸ್ಥಗಿತಗೊಳಿಸಲು ಕಾರಣವಾದ, ಕ್ಯಾಪಿಟಲ್ ಮೇಲೆ ದಾಳಿಯಾಗುವಂತೆ ಟ್ರಂಪ್ ಪ್ರಚೋದನಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರ ಬಗ್ಗೆ ಬಿಜೆಪಿಯ ಈ ಧ್ವನಿಗಳು ಪ್ರಸ್ತಾಪಿಸುತ್ತಿಲ್ಲ. ಅಥವಾ ಟ್ವೀಟರ್ ಖಾತೆಯೊಂದರ ರದ್ದು ಅದ್ಹೇಗೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದನ್ನೂ ಹೇಳುತ್ತಿಲ್ಲ.

ಈ ಧ್ವನಿಗಳ ಒಟ್ಟೂ ಸಾರಾಂಶ: ಅಮೆರಿಕದ ಅಧ್ಯಕ್ಷರ ಟ್ವೀಟರ್ ಖಾತೆಯನ್ನೇ ರದ್ದು ಮಾಡಲಾಗಿದ್ದು, ತಮ್ಮ ಖಾತೆಗಳಿಗೂ ಈ ಅಪಾಯ ಒದಗಬಹುದೆಂಬ ಆತಂಕವಷ್ಟೇ.

ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ದಾಳಿ: ಟ್ರಂಪ್ ಖಾತೆ ಸ್ಥಗಿತಗೊಳಿಸಿದ ಟ್ವಿಟರ್, ಫೇಸ್‌ಬುಕ್!

ಸಾಮಾಜಿಕ ಜಾಲತಾಣಗಳ ನಿಯಮ ಮತ್ತು ಷರತ್ತುಗಳು ಅಮೆರಿಕ ಮತ್ತು ಭಾರತದಲ್ಲಿ ಒಂದೇ ಆಗಿಲ್ಲ. ಅಲ್ಲಿ ಅವಕ್ಕೆ ಇಲ್ಲಿಗಿಂತ ಹೆಚ್ಚಿನ ಸ್ವಾತಂತ್ರ್ಯವಿದ್ದ ಕಾರಣಕ್ಕೆ ಈ ಹಿಂದೆಯೂ ಅವು ಟ್ರಂಪ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತ ಬಂದಿದ್ದವು.
ಭಾರತದಲ್ಲಿ ಆ ನಿಯಮಗಳು ಕಠಿಣವಾಗಿಲ್ಲ ಮತ್ತು ಆಡಳಿತರೂಢ ಬಿಜೆಪಿ 8-10 ವರ್ಷಗಳಿಂದ ಜಾಲತಾಣಗಳ ಜೊತೆ ’ಗುಪ್ತ’ ಮೈತ್ರಿ ಮಾಡಿಕೊಂಡೇ ಬಂದಿರುವುದನ್ನು ಫೇಸ್‌ಬುಕ್ ತಾರತಮ್ಯದ ಪ್ರಕರಣ ತೋರಿಸುತ್ತದೆ.

ಅಮೆರಿಕದಂತೆ ಇಲ್ಲಿಯೂ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸಿದ್ದರೆ, ಇಷ್ಟೊತ್ತಿಗಾಗಲೇ ಅಮಿತ್ ಮಾಳವಿಯ, ಕಪಿಲ್ ಮಿಶ್ರಾ, ತೇಜಸ್ವಿ ಸೂರ್ಯ ಇತ್ಯಾದಿ ವಿಭಜನಾಕಾರಿ ಸಂದೇಶ ವಾಹಕರ ಖಾತೆಗಳು ಎಂದೋ ಮಣ್ಣುಪಾಲು ಆಗಬೇಕಿತ್ತು. ಆದರೆ, ಅದೇಕೆ ಆಗಲಿಲ್ಲ?

ಕೋಮುವಾದಿ ಪ್ರಚೋದನ್ಮಾತಕ ಹೇಳಿಕೆ/ಸಂದೇಶಗಳಿಗೆ ಕುಖ್ಯಾತಿ ಪಡೆದಿರುವ ಬೆಂಗಳೂರು ದಕ್ಷಿಣದ ಸಂಸದ ಮತ್ತು ರಾಷ್ಟ್ರೀಯ ಬಿಜೆಪಿ ಯುವ ಘಟಕದ ಮುಖ್ಯಸ್ಥ ತೇಜಸ್ವಿ ಸೂರ್ಯ, ಟ್ರಂಪ್ ಪರ ಟ್ವೀಟ್ ಮಾಡಿ, ಅವರ ಖಾತೆ ರದ್ದುಗೊಳಿಸಿದ್ದನ್ನು ಪ್ರಜಾಪ್ರಭುತ್ವ ದೇಶಗಳ ನಾಯಕರಿಗೆ ಕಾದಿರುವ ಅಪಾಯ ಎಂದು ’ಬಿಗ್ ಟೆಕ್’ ಕಂಪನಿಗಳ ವಿರುದ್ಧ ಹರಿಹಾಯ್ದಿದ್ದು ಈ ಉಂಡಾಂಡಿಗುಂಡ ಹುಡುಗನ ಆಷಾಢಭೂತಿತನವನ್ನು ತೋರಿಸುತ್ತದೆ.

ಇದನ್ನೂ ಓದಿ: ಭಾರತದ ಸಂಸತ್ತಿಗೆ ಫೇಸ್‌ಬುಕ್ ಸುಳ್ಳು ಹೇಳುತ್ತಿದೆಯೇ? – ರಾಹುಲ್ ಗಾಂಧಿ ಪ್ರಶ್ನೆ

ಈತನ ಹಿಂದೆಯೇ, ಬಿಜೆಪಿಯ ದುಷ್ಟ ಟ್ರಾಲ್ ಸೇನೆಯ ಹಿಂದಿನ ಬ್ರೇನ್ ಎಂದೇ ಕುಖ್ಯಾತನಾಗಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಟ್ರಂಪ್ ಪರ ಬ್ಯಾಟಿಂಗ್ ಮಾಡಿದ್ದಾರೆ.

’ಈ ಅನಿಯಂತ್ರಿತ ದೈತ್ಯ ಟೆಕ್ ಕಂಪನಿಗಳಿಂದ ಪ್ರಜಾಪ್ರಭುತ್ವಗಳಿಗೆ ಇರುವ ಅಪಾಯವನ್ನು ಎಲ್ಲರೂ ಅರಿಯಬೇಕಿದೆ’ ಎಂದು ಪುಟಾಣಿ ತೇಜಸ್ವಿ ಸೂರ್ಯ ಡೆಮಾಕ್ರಸಿಯ ಪರ ಟ್ವೀಟ್ ಮಾಡಿದೆ!

’ಅವರು POTUS (President Of the United States) ಗೇ ಈ ರೀತಿ ಮಾಡುತ್ತಾರೆಂದರೆ, ಅವರು ಇದನ್ನು ಯಾರ ಮೇಲಾದರೂ ಪ್ರಯೋಗಿಸಬಹುದು’ ಎಂಬ ತೇಜಸ್ವಿ ಸೂರ್ಯರ ವಾಕ್ಯದಲ್ಲಿ ಸುಪ್ತವಾಗಿ ಟ್ರಂಪ್ ಆರಾಧನೆಯಿದೆ. ಅದಕ್ಕಿಂತ ಹೆಚ್ಚಾಗಿ, ’ಅಮೆರಿಕ ಅಧ್ಯಕ್ಷರಿಗೇ’ ಎಂಬುದರಲ್ಲಂತೂ ಆರಾಧನೆಯ ಭಾವವಿದೆ. ಆದರೆ ಈ ಹಿಂದೆಯೂ ಟ್ರಂಪ್ ತಮ್ಮ ಹುಚ್ಚು ಸಂದೇಶಗಳ ಕಾರಣಕ್ಕೆ ಫೇಸ್‌ಬುಕ್, ಟ್ವೀಟರ್‌ಗಳಿಂದ ತಾತ್ಕಾಲಿಕ ಖಾತೆ ನಿರ್ಬಂಧವನ್ನು ಎದುರಿಸಿದ್ದಾರೆ ಎಂಬುದನ್ನು ಈ ಪ್ರಖರ ಕೋಮುವಾದಿ ಸಂಸದ ಮರೆತಂತಿದೆ.

ಇದನ್ನೂ ಓದಿ: ಬಜರಂಗದಳದ ಮೇಲೆ ನಿಷೇಧ ಹೇರುವಂತಹ ಅಂಶಗಳು ಕಂಡುಬಂದಿಲ್ಲ: ಫೇಸ್‌ಬುಕ್ ಇಂಡಿಯಾ

ಅರಬ್ ಮಹಿಳೆಯರ ಕುರಿತಾದ ಟ್ವೀಟ್‌ಗೆ ಅರಬ್ ಆಡಳಿತದಿಂದ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ತೇಜಸ್ವಿ ಸೂರ್ಯ ಆ ಟ್ವೀಟ್ ಡಿಲೀಟ್ ಮಾಡಿದ್ದರು. ಬಹುಷ: ಆಗಲೇ ಈತನ ಖಾತೆ ರದ್ದಾಗುವ ಸಂಭವವಿತ್ತೇನೊ? ಹೈದರಾಬಾದ್ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲೂ ಒವೈಸಿ ಕುರಿತು ತೇಜಸ್ವಿ ನೀಡಿದ ಹೇಳಿಕೆ ಕೋಮು ಪ್ರಚೋದನಾಕಾರಿಯಾಗಿದೆ ಎಂದು ಅಲ್ಲಿನ ಪೊಲೀಸರು ಎಚ್ಚರಿಸಿದ್ದರು.

ಜೀವವಿರೋಧಿ ಸಿದ್ದಾಂತವನ್ನೆ ಮೈ-ಮನಸ್ಸುಗಳ ತುಂಬ ಹರಡಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ’ಅಮೆರಿಕದ ಅಧ್ಯಕ್ಷರನ್ನೇ ಒಂದು ವೇದಿಕೆಯಿಂದ ನಿರಾಕರಿಸುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ!

ಟ್ವೀಟರ್ ಕಂಪನಿಯ ಕ್ರಮವನ್ನು ಫ್ರೀ ಸ್ಪೀಚ್ ವಿರುದ್ಧದ ಕ್ರಮ ಎಂಬಂತೆ ಬಿಂಬಿಸಲು ಯತ್ನಿಸಿರುವ ಮಾಳವಿಯ, ಈ ಸಂದರ್ಭವನ್ನು ಬಿಜೆಪಿಯ ಸಿದ್ದಾಂತ ವಿರೋಧಿಸುವವರನ್ನು ಟಾರ್ಗೆಟ್ ಮಾಡಲು ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ತನ್ನ ವ್ಯವಹಾರದ ರಕ್ಷಣೆಗೆ ಭಜರಂಗದಳದ ಪರ ನಿಂತ ಫೇಸ್‌ಬುಕ್‌: ವಾಲ್‌ಸ್ಟ್ರೀಟ್ ಜರ್ನಲ್ ವರದಿ

ಆಮ್ ಆದ್ಮಿ ದೆಹಲಿ ಘಟಕದ ಸಾಮಾಜಿಕ ಜಾಲತಾಣದ ಉಸ್ತುವಾರಿ ಅಂಕಿತ್ ಲಾಲ್ ಇದಕ್ಕೆ ಪ್ರತಿಕ್ರಿಯಿಸಿದ್ದು, ’ಸಾಮಾಜಿಕ ಜಾಲತಾಣ ಬಳಸಿಕೊಂಡು ಸ್ವತ: ಸುಳ್ ಸುದ್ದಿ ಹರಡುವ, ತಪ್ಪು ಮಾಹಿತಿ ಪ್ರಸರಿಸುವ, ಆ ಮೂಲಕ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುವ ವ್ಯಕ್ತಿ ಇಂದು ಬಿಗ್ ಟೆಕ್ ಕಂಪನಿಗಳ ವಿರುದ್ಧ ಮಾತಾಡುತ್ತಿದ್ದಾರೆ. ಮಾಳವಿಯ ಅವರೆ, ಇಲ್ಲಿವರೆಗೂ ನಿಮ್ಮ ಅಕೌಂಟ್ ರದ್ದಾಗದೇ ಇರಲು ಕಾರಣ, ಫೇಸ್‌ಬುಕ್ ಮತ್ತು ಟ್ವೀಟರ್‌ಗಳು ಭಾರತ ಮತ್ತು ಅಮೆರಿಕಗಳಿಗೆ ಒಂದೇ ನಿಯಮಗಳನ್ನು ಅನ್ವಯಿಸದಿರುವುದೇ ಆಗಿದೆ’ ಎಂದಿದ್ದಾರೆ.

ಈ ಸೂರ್ಯ, ಮಾಳವಿಯಾಗಳು ಇದೇ ’ಬಿಗ್ ಟೆಕ್’ ಕಂಪನಿಗಳ ವೇದಿಕೆ ಬಳಸಿಕೊಂಡು, ಕೋಮು ಪ್ರಚೋದನಾತ್ಮಕ, ಹಿಂಸೆ ಪ್ರಚೋದನ್ಮಾತಕ ಸಂದೇಶಗಳನ್ನು ಹರಿಬಿಡುತ್ತ ಬಂದಿದ್ದಾರೆ. ಆದರೆ ಇಲ್ಲಿ ಕಠಿಣ ನಿಯಮ ಇಲ್ಲದ್ದರಿಂದ ಮತ್ತು ಈ ’ಬಿಗ್ ಟೆಕ್’ ಕಂಪನಿಗಳ ಆಯಕಟ್ಟಿನ ಸ್ಥಳಗಳಲ್ಲಿ ಹಿಂದೂತ್ವಾದಿಗಳೇ ತುಂಬಿದ ಕಾರಣಕ್ಕೆ ಇವರೆಲ್ಲರೂ ಅಕೌಂಟ್ ರದ್ದತಿಯಿಂದ ವಿನಾಯ್ತಿ ಪಡೆದಿದ್ದಾರೆ. ವಾಲ್‌ಸ್ಟ್ರೀಟ್ ಪ್ರಕಟಿಸಿದ್ದ ಫೇಸ್‌ಬುಕ್ ಪಕ್ಷಪಾತ ಕುರಿತಾದ ತನಿಖಾ ವರದಿ ಇದನ್ನೇ ಸೂಚಿಸುತ್ತದೆ.

ಟ್ರಂಪ್ ಖಾತೆ ರದ್ದಾದಾಗ ಹಲವಾರು ಟ್ವೀಟರಿಗರು ದೆಹಲಿ ಬಿಜೆಪಿ ಕಪಿಲ್ ಮಿಶ್ರಾ ಖಾತೆಯನ್ನೂ ರದ್ದು ಮಾಡಿ ಎಂದು ಒತ್ತಾಯಿಸಿದ್ದರು.
ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ಸಂದೇಶ ಮತ್ತು ದೆಹಲಿ ಅಸೆಂಬ್ಲಿ ಚುನಾವಣೆಯನ್ನು ’ಇಂಡಿಯಾ ವರ್ಸಸ್ ಪಾಕಿಸ್ತಾನ್’ ಮ್ಯಾಚ್ ಎಂದು ಕೋಮುವಾದಿ ಸಂದೇಶ ಹಾಕಿದ್ದ ಕಪಿಲ್ ಮಿಶ್ರಾ ಮೇಲೆ ಈ ’ಬಿಗ್ ಟೆಕ್’ ಕಂಪನಿಗಳು ಕ್ರಮ ಕೈಗೊಳ್ಳಲು ಏನು ಅಡ್ಡಿಯಾಗಿದೆ ಎಂಬುದನ್ನು ಟ್ರಂಪ್ ಬೆಂಬಲಿಗ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಲು ಸಿದ್ಧರಿಲ್ಲ.


ಇದನ್ನೂ ಓದಿ: ಫೇಸ್‌ಬುಕ್ ದ್ವೇಷದಿಂದ ಲಾಭ ಗಳಿಸುತ್ತಿದೆ: ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಲಕ್ಕಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here