ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ದೆಹಲಿಯಲ್ಲಿ ದೇಶದ ರೈತರು ನಡೆಸುತ್ತಿರುವ ಪ್ರತಿಭಟನೆ 6 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳುತ್ತಿದ್ದು ಕೇಂದ್ರದ ಮಾತುಕತೆ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ. ಮೂರು ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ದೆಹಲಿ ಪ್ರವೇಶಿಸುವ ಮೂರು ಮುಖ್ಯ ಸ್ಥಳಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಕೃಷಿಯನ್ನು ಕಾರ್ಪೊರೇಟ್ ಕುಳಗಳ ವಶವನ್ನಾಗಿ ಮಾಡುವ ಈ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳುವವರೆಗೂ ಹೋರಾಟ ನಡೆಸುತ್ತೇವೆ. ನಮ್ಮ ಬಳಿ 3-4 ತಿಂಗಳಿಗಾಗುವಷ್ಟು ರೇಷನ್ ಇದೆ. ಹಾಗಾಗಿ ಪ್ರತಿಭಟನೆ ಅನಿರ್ದಿಷ್ಠಾವಧಿ ನಡೆಯಲಿದೆ. ಸರ್ಕಾರ ನಮ್ಮ ಪ್ರತಿಭಟನೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೆ ದೆಹಲಿ ಪ್ರವೇಶಿಸುವ 5 ಮುಖ್ಯ ಸ್ಥಳಗಳನ್ನು ಬಂದ್ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಸುರ್ಜಿತ್ ಪೌಲ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಎಂದು ಹೇಳುತ್ತಿದೆ. ಆದರೆ ಅದೊಂದು ಬಹಿರಂಗ ಬಂಧಿಖಾನೆ ಅಷ್ಟೇ. ನಾವು ಆ ಮೈದಾನ ಪ್ರವೇಶಿಸಿದರೆ ನಮ್ಮನ್ನು ಬಂಧಿಸಿ ಕಿರುಕುಳ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ನಾವು ಆ ಮೈದಾನಕ್ಕೆ ಹೋಗುವುದಿಲ್ಲ. ಬದಲಿಗೆ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಡಲಿ. ಇಲ್ಲದಿದ್ದಲ್ಲಿ ಸೋನಿಪತ್, ರೋಹ್ಟಕ್, ಜೈಪುರ, ಗಾಜಿಯಾಬಾದ್-ಹಾಪುರ ಮತ್ತು ಮಥುರಗಳಲ್ಲಿ ರಸ್ತೆಯನ್ನು ಮುಚ್ಚುವ ಮೂಲಕ ದೆಹಲಿಯನ್ನು ಬಂದ್ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಮ್ಮನ್ನು ಬುರಾರಿ ಮೈದಾನಕ್ಕೆ ಕಳಿಸಿ ಅದನ್ನು ಜೈಲಾಗಿ ಪರಿವರ್ತನೆ ಮಾಡಲು ಪೊಲೀಸರು ಕುತಂತ್ರ ನಡೆಸಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ ನಾವು ಅಲ್ಲಿಗೆ ಹೋಗುವುದಿಲ್ಲ. ಎಷ್ಟು ದಿನವಾದರೂ ಸರಿಯೇ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಕೇಂದ್ರ ಸಮಿತಿ ನಿರ್ಣಯ ತೆಗೆದುಕೊಳ್ಳುತ್ತದೆ. ನಮ್ಮ ಚಿತ್ತವೇನಿದ್ದರೂ ಈ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮಾತ್ರ ಎಂದು ರೈತರು ತಿಳಿಸಿದ್ದಾರೆ.
ರೈತರು ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ನಂತರ ಗೃಹ ಸಚಿವ ಅಮಿತ್ ಶಾ ತಡರಾತ್ರಿ ಹಿರಿಯ ಬಿಜೆಪಿ ಮುಖಂಡರ ಸಭೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾರವರ ಮನೆಯಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಭಾಗವಹಿಸಿದ್ದರು ಎನ್ನಲಾಗಿದೆ. ಸಭೆಯಲ್ಲಿ ಏನು ತೀರ್ಮಾನವಾಗಿದೆ ಎಂಬುದು ತಿಳಿದುಬಂದಿಲ್ಲ.

ನವೆಂಬರ್ 25 ರಂದು ರೈತರು ದೆಹಲಿ ಚಲೋ ನಡೆಸಲು ದೆಹಲಿ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಅಲ್ಲಿಂದ ಈ ಐದು ದಿನಗಳಲ್ಲಿ ನೂರಾರು ಬಾರಿ ರೈತರ ಮೇಲೆ ಲಾಠೀಚಾರ್ಜ್ ಮಾಡಲಾಗಿದೆ. ಜಲಫಿರಂಗಿ, ಅಶ್ರುವಾಯು ಸಿಡಿಸಲಾಗಿದೆ. ನೂರಾರು ಕಡೆ ರೈತರನ್ನು ತಡೆಯಲಾಗಿದೆ. ಮಾತ್ರವಲ್ಲದೇ ಇಡೀ ಬಿಜೆಪಿ ಮತ್ತು ಹಲವು ಮಾಧ್ಯಮಗಳು ಇದು ಕಾಂಗ್ರೆಸ್ ರೈತರ ಹೋರಾಟ, ಇವರೆಲ್ಲಾ ರೈತರಲ್ಲ ಎಂದು ಪ್ರಚಾರ ಮಾಡುವ ಮೂಲಕ ಅವಮಾನಿಸಲಾಗಿದೆ. ಆದರೆ ರೈತರು ಮಾತ್ರ ಎದೆಗುಂದಿಲ್ಲ. ಈ ಹೋರಾಟವನ್ನು ಜೀವನ್ಮರಣದ ಪ್ರಶ್ನೆಯನ್ನಾಗಿ ರೈತರು ಭಾವಿಸಿದ್ದಾರೆ. ಹಾಗಾಗಿ ಈ ಕಾಯ್ದೆಗಳನ್ನು ವಾಪಸ್ ಕಳಿಸಿಯೇ ಮನೆಗೆ ತೆರಳುವ ಶಪಥ ಮಾಡಿದ್ದಾರೆ.
ಮಹಿಳಾ ರೈತರು ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಟ್ರಾಕ್ಟರ್‌ಗಳಲ್ಲಿ ಮಲಗಿ, ರಸ್ತೆ ಬದಿಯೇ ಸ್ನಾನ ಮಾಡಿದರೂ ಸರಿಯೇ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಕೇಂದ್ರ ಸರ್ಕಾರ ಆರಂಭದಲ್ಲಿ ಈ ರೈತರ ಹೋರಾಟವನ್ನು ದಮನ ಮಾಡಲು ಯತ್ನಿಸಿತು. ಆದರೆ ಪಂಜಾಬ್, ಹರಿಯಾಣದ ರೈತರು ಸಾಕಷ್ಟು ಸಂಖ್ಯೆಯಲ್ಲಿ ದೆಹಲಿ ಪ್ರವೇಶಿಸಿ ಹೋರಾಟವನ್ನು ತೀವ್ರಗೊಳಿಸಿದರು. ಈಗ ಸರ್ಕಾರ ಡಿಸೆಂಬರ್ 03 ರಂದು ರೈತ ಮುಖಂಡರನ್ನು ಮಾತುಕತೆಗೆ ಕರೆದಿದೆ. ಆದರೆ ರೈತರು ದೆಹಲಿ ಬಿಟ್ಟು ಕದಲುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಈ ಹೋರಾಟ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ


