ಸೂರ್ಯನಿಂದ ಕೇವಲ 5.79ಕೋಟಿ ಕಿಲೋ ಮೀಟರ್ ದೂರದಲ್ಲಿ ಇರುವ ಗ್ರಹವೇ ಬುಧ ಗ್ರಹ. ಬುಧ ಗ್ರಹ ಸೌರಮಂಡಲದ ಇತರ ಗ್ರಹಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕ ಗ್ರಹ (ಪ್ಲೂಟೋ ಬುಧಕ್ಕಿಂತಲೂ ಚಿಕ್ಕ ‘ಗ್ರಹ’ ಆದರೆ ಪ್ಲೂಟೋವನ್ನು ಆಗಸ್ಟ್ 2008ರಿಂದ ಗ್ರಹಗಳ ಪಟ್ಟಿಯಿಂದ ಕೈಬಿಟ್ಟು ಕುಬ್ಜ ಗ್ರಹದ ಪಟ್ಟಿಗೆ ಸೇರಿಸಲಾಗಿದೆ). ಬುಧ ಸೂರ್ಯನಿಗೆ ಬಹಳ ಹತ್ತಿರವಿರುವ ಗ್ರಹವಾದುದರಿಂದ, ಈ ಗ್ರಹವು 88 ಭೂದಿನಗಳಲ್ಲಿ ಸೂರ್ಯನ ಸುತ್ತ ಒಂದು ಸುತ್ತು ಸುತ್ತುತ್ತದೆ. ಅಲ್ಲದೆ, ತನ್ನ ಅಕ್ಷದ ಸುತ್ತ ಸುತ್ತಲು 58 ಭೂ ದಿನಗಳನ್ನು ತೆಗೆದುಕೊಳ್ಳುತ್ತೆ. ಹಾಗಾಗಿ, ಬುಧ ಗ್ರಹದಲ್ಲಿ ಸುಮಾರು ಒಂದೂವರೆ ದಿನವಾದರೆ (ತನ್ನ ಅಕ್ಷದ ಸುತ್ತ ಸುತ್ತುವ ಸಮಯದ ಒಂದೂವರೆ ಪಟ್ಟು) ಒಂದು ವರ್ಷವಾದಂತೆ! ಇದು ಸೌರ ಮಂಡಲದ ಇನ್ನಿತರ ಎಲ್ಲಾ ಗ್ರಹಗಳಿಗಿಂತ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತುವ ಗ್ರಹ.

ಬುಧ ಗ್ರಹದಲ್ಲಿ ಸೂರ್ಯನ ಶಾಖ ವಿಪರೀತವಾಗಿ ಹೆಚ್ಚಿರುತ್ತದೆ. ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ 420 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ರಾತ್ರಿಯ ಸಮಯದಲ್ಲಿ ಅಲ್ಲಿನ ಪ್ರದೇಶಗಳಲ್ಲಿ -180 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇಂತಹ ತೀವ್ರವಾದ ತಾಪಮಾನ ವ್ಯತ್ಯಾಸದಿಂದ ಕೂಡಿರುವ ಬುಧ ಗ್ರಹದಲ್ಲಿ ಪ್ರಸ್ತುತದ ವಿಜ್ಞಾನಕ್ಕೆ ತಿಳಿದಿರುವ ಯಾವ ಜೀವರಾಶಿಯು ಜೀವಿಸಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಇದೆ. ಇಂತಹ ವಿಪರೀತ ಸ್ಥಿತಿಯಿರುವ ಪ್ರದೇಶದಲ್ಲಿ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿ ಈ ಗ್ರಹವನ್ನು ಅಧ್ಯಯನ ಮಾಡುವುದು ಕಷ್ಟಕರ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಯಾವುದೇ ಬಾಹ್ಯಾಕಾಶ ನೌಕೆಯನ್ನು ಬುಧ ಗ್ರಹದ ಅಧ್ಯಯನಕ್ಕೆ ಭೂಮಿಯಿಂದ ಕಳುಹಿಸಿದರೆ, ಆ ನೌಕೆಯು ಸೂರ್ಯನ ದಿಕ್ಕಿಗೆ ಪ್ರಯಾಣ ಮಾಡಬೇಕಾಗಿರುವುದರಿಂದ, ನೌಕೆಯನ್ನು ಬುಧ ಗ್ರಹಕ್ಕಿಂತಲೂ ದೊಡ್ಡದಾಗಿರುವ ಸೂರ್ಯನು ತನ್ನತ್ತ ಸೆಳೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಆದುದರಿಂದ, ಬುಧ ಗ್ರಹದ ಅಧ್ಯಯನ ಸ್ವಲ್ಪ ಕಷ್ಠವೇ.

ಹೀಗಿದ್ದರೂ, ತಂತ್ರಜ್ಞಾನದ ಸಹಾಯದಿಂದ, 1970-75ರಲ್ಲಿ ಬುಧ ಗ್ರಹಕ್ಕೆ ಪ್ರಥಮ ಬಾಹ್ಯಾಕಾಶ ನೌಕೆಯಾದ ಮೆರಿನಿಯರ್ 10 (Meriner 10) ಎಂಬ ನೌಕೆಯನ್ನು ಕಳುಹಿಸಲಾಯಿತು. ಮಾನವನಿಗೆ ಮೊದಲ ಬಾರಿಗೆ ಬುಧ ಗ್ರಹದ ಭೂಪ್ರದೇಶ ತೋರಿಸಲು ಈ ನೌಕೆಯೇ ಸಹಾಯ ಮಾಡಿದ್ದು. ಜೊತೆಗೆ ಬುಧ ಗ್ರಹದಲ್ಲಿ ತೆಳುವಾದ ವಾತವರಣವಿರುವುದನ್ನು ಇದು ಖಾತರಿಪಡಿಸಿತು. ಬುಧ ಗ್ರಹದ ಭೂಪ್ರದೇಶವು ಚಂದ್ರನ ಮೇಲೆ ಕಾಣುವ ಕುಳಿಗಳ ಹಾಗೆಯೇ ಇರುವುದನ್ನು ಮೆರಿನಿಯರ್ 10 ತೆಗೆದ ಚಿತ್ರಗಳು ನಮಗೆ ತೋರಿಸಿದವು. ಅಲ್ಲದೆ 20074 ರಲ್ಲಿ ಉಡಾವಣೆ ಮಾಡಿದ ಮೆಸೆಂಜರ್ ನೌಕೆಯು 2011ರಲ್ಲಿ ಬುಧ ಗ್ರಹದ ಕಕ್ಷೆಗೆ ತೆರಳಿ ಬುಧ ಗ್ರಹದ ಶೇ.100 ರಷ್ಟು ಭೂಪ್ರದೇಶದ ನಕ್ಷೆಯನ್ನು ತಯಾರಿಸಿತು. ಅಲ್ಲದೆ, ಯುರೋಪ್ ಬಾಹ್ಯಾಕಾಶ ಸಂಸ್ಥೆ ಮತ್ತು ಜಪಾನ್ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಲ್ಲಿ, 2018ರಲ್ಲಿ ಉಡಾವಣೆಯಾಗಿರುವ ಬೆಪಿ-ಕೊಲಾಂಬೋ ನೌಕೆಯು 2015ರಲ್ಲಿ ಬುಧ ಗ್ರಹದ ಕಕ್ಷೆಗೆ ತೆರಳಲಿದ್ದು, ಬುಧ ಗ್ರಹದಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಮತ್ತಷ್ಟು ವಿಸ್ಮಯಕಾರಿ ವಿಷಯಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.

ಭೂಮಿಯ ಆಕಾಶದಲ್ಲಿ ಬರಿಗಣ್ಣಿಗೆ ಕಾಣಬಹುದಾದ ಐದು ಗ್ರಹಗಳಲ್ಲಿ ಬುಧ ಗ್ರಹವು ಒಂದು. ಆದರೆ, ಈ ಗ್ರಹವು ಸೂರ್ಯನಿಗೆ ಹತ್ತಿರವಿರುವುದರಿಂದ, ಭೂಮಿಯ ಆಕಾಶದಲ್ಲಿ, ಸೂರ್ಯನ ಬೆಳಕಿನಲ್ಲಿ ಇದನ್ನು ಗುರುತಿಸುವುದು ಕಷ್ಟವಾಗಿರುತ್ತದೆ ಅಲ್ಲದೆ, ಸೂರ್ಯನ ಜೊತೆಯೇ ಈ ಗ್ರಹವು ಮುಳುಗುತ್ತಿರುತ್ತದೆ. ಆದರೆ, ಈ ತಿಂಗಳ 12ರಂದು ಸೂರ್ಯನಿಂದ ಅತೀ ಹೆಚ್ಚು ದೂರದಲ್ಲಿ ಕಾಣುವ ಬುಧ ಗ್ರಹವನ್ನು, ಪಶ್ಚಿಮ ದಿಕ್ಕಿನಲ್ಲಿ ಶುಕ್ರ ಗ್ರಹದ ಸಹಾಯದಿಂದ ಗುರುತಿಸಬಹುದು. ಅಂದೇ ಬುಧ ಗ್ರಹ ಬಹಳ ಪ್ರಕಾಶ ಮಾನವಾಗಿ ಹೊಳೆಯುತ್ತಿರುತ್ತದೆ. ಆ ದಿನದ ಸಂಜೆ ಮೋಡಗಳಿಲ್ಲದೆ ಹೋದರೆ, ಬುಧ, ಶುಕ್ರ, ಮಂಗಳ ಗ್ರಹಗಳನ್ನು ಮತ್ತು ಚಂದ್ರನನ್ನು ಸೂರ್ಯ ಮುಳುಗಿದ ನಂತರ ಪಶ್ಚಿಮದಿಕ್ಕಿನಲ್ಲಿ ಕಾಣಬಹುದು.


