Homeಕರೋನಾ ತಲ್ಲಣಸತತ ಮನವಿಗೆ ಸ್ಪಂದಿಸದ ಮೋದಿ, ಯೋಗಿ!: ಮೋದಿ ಅನುಯಾಯಿ, RSS ಕಾರ್ಯಕರ್ತ ಕೊವಿಡ್‌ಗೆ ಬಲಿ

ಸತತ ಮನವಿಗೆ ಸ್ಪಂದಿಸದ ಮೋದಿ, ಯೋಗಿ!: ಮೋದಿ ಅನುಯಾಯಿ, RSS ಕಾರ್ಯಕರ್ತ ಕೊವಿಡ್‌ಗೆ ಬಲಿ

ಅಮಿತ್ ತಮ್ಮ ಇಡೀ ಜೀವನವನ್ನು ಪ್ರಧಾನಿ ಮೋದಿಗಾಗಿ ಹೋರಾಡಿದರು. ಮೋದಿಯವರು ಅವರಿಗೆ ಏನು ಮಾಡಿದರು? ಇಂತಹ ಪಿಎಂ ಸಾಹೇಬರು ನಮಗೆ ಬೇಕೆ? ಅಮಿತ್ ಕುಟುಂಬದ ಪ್ರಶ್ನೆ...

- Advertisement -
- Advertisement -

ಉತ್ತರಪ್ರದೇಶದ ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ತಮ್ಮನ್ನು ಮೋದಿ ಭಕ್ತ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. ಟ್ವೀಟರ್‌ನಲ್ಲಿ ನರೇಂದ್ರ ಮೋದಿಯವರು ಸಹ ಈ ವ್ಯಕ್ತಿಯನ್ನು ಫಾಲೋ ಮಾಡುತ್ತಿದ್ದು, ಮೃತನ ಕುಟುಂಬ ವ್ಯಕ್ತಿಯ ಹ್ಯಾಂಡ್‌ಲ್‌ನಿಂದ ಮತ್ತು ಇತರ ಮೂಲಗಳಿಂದ ನೆರವಿಗೆ 10 ದಿನಗಳಿಂದ ಸತತ ಮನವಿ ಮಾಡುತ್ತ ಬಂದರೂ ಪ್ರಧಾನಿ ಮತ್ತು ಯೋಗಿ ಆದಿತ್ಯನಾಥ್ ಸ್ಪಂದಿಸಲಿಲ್ಲ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿಯವರನ್ನು ಟ್ಯಾಗ್ ಮಾಡಿ, ಚಿಕಿತ್ಸೆಗೆ ಸಂಬಂಧಿಸಿದಂತೆ ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೋವಿಡ್ ರೋಗಿ, ಆರ್‌ಎಸ್‌ಎಸ್ ಕಾರ್ಯಕರ್ತ ಅಮಿತ್ ಜೈಸ್ವಾಲ್ ಕುಟುಂಬ, ಅಮಿತ್ ಖಾತೆಯಿಂದ ಟ್ವೀಟ್ ಪೋಸ್ಟ್ ಮಾಡಿ ನೆರವಿಗಾಗಿ ಕಾದಿತ್ತು. ಆದರೆ, ಪಿಎಂ ಮತ್ತು ಸಿಎಂ ಸ್ಪಂದಿಸಲೇ ಇಲ್ಲ ಎಂದು ಕುಟುಂಬ ಕಿಡಿಕಾರಿದೆ.

ಆಗ್ರಾ ನಿವಾಸಿ ಅಮಿತ್ ಜೈಸ್ವಾಲ್ ಅವರ ಕಾರಿನ ಹಿಂಭಾಗವನ್ನು ಹಲವು ವರ್ಷಗಳಿಂದ ಅಲಂಕರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಪೋಸ್ಟರ್ ಅನ್ನು ಈಗ ಕಿತ್ತುಹಾಕಲಾಗಿದೆ. ಜೈಸ್ವಾಲ್ದ ಮಥುರಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ದಿನ ಅವರ ಸಹೋದರಿ ಮೋದಿ ಫೋಟೊವನ್ನು ಹರಿದು ಚಿಂದಿ ಮಾಡಿ ಎಸೆದಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಆಗ್ರಾದಲ್ಲಿ ಜೈಸ್ವಾಲ್ ಅವರಿಗೆ ಆಸ್ಪತ್ರೆಯ ಹಾಸಿಗೆ ಸಿಗಲಿಲ್ಲ. ಜೈಸ್ವಾಲ್ ಅವರ ಖಾತೆಯಿಂದ ಟ್ವೀಟ್ ಅನ್ನು ಪೋಸ್ಟ್ ಮಾಡಿ, ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ ಕುಟುಂಬವು, ರಿಮೆಡೆಸಿವಿರ್ ಚುಚ್ಚುಮದ್ದನ್ನು ಪಡೆಯಲು ಸಹಾಯವನ್ನು ಕೋರುತ್ತಲೇ ಬಂದಿತು. ಪ್ರಧಾನಿ ಮೋದಿ ಅವರು “ಮಧ್ಯಪ್ರವೇಶಿಸುತ್ತಾರೆ” ಎಂದು ಕುಟುಂಬ ಆಶಿಸಿತ್ತು. ಆದರೆ, ಅವರ ನಿರೀಕ್ಷೆಗಳೆಲ್ಲ ಹುಸಿಯಾದವು.

ಕೋವಿಡ್ ಕಾಣಿಸಿಕೊಂಡ 10 ದಿನಗಳ ನಂತರ ಸೂಕ್ತ ಚಿಕಿತ್ಸೆ, ಔಷಧಿ ಸಿಗದೇ 42 ವರ್ಷದ ಜೈಸ್ವಾಲ್ ಏಪ್ರಿಲ್ 29ರಂದು ಮೃತಪಟ್ಟರು. ಅವರ ನಿಧನದ ಕೆಲವು ದಿನಗಳ ನಂತರ ಅವರ ತಾಯಿಯೂ ಕೋವಿಡ್‌ಗೆ ಬಲಿಯಾದರು.

ಮೃತ ಅಮಿತ್ ಜೈಸ್ವಾಲ್

ಜೈಸ್ವಾಲ್ ಅವರ ಕುಟುಂಬದ ಸದಸ್ಯರು, ಅವರನ್ನು ಸ್ವಯಂ ಘೋಷಿತ “ಮೋದಿ ಭಕ್ತ” ಎಂದು ಹೇಳುತ್ತಾರೆ. ಅವರ ವಾಟ್ಸಾಪ್ ಡಿಸ್‌ಪ್ಲೇ ಫೋಟೋ ಪ್ರಧಾನ ಮಂತ್ರಿಯದ್ದೇ ಆಗಿದೆ. ಮೋದಿ ಮೃತ ಆರ್‌ಎಸ್‌ಎಸ್ ವ್ಯಕ್ತಿಯನ್ನು ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದರು ಎಂಬ ಅಂಶವನ್ನು ಹೆಮ್ಮೆಯಿಂದ ತೋರಿಸಿದ ಕುಟುಂಬ ಸದಸ್ಯರಿಗೆ ಈಗ ಮೋದಿ ಮತ್ತು ಯೋಗಿ ಎಂದರೆ ಮೈ ಉರಿಯುತ್ತಿದೆ.

ಈ ಕುರಿತು ಪ್ರಿಂಟ್ ಜೊತೆ ಮಾತನಾಡಿರುವ ಮೃತನ ಸಹೋದರಿ, “ಮೋದಿ ಮತ್ತು ಯೋಗಿ ವಿರುದ್ಧ ನನ್ನ ಸಹೋದರ ಒಂದೂ ಮಾತು ಆಡಲಿಲ್ಲ. ಯಾರಾದರೂ ಅವರನ್ನು ದೂರದಿಂದಲೇ ಟೀಕಿಸಿದರೆ, ಅವರನ್ನು ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದ” ಎಂದು ತಿಳಿಸಿದ್ದಾರೆ.

ಏಪ್ರಿಲ್ 29 ರ ಮುಂಜಾನೆ, ಅವರು ಮಥುರಾದ ನಿಯಾತಿ ಆಸ್ಪತ್ರೆಯಲ್ಲಿ ನಿಧನರಾದರು, ಅಲ್ಲಿ ಒಂಬತ್ತು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆ ದಿನವೇ ಸೋನು ಮತ್ತು ಅವರ ಪತಿ ರಾಜೇಂದ್ರ ಅವರು ಮೋದಿ ಪೋಸ್ಟರ್ ಅನ್ನು ಹರಿದು ಹಾಕಿದರು. ಕೋಪಗೊಂಡ ದಂಪತಿಗಳು ಪ್ರಧಾನಿ ಮೋದಿಯವರ “ಉದಾಸೀನತೆ”ಯನ್ನು “ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದರು.

“ಅಮಿತ್ ತಮ್ಮ ಇಡೀ ಜೀವನವನ್ನು ಪ್ರಧಾನಿ ಮೋದಿಗಾಗಿ ಹೋರಾಡಿದರು. ಮೋದಿಯವರು ಅವರಿಗೆ ಏನು ಮಾಡಿದರು? ಇಂತಹ ಪಿಎಂ ಸಾಹೇಬರು ನಮಗೆ ಬೇಕೆ? ನಾವು ಅವರ ಪೋಸ್ಟರ್ ಅನ್ನು ಹರಿದು ಹಾಕಿದ್ದೇವೆ” ಎಂದು ರಾಜೇಂದ್ರ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ತನ್ನ ಸಹೋದರನನ್ನು ಕಳೆದುಕೊಂಡ ಕೇವಲ 10 ದಿನಗಳ ನಂತರ, ಸೋನು ತನ್ನ ತಾಯಿಯನ್ನು ಸಹ ಕಳೆದುಕೊಂಡರು.

‘ಯಾವುದೇ ಸಹಾಯ ಸಿಕ್ಕಿಲ್ಲ’

ಜೈಸ್ವಾಲ್ ಅವರು ಜಾಹೀರಾತು ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಆದರೆ ಅವರು ಆರೆಸ್‌ಎಸ್‌ಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು, ಅವರು ಬಾಲ್ಯದಿಂದಲೂ ಆಗ್ರಾ ಮತ್ತು ಸುತ್ತಮುತ್ತಲಿನ ಪ್ರತಿಯೊಂದು ಆರ್‌ಎಸ್‌ಎಸ್ ಶಾಖಾಗಳಿಗೆ ಹೋಗುತ್ತಿದ್ದರು ಎಂದು ಅವರ ಸಹೋದರಿ ಸೋನು ನೆನಪಿಸಿಕೊಂಡರು.

2020 ರ ಡಿಸೆಂಬರ್‌ನಲ್ಲಿ ಅವರು ನಿರ್ಮಾಣ ಹಂತದಲ್ಲಿದ್ದ ರಾಮ್ ಮಂದಿರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಗೆ ಪ್ರವಾಸ ಕೈಗೊಂಡರು ಮತ್ತು ನಗರದಾದ್ಯಂತ ರಾಮ್ ಮಂದಿರ ಕುರಿತು ಎಲ್‌ಇಡಿ ಬೋರ್ಡ್‌ಗಳನ್ನು ಹಾಕಿದರು, ಅದರಲ್ಲಿ ‘ರಾಮ್ ಜನ್ಮ್‌ಭೂಮಿ’ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಅವರು ಅಯೋಧ್ಯೆಯಲ್ಲಿ ಈ ಬೋರ್ಡ್‌ಗಳನ್ನು ಉಚಿತವಾಗಿ ಹಾಕಲು ಬಯಸಿದ್ದರು. ಇದು ಅವರು ಬಲವಾಗಿ ನಂಬಿದ ಒಂದು ಕಾರಣವಾಗಿತ್ತು” ಎಂದು ಸಹೋದರಿ ಸೋನು ಹೇಳಿದ್ದಾರೆ.

ಅಮಿತ್ ಮತ್ತು ಅವರ ತಾಯಿ ರಾಜ್ ಕಮಲ್ ಜೈಸ್ವಾಲ್ ಇಬ್ಬರೂ ಏಪ್ರಿಲ್ 19 ರಂದು ಪಾಸಿಟಿವ್ ವರದಿ ಪಡೆದರು. ನಂತರ ಸೋನು ಮತ್ತು ರಾಜೇಂದ್ರ ಅವರನ್ನು ಆಗ್ರಾದ ಅನೇಕ ಆಸ್ಪತ್ರೆಗಳಿಗೆ ದಾಖಲಿಸಲು ಪ್ರಯತ್ನಿಸಿದರು. ಆದರೆ ಹಾಸಿಗೆಯನ್ನು ಹುಡುಕುವಲ್ಲಿ ವಿಫಲವಾದ ನಂತರ ಅವರನ್ನು ಹತ್ತಿರದ ಮಥುರಾಕ್ಕೆ ಕರೆದೊಯ್ದರು.

ಒಂದು ವಾರದ ನಂತರ, ಮಥುರಾ ಆಸ್ಪತ್ರೆಯು ತಾಯಿ-ಮಗ ಜೋಡಿಗೆ ತುರ್ತಾಗಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ವ್ಯವಸ್ಥೆ ಮಾಡುವಂತೆ ಕುಟುಂಬವನ್ನು ಕೇಳಿತು. ಸಹೋದರಿ ಸೋನು ಅಮಿತ್ ಜೈಸ್ವಾಲ್ ಅವರ ಟ್ವಿಟ್ಟರ್ ಹ್ಯಾಂಡಲ್‌ಗೆ ಲಾಗ್ ಇನ್ ಆಗಿ ಸಹಾಯಕ್ಕಾಗಿ ಮನವಿ ಮಾಡುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ.

“ಆದರೆ ನಮಗೆ ಯಾವುದೇ ಸಹಾಯ ಸಿಗಲಿಲ್ಲ” ಎಂದು ಸೋನು ಹೇಳಿದರು.
ನಂತರ ಕುಟುಂಬವು ಹೇಗೋ ಔಷಧಿ ಪಡೆಉಲು ಯಶಸ್ವಿಯಾಯಿತು, ಆದರೆ ಜೈಸ್ವಾಲ್ ಮತ್ತು ಆತನ ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

“ಅವರು ಆರ್‌ಎಸ್‌ಎಸ್‌ನ ಅತ್ಯಂತ ಶ್ರಮಶೀಲ ಸದಸ್ಯರಲ್ಲಿ ಒಬ್ಬರು. ಆರ್‌ಎಸ್‌ಎಸ್‌ನಲ್ಲಿನ ಕೆಲಸದ ಬಗ್ಗೆ ಅವರು ತುಂಬಾ ಆಸಕ್ತಿ ಹೊಂದಿದ್ದರು” ಎಂದು ಆಗ್ರಾದ ವಿಜಯ್ ನಗರ ಆರ್‌ಎಸ್‌ಎಸ್ ವಿಭಾಗದ ಮುಖ್ಯಸ್ಥ ರೊಜ್ಗರ್ ಭಾರತಿ ಅಮಿತ್ ಗುಪ್ತಾ ಹೇಳಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ ಇ-ಶಾಖಾ ಆಯೋಜಿಸಿದ್ದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

‘ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಪಿಎಂ ಮೋದಿ’

ಮಥುರಾದ ಖಾಸಗಿ ಆಸ್ಪತ್ರೆಯು “ಹೆಚ್ಚು ಶುಲ್ಕ ವಿಧಿಸಿದೆ” ಎಂದು ಕುಟುಂಬವು ಆರೋಪಿಸಿದೆ, ಇದು ಅವರ ಉದ್ವೇಗವನ್ನು ಇನ್ನಷ್ಟು ಹೆಚ್ಚಿಸಿದೆ. ಕುಟುಂಬಕ್ಕೆ ನೀಡಿದ ಬಿಲ್‌ಗಳ ಪ್ರಕಾರ, ಜೈಸ್ವಾಲ್ ಅವರ ಚಿಕಿತ್ಸೆಯ 10 ದಿನಗಳ ಒಟ್ಟು ವೆಚ್ಚವು 4.75 ಲಕ್ಷ ರೂ.ಗಳಷ್ಟಿತ್ತು, ಆದರೆ ಆಸ್ಪತ್ರೆಯಲ್ಲಿ 20 ದಿನಗಳನ್ನು ಕಳೆದ ಅವರ ತಾಯಿಗೆ ಸುಮಾರು 11 ಲಕ್ಷ ರೂ. ಬಿಲ್ ಮಾಡಲಾಗಿದೆ.

“ಹಲವು ಇತರ ಶುಲ್ಕಗಳು ಇವೆ. ಆದರೆ ಅವು ಯಾವುವು? ನಾವು ರೆಮ್ಡೆಸಿವಿರ್ ಅರೇಂಜ್ ಮಾಡಿಕೊಂಡೆವು. ಈ ಖಾಸಗಿ ಆಸ್ಪತ್ರೆಗಳು ನಮಗೆ ಯಾತಕ್ಕಾಗಿ ಈ ಪರಿ ದುಬಾರಿ ಬಿಲ್ ಹಾಕುತ್ತಿವೆ? ಎಂದು ಸೋನು ಕೇಳುತ್ತಿದ್ದಾರೆ.

ಈ ಪ್ರದೇಶದ ಇತರ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂಬ ಆರೋಪಗಳಿವೆ. ರೋಗಿಯೊಬ್ಬರಿಗೆ 9 ಲಕ್ಷ ರೂ.ಗಳ ಶುಲ್ಕ ವಿಧಿಸಲಾಗಿದೆ ಎಂಬ ಸುದ್ದಿ ಹೊರಬಿದ್ದ ನಂತರ ಆಗ್ರಾದ ರವಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಗಳ ಪಟ್ಟಿಯಿಂದ ಸೋಮವಾರ ನಿರ್ಬಂಧಿಸಲಾಗಿದೆ. “ನಾವು ಹೇಗೋ ಖರ್ಚನ್ನು ಭರಿಸಿದೆವು.. ಆದರೆ ಬಡ ಕುಟುಂಬಕ್ಕೆ ಇದು ಎಂದಿಗೂ ಸಾಧ್ಯವಾಗುವುದಿಲ್ಲ” ಎಂದು ರಾಜೇಂದ್ರ ಹೇಳಿದರು. ಪಿಎಂ ಮೋದಿ ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರೆ ದೇಶಾದ್ಯಂತ ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಕುಟುಂಬ ಹೇಳಿದೆ.

ಪಿಎಂ ಮೋದಿಯವರಿಗೆ ಮನವಿ ಮಾಡಲು ಭಾವನಾತ್ಮಕ ಮೂಡ್‌ನಲ್ಲಿ ಇದ್ದ ರಾಜೇಂದ್ರ ಅವರು ದಿ ಪ್ರಿಂಟ್ ಕ್ಯಾಮೆರಾವನ್ನು ನೋಡಿದರು.

“ನಾನು ನಿಮ್ಮನ್ನು ಅಂದರೆ ಪ್ರಧಾನಿ ಮೋದಿಯವರನ್ನು ಬೇಡಿಕೊಳ್ಳುತ್ತಿದ್ದೇನೆ. ದೇಶದಲ್ಲಿ ಬಿಕ್ಕಟ್ಟು ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ನೀವು ದೇಶದ ಪ್ರಮುಖ ವ್ಯಕ್ತಿ. ಪಿಎಂ ಮೋದಿ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಏನಾದರೂ ಮಾಡಿ” ಎಂದು ರಾಜೇಂದ್ರ ಬೇಡಿಕೊಂಡರು.

ಮೃತರ ಸಹೋದರಿ ಸೋನು ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಲು ಯತ್ನಿಸಿತು. ಆದರೆ ಅವರು ಲಭ್ಯರಾಗಲಿಲ್ಲ.

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಕುಂಭಮೇಳದಿಂದ ಬಂದ ವ್ಯಕ್ತಿಯಿಂದ ಬೆಂಗಳೂರಿನ 33 ಜನರಿಗೆ ಕೊರೋನಾ: ಕುಂಭಯಾತ್ರಿಗಳೇ ಸುಪರ್-ಸ್ಪ್ರೆಡರ್ಸ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...