ಅಗರ್ತಲಾ: ಉತ್ತರ ತ್ರಿಪುರಾ ಜಿಲ್ಲೆಯ ಇಬ್ಬರು ನಿವಾಸಿಗಳ ಮೇಲೆ ಮಿಜೋರಾಂ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
40 ವರ್ಷದ ವ್ಯಕ್ತಿಯು ತನ್ನ 14 ವರ್ಷಗಳ ಪುತ್ರನೊಂದಿಗೆ ಕೃಷಿ ಕೆಲಸಕ್ಕೆಂದು ನೆರೆಯ ರಾಜ್ಯಕ್ಕೆ ತೆರಳಿದ್ದಾಗ ಘಟನೆ ನಡೆದಿದೆ.
ರಾಮುಹೈ ರಿಯಾಂಗ್ ಎಂಬವರು ತಮ್ಮ 14 ವರ್ಷದ ಮಗ ರತೀಂದ್ರ ಅವರೊಂದಿಗೆ ಕೃಷಿ ಕೆಲಸಕ್ಕೆಂದು ಕಾಂಚನ್‌ಪುರ ಉಪವಿಭಾಗದ ಇತರ ಸ್ಥಳೀಯರೊಂದಿಗೆ ನೆರೆಯ ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಾನುಪಾದ ಚಕ್ರವರ್ತಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮಿಜೋರಾಂ ಪೊಲೀಸರು ‘ಅಸ್ಪಷ್ಟ ಕಾರಣಗಳಿಗಳಿಂದಾಗಿ ತಂದೆ-ಮಗ ಮೇಲೆ ಗುಂಡು ಹಾರಿಸಿದರು. ಇಬ್ಬರೂ ಗಾಯಗೊಂಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇಬ್ಬರೂ ಮಾದಕ ದ್ರವ್ಯಗಳೊಂದಿಗೆ ರಾಜ್ಯವನ್ನು ಪ್ರವೇಶಿಸಿದ್ದರು ಎಂದು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ.
“ರಾಮುಹೈ ತಪ್ಪಿಸಿಕೊಂಡು ತ್ರಿಪುರಾವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆದರೆ ಅವರ ಮಗನನ್ನು ಮಿಜೋರಾಂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು” ಎಂದು ಚಕ್ರವರ್ತಿ ವಿವರಿಸಿದ್ದಾರೆ.
“ಹುಡುಗನಿಗೆ ಐಜ್ವಾಲ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಎಸ್ಪಿ ತಿಳಿಸಿದ್ದಾರೆ. ರಾಮುಹೈ ಅವರು ಜಿಲ್ಲೆಯ ಧರ್ಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ವಂಗ್‌ಮುನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಎಸ್‌ಪಿ ಹೇಳಿದ್ದಾರೆ.
ಅಂತರರಾಜ್ಯ ಗಡಿಯಲ್ಲಿ ಹೆಚ್ಚುವರಿ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲಿ ಪರಿಸ್ಥಿತಿ ಉದ್ವಿಗ್ನವಾದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ.


