ಜ್ವರ ಮತ್ತು ಕಫ ಪ್ರಾರಂಭವಾದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ನಾಳೆ ಬೆಳಗ್ಗೆ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಸಣ್ಣಗಿನ ಜ್ವರ ಕಾಣಿಸಿಕೊಂಡಿದ್ದು ಗಂಟಲಲ್ಲಿ ಕಫ ಹೆಚ್ಚಾಗಿದೆ. ಹಾಗಾಗಿ ವೈದ್ಯರ ಸಲಹೆ ಪಡೆದಿರುವ ಅರವಿಂದ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ.
ಕೇಜ್ರಿವಾಲ್ ಭಾನುವಾರ ಸಚಿವ ಸಂಪುಟ ಸಭೆ ನಡೆಸಿದ್ದು, ಆನಂತರ ಯಾವುದೇ ಸಭೆಗಳನ್ನು ನಡೆಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಗೃಹ ಕಚೇರಿಯಲ್ಲಿ ಉಳಿದುಕೊಂಡಿರುವ ಅರವಿಂದ ಕೇಜ್ರಿವಾಲ್ ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಸಭೆಗಳನ್ನು ನಡೆಸುತ್ತ ಬಂದಿದ್ದರು.
ಈಗ ಸಣ್ಣಗಿನ ಜ್ವರ ಬಂದಿದ್ದು ವೈದ್ಯರ ಸಲಹೆ ಮೇರೆಗೆ ಮಂಗಳವಾರ ಬೆಳಗ್ಗೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರು 28 ಸಾವಿರ ದಾಟಿದ್ದಾರೆ.
ಹೊಸದಾಗಿ 1282 ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ ದೆಹಲಿಯಲ್ಲಿ 182 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಓದಿ: ಖಾಸಗಿ ಆಸ್ಪತ್ರೆಗಳು 20% ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು: ಅರವಿಂದ್ ಕೇಜ್ರಿವಾಲ್


