ನಮ್ಮಲ್ಲಿರುವುದು ಭಿನ್ನಮತ ಅಲ್ಲ, ಭಿನ್ನಾಭಿಪ್ರಾಯ ಮಾತ್ರ, ನಾವು ಎಲ್ಲರಿಗಿಂತ ಭಿನ್ನ ಎಂದವರ ಪಾಡು ಹತ್ತರೊಳಗೆ ಹನ್ನೊಂದು ಎಂಬಂತಾಗಿದೆ. ಯಾರಿಗಿಂತ ಭಿನ್ನವೆಂದು ಅಧಿಕಾರಕ್ಕೆ ಬಂದರೋ ಅವರಿಗಿಂತ ಕಡೆಯಾಗಿ ಹೋಗಿದ್ದಾರೆ. ಯಾರಿಗೆ ಗೊತ್ತು ಅಧಿಕಾರದ ಅಮಲು ಎಲ್ಲ ನಿಯಮಗಳನ್ನೂ ಗಾಳಿಗೆ ತೂರುತ್ತದೆ ಎಂದು. ಅಧಿಕಾರ ಉಂಡ ಮೇಲೆ ಯಯಾತಿಯಾಗಬೇಕು. ಮತ್ತೆಮತ್ತೆ ಯೌವ್ವನ ಬೇಕು. ಹೆಸರನ್ನೂ ಬದಲಾಯಿಸಬೇಕು. ಬೇರೊಬ್ಬರೊಂದಿಗೆ ವಿವಾಹವೂ ನಡೆಯಬೇಕು. ಇದೆಲ್ಲವೂ ಅಪೂರ್ಣಗೊಂಡಿರುವ ಕೆಲಸಗಳನ್ನು ಮುಗಿಸಲು. ಇದಕ್ಕಾಗಿ ಗದ್ದುಗೆ ಬೇಕು. ಗದ್ದುಗೆ ಪಡೆಯಲು ಯಾವ ಗದ್ದುಗೆಗೆ ಬೇಕಾದರೂ ಅಡ್ಡಬೀಳಲು ಸಿದ್ದ. ಇದು ರಾಜಕಾರಣಿಗಳು ಕಾರ್ಯವೈಖರಿ.
ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರಿ ಕುಳಿತಿರುವ ಬಿ.ಎಸ್.ಯಡಿಯೂರಪ್ಪ ಚಿಗುರು ಮೀಸೆಯ ತೋಳ್ಬಲದ ಯುವಕನಾಗಬೇಕು. ಅವರ ಅಧಿಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದು, ಸೈಕಲ್ ನೀಡಿದ್ದು ಬಿಟ್ಟರೆ ಬೇರೇನೂ ಕೆಲಸಗಳು ಆಗಲಿಲ್ಲ. ಕೆಲಸ ಮಾಡಲು ಮನಸ್ಸು ಇರಲಿಲ್ಲವೋ? ಅಥವಾ ಕೆಲಸಕ್ಕೆ ಕೊಕ್ಕೆ ಇಕ್ಕಿದರೂ, ಭಿನ್ನಮತ ಕಾರಣವೋ ಅಂತು ಬಸ್ ಹತ್ತಿ ಇಳಿದು ಮತ್ತೆ ಹತ್ತಿದ್ದಾರೆ. ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾದರೆ, ಜನಪರ ಕೆಲಸಕ್ಕೆ ಬದ್ದನಾಗಿದ್ದರೆ ಹತ್ತು ಸಲ ಮುಖ್ಯಮಂತ್ರಿಯಾದರೂ ಯಾರ ಅಭ್ಯಂತರವೂ ಇಲ್ಲ. ಆದರೆ ಅಧಿಕಾರದ ಲಾಲಸೆಗೆ ಹುದ್ದೆ ಏರಿದರೆ ಅದರಿಂದ ಜನರಿಗಾದ ಪ್ರಯೋಜನವೇನು ಅಲ್ಲವೇ?
ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಭರಪೂರ ಟೀಕಿಸುತ್ತಿದ್ದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರ ಸ್ವಾಮಿ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಜರಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸುವುದಾಗಿ ಹೇಳಿದರು. ಹೇಳಿದಂತೆ ನಡೆದುಕೊಂಡರು. ರಾಜ್ಯದಲ್ಲಿ ಬರ ಆವರಿಸಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಬೊಬ್ಬೆ ಹೊಡೆದರು. ಕೆಲವೆಡೆ ಏಕಾಂಗಿಯಾಗಿ ಮತ್ತೆ ಕೆಲವೆಡೆ ಪರಿವಾರ ಸಮೇತ ಹೋಗಿ ಜನರ ಗಮನ ಸೆಳೆಯುವ ಕೆಲಸ ಮಾಡಿದರು. ಜೊತೆಯಲ್ಲಿದ್ದವರು ಶೋಭಾ ಕರಂದ್ಲಾಜೆ, ಜಿ.ಎಸ್.ಬಸವರಾಜು, ಬಸವರಾಜ ಬೊಮ್ಮಾಯಿ, ಅದೇ ಉಮೇಶ್ ಕತ್ತಿ. ಒಳಗೊಳಗೆ ಚಕ್ರವ್ಯೂಹವನ್ನು ರಚಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರಾಜಿನಾಮೆ ಕೊಡಿಸಿದರು. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ತಿಪ್ಪೆಯನ್ನು ಸಾರಿಸಿದರು. ಕೊನೆಯದಾಗಿ ಮುಖ್ಯಮಂತ್ರಿಯೂ ಆದರು.
ಈಗ ಕಾಲ ಬದಲಾಗಿದೆ. 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಕರ್ನಾಟಕದ ಅಧಿಕಾರದ ಗದ್ದುಗೆ ಹಿಡಿದಿದೆ. ಹಠಕ್ಕೆ ಬಿದ್ದಂತೆ ಯಡಿಯೂರಪ್ಪ ಮುಖ್ಯಮಂತ್ರಿಯು ಆಗಿದ್ದಾರೆ. ಆದರೆ ಏನು ಬಂತು. ಕಷ್ಟಕ್ಕೆ ಆಗದವನು ನಂಟನಲ್ಲ, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಮತ್ಯಾಕೆ.. ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ಸುಮಾರು 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸುರಿದು ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಬಿತ್ತನೆ ಮಾಡಿದ್ದ, ಫಸಲಿಗೆ ಬಂದಿದ್ದ ಬೆಳೆಯೆಲ್ಲವೂ ನೀರು ಪಾಲಾಗಿದೆ. ಮನೆಯಲ್ಲಿ ಕಾಗದ ಪತ್ರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಯಲ್ಲಿ ಇರಲು ಜಾಗವಿಲ್ಲದೆ ಜನರ ಸಿಟ್ಟನ್ನು ಹೊರ ಹಾಕುತ್ತಿದ್ದರೂ ಯಡಿಯೂರಪ್ಪ ಅತ್ತ ತಲೆಯೂ ಹಾಕದೆ ಮೌನಕ್ಕೆ ಶರಣಾಗಿದ್ದಾರೆ. ಉತ್ತರ ಕರ್ನಾಟಕದ ಜನರ ಏನಾಗಿದ್ದಾರೆ ಎಂದು ನೋಡುತ್ತಲೂ ಇಲ್ಲ.
ಹಿಂದಿನ ಸರ್ಕಾರವನ್ನು ಟೀಕಿಸುತ್ತಿದ್ದ ಯಡಿಯೂರಪ್ಪ ಬರಪರಿಹಾರ ನೀಡಲಿಲ್ಲವೆಂದು ಅಕ್ರೋಶಭರಿತರಾದರು. ತಾನೇ ಅಧಿಕಾರಕ್ಕೆ ಏರಿದಾಗ ಅದೇ ಆಕ್ರೋಶದ ಮಾತುಗಳಲ್ಲಿ ಕೇಂದ್ರಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಕೇಳಬಹುದಿಲ್ಲವೇ? ಅದು ಮಾಡಲಿಲ್ಲ. ದೆಹಲಿಗೆ ಎರಡು ಬಾರಿ ಹೋಗಿ ಬಂದು ನಾಟಕ ಮಾಡಿದರು. ಯಡಿಯೂರಪ್ಪನವರಿಗೆ ಹೈಕಮಾಂಡ್ ನಾಯಕರು ಕ್ಯಾರೆ ಅಂದರೋ ಬಿಟ್ಟರೋ! ಪರಿಹಾರವಂತು ಬರಲಿಲ್ಲ. 25 ಸಂಸದರು ಕೂಡ ತುಟಿ ಎರಡು ಮಾಡಲಿಲ್ಲ. ಬಿಜೆಪಿ ಅಧ್ಯಕ್ಷರೂ ನಾನು ಕರಾವಳಿಗೆ ಮಾತ್ರ ಎಂಬಂತೆ ವರ್ತಿಸಿದರು. ಮೀಡಿಯಾಗಳು ಯಡಿಯೂರಪ್ಪ, ಕಟೀಲ್ ನಡುವೆ ಹೊಂದಾಣಿಕೆ ಇಲ್ಲವೆಂಬಂತೆ ಬಿಂಬಿಸಿದವು. ಕೂಡಲೇ ಯಡಿಯೂಪ್ಪ ನನ್ನ ಮತ್ತು ಕಟೀಲು ನಡುವೆ ಗುಲಗಂಜಿಯಷ್ಟೂ ಭಿನ್ನಾಭಿಪ್ರಾಯಗಳಿಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದರು. ಅವರಿಗೆ ಇವರು ಮಣಿದರೋ ಇವರಿಗೆ ಅವರು ಮಣಿದರೋ ಅಂತು ಭಿನ್ನಮತದ ನಾಟಕ ಮಾತ್ರ ನಡೆಯುತ್ತಿದೆ.
‘ಗುಲಗಂಜಿ ಎಷ್ಟೇ ಕೆಂಪಗಿದ್ದರೂ ಅದರ ತಿಕ ಮಾತ್ರ ಕಪ್ಪು’ ಎಂಬಂತೆ ಬಿಜೆಪಿ ಭಿನ್ನರಾಗ ಹಾಡುತ್ತಲೇ ಬರುತ್ತಿದೆ. ಪೀಟಿಲು ಕೊಯ್ಯುತ್ತಲೇ ಇದೆ. ಆದರೆ ಜನರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಜನ ನರಳುತ್ತಲೇ ಇದ್ದಾರೆ. ಉತ್ತರದ ಕೂಗು ಸೊರಗುತ್ತಿದೆ. ಪರಿಹಾರದ ಕನಸು ಗಗನ ಕುಸಮವೆಂದು ಜನ ಭಾವಿಸಿದ್ದರೆ, ಯಡಿಯೂರಪ್ಪ, 25 ಸಂಸದರು ಬಾಯಿ ಬಿಡದಂತೆ ಕೇಂದ್ರದ ಪರಿಹಾರಕ್ಕಾಗಿ ಭಿಕ್ಷೆ ಬೇಡಿ ನಿಂತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್- ಜೆಡಿಎಸ್ ಒಮ್ಮೊಮ್ಮೆ ಸದ್ದು ಮಾಡುತ್ತಾ ಮೌನಕ್ಕೆ ಶರಣಾಗಿವೆ. ಯಡಿಯೂರಪ್ಪ ಅವರ ಶೌರ್ಯ ವಿರೋಧ ಪಕ್ಷದಲ್ಲಿದ್ದಾಗ ಎಂದು ವಿರೋಧಿಗಳು ಗಹಗಹಿಸಿ ನಗುವಂತಾಗಿದೆ.


