ಮಹಿಳಾ ಕಲಾವಿದರ ಸಮಸ್ಯೆ ಆಲಿಸಲು ‘ಆಂತರಿಕ ಸಮಿತಿ’ (ಪಾಶ್ ಸಮಿತಿ) ರಚಿಸುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ವಿಫಲವಾಗಿದ್ದು, ಈ ಕುರಿತು ರಾಜ್ಯ ಮಹಿಳಾ ಆಯೋಗ ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಆಂತರಿಕ ಸಮಿತಿ ರಚಿಸುವಂತೆ ಮಹಿಳಾ ಆಯೋಗ ಈ ಹಿಂದೆ ಕೆಎಫ್‌ಸಿಸಿಗೆ ಸೂಚಿಸಿತ್ತು. ಆದರೆ, ಕೆಎಫ್‌ಸಿಸಿ ಸಮಿತಿ ರಚಿಸುವ ಬದಲು ಪದೇ ಪದೇ ಸಮಯ ವಿಸ್ತರಣೆ ಕೇಳುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಸಮಿತಿಯ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಆಂತರಿಕ ಸಮಿತಿ ರಚಿಸಲು, ವಿಫಲವಾದರೆ ಮಾನ್ಯ ಕಾರಣಗಳನ್ನು ನೀಡಲು ಸೆಪ್ಟೆಂಬರ್ 16 ರಂದು 15 ದಿನಗಳ ಗಡುವನ್ನು ಮಹಿಳಾ ಆಯೋಗವು ಕೆಎಫ್‌ಸಿಸಿಗೆ ನೀಡಿತ್ತು. ಪಾಶ್ ಕಾಯ್ದೆಯಡಿ ಆಂತರಿಕ ಸಮಿತಿ ರಚಿಸುವುದು ಕಡ್ಡಾಯ. ಆ ನಿಟ್ಟಿನಲ್ಲಿ ಮಹಿಳಾ ಆಯೋಗ ಕೆಎಫ್‌ಸಿಸಿಗೆ ಸೂಚನೆ ನೀಡಿತ್ತು.
ಗಡುವಿನ ಒಳಗೆ ಸಮಿತಿ ರಚಿಸಲು ವಿಫಲವಾದ ಕೆಎಫ್‌ಸಿಸಿ, ಸಮಯ ವಿಸ್ತರಣೆ ಕೋರಿ ಎರಡು ಬಾರಿ ಪತ್ರ ಬರೆದಿದೆ. ಆ ಬಳಿಕವೂ ಸಮಿತಿ ರಚನೆ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದಿರಲಿಲ್ಲ. ಸೆಪ್ಟೆಂಬರ್ 18 ರಂದು ಕೆಎಫ್‌ಸಿಸಿಗೆ ಪತ್ರ ಬರೆದಿದ್ದ ಮಹಿಳಾ ಆಯೋಗ, ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ, ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ವಿವರವಾದ ಕ್ರಿಯಾ ಯೋಜನೆಯನ್ನು ಕೋರಿತ್ತು.
ವರದಿಗಳ ಪ್ರಕಾರ, ಆಂತರಿಕ ಸಮಿತಿ ರಚನೆ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದಲ್ಲಿ ಪ್ರತಿರೋಧವೂ ಎದುರಾಗಿದೆ. ಸಮಿತಿ ರಚನೆ ಸಂಬಂಧ ಚರ್ಚಿಸಲು ಮಹಿಳಾ ಆಯೋಗ ಕರೆದಿದ್ದ ಸಭೆಯಲ್ಲಿ ಹಾಜರಿದ್ದ ಕೆಲ ಮಹಿಳಾ ಕಲಾವಿದರು, ತಾವು ಬಯಸಿದ್ದನ್ನು ಹೇಳಲು ತಡೆ ಎದುರಿಸುತ್ತಿದ್ದರು. ಇನ್ನೂ ಕೆಲವರು ಮೌನವಾಗಿದ್ದರು.
ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು, “ಪಾಶ್ ಕಾಯ್ದೆಯ ಪ್ರಕಾರ ಕಡ್ಡಾಯವಾಗಿ ಆಂತರಿಕ ಸಮಿತಿ ರಚನೆ ಮಾಡಬೇಕು. ಇಲ್ಲದಿದ್ದರೆ, ಫಿಲ್ಮ್ ಚೇಂಬರ್ ಮಾನ್ಯತೆ ರದ್ದಾಗಬಹುದು ಮತ್ತು ದಂಡ ವಿಧಿಸಬಹುದು. ನಾವು ಸಮಿತಿ ರಚಿಸಲು ಕೊಟ್ಟ ಗಡುವು ಮುಗಿದ ಮೇಲೆ ಫಿಲ್ಮ್ ಚೇಂಬರ್ ಎರಡು ಬಾರಿ ಸಮಯ ವಿಸ್ತರಣೆ ಕೇಳಿದೆ. ಹಾಗೆಲ್ಲ ಸಮಯ ವಿಸ್ತರಣೆ ಮಾಡಲು ಅವಕಾಶವಿಲ್ಲ. ಅವರು ಕಡ್ಡಾಯವಾಗಿ ಸಮಿತಿ ರಚಿಸಲೇಬೇಕು. ಹಾಗಾಗಿ, ನಾವು ಪಾಶ್ ನೋಡಲ್ ಅಧಿಕಾರಿಯಾದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ” ಎಂದಿದ್ದಾರೆ.
ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮಿತಿ ರಚಿಸುವ ಬೇಡಿಕೆ ಬಂದಿತ್ತು. ನಾವು ಸಮಿತಿ ರಚನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಾಗ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಬ್ಬರು ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆಗೆ ನಾವು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಸರ್ಕಾರದ ಒಪ್ಪಿಗೆಯೊಂದೇ ಬಾಕಿಯಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಎದುರಿಸಿದ ಲೈಂಗಿಕ ದೌರ್ಜನ್ಯಗಳನ್ನು ಬಿಚ್ಚಿಟ್ಟ ಬಳಿಕ, ಕರ್ನಾಟಕದಲ್ಲೂ ಅಂತಹದ್ದೇ ಸಮಿತಿ ರಚನೆಗೆ ಆಗ್ರಹ ಕೇಳಿ ಬಂದಿದೆ. ಈ ಸಂಬಂಧ ನಟಿಯರ ತಂಡವೊಂದು ಸಿಎಂಗೆ ಮನವಿಯನ್ನೂ ಸಲ್ಲಿಸಿದೆ.
ಇದನ್ನೂ ಓದಿ : ಹೇಮಾ ಸಮಿತಿ ವರದಿ : ಎಸ್‌ಐಟಿಗೆ ನೋಡಲ್ ಅಧಿಕಾರಿ ನೇಮಿಸಲು ಹೈಕೋರ್ಟ್ ಆದೇಶ


