ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರದ ಕುರಿತ ಅಂತಿಮ ನಿರ್ಧಾರವನ್ನು ಸಾಹಿತಿಗಳು, ಭಾಷಾ ತಜ್ಞರು ಮತ್ತು ರಾಜಕೀಯ ನಾಯಕರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ. ಎಲ್ಲರೊಂದಿಗೆ ಮಾತುಕತೆ ನಡೆಸಿ
ಸೋಮವಾರ ತಡರಾತ್ರಿ ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಈ ವಿಷಯದ ಕುರಿತು ಚರ್ಚಿಸಲು ಅವರು ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ, ರಾಜ್ಯ ಸಚಿವ ಡಾ. ಪಂಕಜ್ ಭೋಯರ್ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
1 ರಿಂದ 5 ನೇ ತರಗತಿಯವರೆಗೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಂದಿಯನ್ನು ‘ಸಾಮಾನ್ಯ’ವಾಗಿ ಮೂರನೇ ಭಾಷೆಯಾಗಿ ಕಲಿಸಲಾಗುವುದು ಎಂದು ರಾಜ್ಯ ಸರ್ಕಾರ ಕಳೆದ ವಾರ ತಿದ್ದುಪಡಿ ಮಾಡಿದ ಆದೇಶವನ್ನು ಹೊರಡಿಸಿತ್ತು.
ಹಿಂದಿ ಭಾಷೆಯನ್ನು ಸರ್ಕಾರ ಕಡ್ಡಾಯ ಮಾಡದಿದ್ದರೂ, ಹಿಂದಿಯನ್ನು ಹೊರತುಪಡಿಸಿ ಯಾವುದೇ ಭಾರತೀಯ ಭಾಷೆಯನ್ನು ಮಕ್ಕಳು ಕಲಿಯಬಹುದಾಗಿದೆ. ಆದರೆ ಶಾಲೆಯ ಪ್ರತಿ ತರಗತಿಗೆ ಕನಿಷ್ಠ 20 ವಿದ್ಯಾರ್ಥಿಗಳ ಒಪ್ಪಿಗೆಯನ್ನು ಇದಕ್ಕೆ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
ಸೋಮವಾರ ಸಿಎಂ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹೊಸ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ನೀತಿಯ ಪರಿಣಾಮಗಳ ಕುರಿತು ವಿವರವಾದ ಚರ್ಚೆಗಳು ನಡೆದವು. ವಿವಿಧ ರಾಜ್ಯಗಳಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಉಲ್ಲೇಖಕ್ಕಾಗಿ ಪ್ರಸ್ತುತಪಡಿಸಲಾಗುವುದು ಮತ್ತು ಶೈಕ್ಷಣಿಕ ಪರಿಣಾಮದ ಬಗ್ಗೆ, ವಿಶೇಷವಾಗಿ ಮರಾಠಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸಮಗ್ರ ಪ್ರಸ್ತುತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
“ಅಂತಿಮ ನಿರ್ಧಾರಕ್ಕೆ ಬರುವ ಮೊದಲು ವಿದ್ವಾಂಸರು, ಬರಹಗಾರರು, ರಾಜಕೀಯ ನಾಯಕರು ಮತ್ತು ಇತರ ಪಾಲುದಾರರೊಂದಿಗೆ ರಚನಾತ್ಮಕ ಸಮಾಲೋಚನಾ ಪ್ರಕ್ರಿಯೆಯನ್ನು ನಡೆಸಲು ಒಪ್ಪಿಗೆ ನೀಡಲಾಗಿದೆ” ಎಂದು ಫಡ್ನವಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಭೆಯ ನಂತರ, ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಮುಂದಿನ ಹಂತದ ಸಮಾಲೋಚನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಭೆಯ ನಂತರ, NEP ಅನುಷ್ಠಾನದ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು ರಾಜ್ಯ ಸರ್ಕಾರವು ರಾಜಕೀಯ ನಾಯಕರು ಮತ್ತು ಸಾಹಿತಿಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಚರ್ಚೆ ನಡೆಸಲಿದೆ ಎಂದು ಭೂಸೆ ವರದಿಗಾರರಿಗೆ ತಿಳಿಸಿದ್ದರೆ.
ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. NEP ಚೌಕಟ್ಟಿನಡಿಯಲ್ಲಿ ಈ ಹಿಂದೆ ತೆಗೆದುಕೊಂಡ ನಿರ್ಧಾರಗಳನ್ನು ನಿರ್ಣಯಿಸಲು ಸೋಮವಾರದಂದು ಪರಿಶೀಲನಾ ಸಭೆ ನಡೆಸಲಾಯಿತು ಎಂದು ಭೂಸೆ ಹೇಳಿದ್ದಾರೆ.
“(ಎಂಎನ್ಎಸ್ ಮುಖ್ಯಸ್ಥ) ರಾಜ್ ಠಾಕ್ರೆ ಅಥವಾ ಖ್ಯಾತ ಬರಹಗಾರರಾಗಿರಲಿ, ಸಂಬಂಧಪಟ್ಟ ಎಲ್ಲರೊಂದಿಗೂ ನಾವು ಮಾತುಕತೆ ನಡೆಸುತ್ತೇವೆ. ನಾವು ಎಲ್ಲಾ ಸಂಗತಿಗಳನ್ನು ಅವರ ಮುಂದೆ ಇಡುತ್ತೇವೆ ಮತ್ತು ಸಂಪೂರ್ಣ ಅಧ್ಯಯನದ ನಂತರ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ಹಿಂದುಳಿಯದಂತೆ ನೋಡಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕಳೆದ ವಾರ ವಿದ್ಯಾರ್ಥಿಗಳ ಮೇಲೆ ಹಿಂದಿಯನ್ನು “ಹೇರುವ” ಅಗತ್ಯವೇನಿತ್ತು ಎಂದು ಕೇಳಿದ್ದರು ಮತ್ತು ರಾಜ್ಯದ ಶಾಲೆಗಳಿಗೆ “ಉದ್ದೇಶಪೂರ್ವಕವಾಗಿ ಭಾಷಾ ವಿಭಜನೆಯನ್ನು ಸೃಷ್ಟಿಸುವ ಗುಪ್ತ ಕಾರ್ಯಸೂಚಿಯನ್ನು” ವಿಫಲಗೊಳಿಸುವಂತೆ ಮನವಿ ಮಾಡಿದ್ದರು. ಹಿಂದಿ ಕೆಲವು ಉತ್ತರ ರಾಜ್ಯಗಳ ರಾಜ್ಯ ಭಾಷೆಯಾಗಿದೆ, ಆದರೆ ಮರಾಠಿ ವ್ಯಾಪಕವಾಗಿ ಬಳಸಲಾಗುವ ಮಹಾರಾಷ್ಟ್ರದ ಮೇಲೆ ಅದನ್ನು ಬಲವಂತಪಡಿಸುವುದು ತಪ್ಪು ಎಂದು ಅವರು ಪ್ರತಿಪಾದಿಸಿದ್ದರು. ಎಲ್ಲರೊಂದಿಗೆ ಮಾತುಕತೆ ನಡೆಸಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ವಿಶ್ವಗುರು’ ಮೋದಿ ಇರಾನ್ – ಇಸ್ರೇಲ್ ಯುದ್ಧ ನಿಲ್ಲಿಸಲಿ: ಮಲ್ಲಿಕಾರ್ಜುನ ಖರ್ಗೆ
‘ವಿಶ್ವಗುರು’ ಮೋದಿ ಇರಾನ್ – ಇಸ್ರೇಲ್ ಯುದ್ಧ ನಿಲ್ಲಿಸಲಿ: ಮಲ್ಲಿಕಾರ್ಜುನ ಖರ್ಗೆ

