ಪ್ರಸ್ತಾವನೆ
ನಮ್ಮದು ಸಂವಿಧಾನಾತ್ಮಕ ಒಕ್ಕೂಟ ರಾಜಕೀಯ ವ್ಯವಸ್ಥೆಯಾಗಿದೆ. ನಮ್ಮ ಸಂವಿಧಾನವು ಒಕ್ಕೂಟಾತ್ಮಕವೋ ಅಥವಾ ಏಕಾಕಾರಿಯಾದುದೋ ಅನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ-ನಡೆಯುತ್ತಿದೆ. ಆಡಳಿತಾತ್ಮಕ, ಶಾಸನಾತ್ಮಕ ಮತ್ತು ಹಣಕಾಸು ಅಧಿಕಾರ-ಜವಾಬ್ದಾರಿಗಳ ವಿಷಯದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಂಚುವಿಕೆಯನ್ನು ಒಕ್ಕೂಟ ವ್ಯವಸ್ಥೆಯೆಂದು ಕರೆಯಲಾಗುತ್ತದೆ. ಹಣಕಾಸು ಸಂಬಂಧದ ಕ್ಷೇತ್ರದಲ್ಲಿಯೂ ತೆರಿಗೆ ವಿಧಿಸುವ, ರೆವಿನ್ಯೂ ಸಂಗ್ರಹಿಸುವ ವಿಷಯದಲ್ಲಿಯೂ ಅಧಿಕಾರಗಳು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಲಾಗಿದೆ. ಉದಾ: ವರಮಾನ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಒಕ್ಕೂಟ ಸರ್ಕಾರ ವಿಧಿಸುತ್ತದೆ ಮತ್ತು ಸಂಗ್ರಹಿಸಿಕೊಳ್ಳುತ್ತದೆ. ಆದರೆ ಇದರ ಉತ್ಪತ್ತಿಯನ್ನು ಒಕ್ಕೂಟ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗುತ್ತದೆ. ಇದೇ ರೀತಿಯಲ್ಲಿ ವೃತ್ತಿ ತೆರಿಗೆ, ರಾಜ್ಯ ಅಬಕಾರಿ ಸುಂಕ, ಮುಂದ್ರಾಂಕ ಮತ್ತು ನೋಂದಣಿ ಸುಂಕ ಮುಂತಾದವು ರಾಜ್ಯ ತೆರಿಗೆಗಳು. ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ಸಂಕೀರ್ಣವಾದ ಮತ್ತು ವಿವಾದಾತ್ಮಕವಾದ ಸಂಗತಿಯೆಂದರೆ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಣಕಾಸು ಸಂಬಂಧಗಳು. ಈ ವಿಷಯದಲ್ಲಿ ಸಂವಿಧಾನವು ಹೆಚ್ಚಿನ ಅಧಿಕಾರಗಳನ್ನು, ಅಂದರೆ ಹೆಚ್ಚು ಉತ್ಪತ್ತಿ ನೀಡುವ ತೆರಿಗೆಗಳನ್ನು ಒಕ್ಕೂಟಕ್ಕೆ ನೀಡಿ ರಾಜ್ಯಗಳು ಹಣಕಾಸು ಸಂಪನ್ಮೂಲಕ್ಕೆ ಒಕ್ಕೂಟವನ್ನು ಅವಲಂಬಿಸುವಂತೆ ಮಾಡಲಾಗಿದ ಎಂಬ ಟೀಕೆಯಿದೆ. ಈ ಅವಲಂಬನೆಯ ಸಮಸ್ಯೆಯು ಜಿಎಸ್‌ಟಿ ಜಾರಿಗೆ ಬಂದ ಮೇಲೆ ಹೆಚ್ಚಾಗಿದೆ.
15ನೆಯ ಹಣಕಾಸು ಆಯೋಗದ ಪ್ರಕಾರ 2018-19ರಲ್ಲಿ ದೇಶದಲ್ಲಿ ಒಟ್ಟು ತೆರಿಗೆ ಸಂಪನ್ಮೂಲ ಸಂಗ್ರಹದ ಮೇಲಿನ ಅಧಿಕಾರದಲ್ಲಿ ಒಕ್ಕೂಟದ ಬಳಿ ಶೇ. 62.7ರಷ್ಟು ಅಧಿಕಾರವಿದ್ದರೆ ದೇಶದ ಒಟ್ಟು ಸಾರ್ವಜನಿಕ ವೆಚ್ಚದಲ್ಲಿ ಶೇ. 62.4ರಷ್ಟು ರಾಜ್ಯಗಳ ಹೊಣೆಯಾಗಿದೆ. ಇಲ್ಲಿರುವ ಅಸಮತೋಲನವನ್ನು ಸ್ಪಷ್ಟವಾಗಿ ಗುರುತಿಸಬಹುದು. ರಾಜ್ಯಗಳ ಹಣಕಾಸು ಸ್ವಾಯತ್ತತೆಯು ತೀರ ದುರ್ಬಲವಾಗಿರುವುದು ಕಂಡುಬರುತ್ತದೆ.
ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಈಗ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಸಂಬಂಧವನ್ನು ನಿರ್ವಹಿಸುವ ಹಣಕಾಸು ಆಯೋಗಗಳ (ವಿಶೇಷವಾಗಿ 16ನೆಯ ಆಯೋಗ) ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಲು ಪ್ರಯತ್ನಿಸಲಾಗಿದೆ. ಹಣಕಾಸು ಆಯೋಗಗಳಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಅವರು ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ. ಇದಕ್ಕಿಂತ ಮುಖ್ಯವಾಗಿ ಇಂದಿನ ಒಕ್ಕೂಟ ಸರ್ಕಾರವು 2014ರಿಂದ ಹಣಕಾಸನ್ನು ಸಂವಿಧಾನಾತ್ಮಕವಾಗಿ ವರ್ಗಾಯಿಸುವುದರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತಿತರ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಒಕ್ಕೂಟ ತತ್ವದ ಬಗ್ಗೆ ಬಿಜೆಪಿಗೆ ವಿಶ್ವಾಸವಿಲ್ಲ. ಇಲ್ಲಿದೆ ಮುಖ್ಯ ಸಮಸ್ಯೆ.
ಹಣಕಾಸು ಆಯೋಗಗಳು ಮತ್ತು ಕರ್ನಾಟಕ ರಾಜ್ಯದ ಹಣಕಾಸು ಸಮಸ್ಯೆಗಳು
ನಮ್ಮ ಸಂವಿಧಾನದಲ್ಲಿ ತೆರಿಗೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಉತ್ಪತ್ತಿ ನೀಡುವ ತೆರಿಗೆಗಳೆಲ್ಲವೂ ಒಕ್ಕೂಟ ಸರ್ಕಾರದ ಬಳಿಯಲ್ಲಿವೆ ಮತ್ತು ರಾಜ್ಯಗಳ ಬಳಿಯಲ್ಲಿನ ತೆರಿಗೆಗಳು ಹೆಚ್ಚು ಉತ್ಪತ್ತಿ ನೀಡುವವಲ್ಲ. ಇದನ್ನು ಗಮನಿಸಿದ ಸಂವಿಧಾನ ಕರ್ತೃಗಳು ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ಭಾರತದ ರಾಷ್ಟ್ರಪತಿ ಅವರು ಹಣಕಾಸು ಆಯೋಗವನ್ನು ರಚಿಸಬೇಕು. ಅದು ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳ ನಡುವೆ ದೇಶದ ಒಟ್ಟು ತೆರಿಗೆ ರಾಶಿಯನ್ನು ಹಂಚಿಕೊಳ್ಳುವುದಕ್ಕೆ ಒಂದು ಸೂತ್ರವನ್ನು ನೀಡಬೇಕು. ತೆರಿಗೆ ರಾಶಿಯ ಹಂಚಿಕೆಯಲ್ಲದೆ ಇತರೆ ರೀತಿಯ ವರ್ಗಾವಣೆಗಳ ಬಗ್ಗೆಯೂ ಅದು ಶಿಫಾರಸ್ಸು ನೀಡಬೇಕು. ಈ ವ್ಯವಸ್ಥೆಯು 1951ರಿಂದ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳನ್ನು ರಚಿಸಲಾಗಿದೆ. ಈಗ 16ನೆಯ ಆಯೋಗವನ್ನು ರಚಿಸಲಾಗಿದೆ.
ಆರಂಭದಿಂದಲೂ ಹಣಕಾಸು ಆಯೋಗಗಳ ಶಿಫಾರಸ್ಸುಗಳ ಬಗ್ಗೆ ರಾಜ್ಯಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಆರಂಭದಲ್ಲಿ ಈ ಹಂಚಿಕೊಳ್ಳುವ ರಾಶಿಯಲ್ಲಿ ವರಮಾನ ತೆರಿಗೆ ಮತ್ತು ಯೂನಿಯನ್ ಎಕ್ಸೈಸ್ ತೆರಿಗೆಗಳು ಮಾತ್ರ ಸೇರಿದ್ದವು. ಆದರೆ 2000ದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲ ತೆರಿಗೆಗಳನ್ನು ಹಂಚಿಕೊಳ್ಳುವ ತೆರಿಗೆ ರಾಶಿಗೆ ಸೇರಿಸಲಾಯಿತು. ಆದರೆ ಸೆಸ್ ಮತ್ತು ಸರ್‌ಚಾರ್ಚ್ ತೆರಿಗೆಗಳನ್ನು ಹಂಚಿಕೊಳ್ಳುವ ತೆರಿಗೆ ರಾಶಿಯಿಂದ ಹೊರಗಿಡಲಾಯಿತು.
14ನೆಯ ಹಣಕಾಸು ಆಯೋಗವು ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ರಾಶಿಯಲ್ಲಿ ಶೇ.42ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸುವಂತೆ ಶಿಫಾರಸ್ಸು ಮಾಡಿತು. ಇದನ್ನು ಒಕ್ಕೂಟ ಸರ್ಕಾರ ಒಪ್ಪಿಕೊಂಡು ಅನುಷ್ಠಾನಗೊಳಿಸಿತು. ಆದರೆ 15ನೆಯ ಹಣಕಾಸು ಆಯೋಗವು ರಾಜ್ಯಗಳಿಗೆ ವರ್ಗಾವಣೆ ಮಾಡುವ ಪ್ರಮಾಣದಲ್ಲಿ ಶೇ.1ರಷ್ಟನ್ನು ರಾಜ್ಯದ ಸ್ಥಾನಮಾನ ಕಳೆದುಕೊಂಡು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ಗಳಿಗೆ ಮತ್ತು ಉಳಿದ ಶೇ. 41 ರಷ್ಟನ್ನು ಉಳಿದ ರಾಜ್ಯಗಳಿಗೆ ಎಂದು ಶಿಫಾರಸ್ಸು ಮಾಡಿತು.
15ನೆಯ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ಕರ್ನಾಟಕವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮೊದಲನೆಯದಾಗಿ 14ನೆಯ ಹಣಕಾಸು ಆಯೋಗವು ಒಕ್ಕೂಟದ ಒಟ್ಟು ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲು ಶೇ.4.71 ಎಂದು ಶಿಫಾರಸ್ಸು ಮಾಡಿತ್ತು. 15ನೆಯ ಆಯೋಗವು ಶೇ.41ರಷ್ಟು ಒಟ್ಟು ತೆರಿಗೆ ರಾಶಿಯ ವರ್ಗಾವಣೆಯಲ್ಲಿ ಕರ್ನಾಟಕದ ಪಾಲನ್ನು ಶೇ.3.64ಕ್ಕಿಳಿಸಿತು. ಈ ಬದಲಾವಣೆಯ ಪರಿಣಾಮವಾಗಿ 14ನೆಯ ಹಣಕಾಸು ಆಯೋಗದ ಕೊನೆಯ ವರ್ಷ 2019-20ರಲ್ಲಿ ಒಕ್ಕೂಟ ತೆರಿಗೆ ರಾಶಿಯಿಂದ ಕರ್ನಾಟಕಕ್ಕೆ ವರ್ಗಾವಣೆಯಾದ ಮೊತ್ತ ರೂ.32209 ಕೋಟಿ. ಆದರೆ 15ನೆಯ ಹಣಕಾಸು ಆಯೋಗದ ಮೊದಲ ವರ್ಷ 2020-21ರಲ್ಲಿ ವರ್ಗಾವಣೆಯಾದ ಮೊತ್ತ ರೂ.20052 ಕೋಟಿ. ಇಲ್ಲಿನ ಕಡಿತ ರೂ.12157 ಕೋಟಿ. ಇದೇ ರೀತಿಯಲ್ಲಿ ಕರ್ನಾಟಕಕ್ಕೆ ಒಕ್ಕೂಟ ಸರ್ಕಾರವು ನೀಡುತ್ತಿರುವ ಸಹಾಯಧನದಲ್ಲಿಯೂ ಕಡಿತವಾಗುತ್ತಿದೆ. ಒಕ್ಕೂಟ ಸರ್ಕಾರವು 2018-19ರಲ್ಲಿ ಎಲ್ಲ ರಾಜ್ಯಗಳಿಗೆ ನೀಡಿದ್ದ ಒಟ್ಟು ಸಹಾಯಾನುದಾನ ರೂ.4.40 ಲಕ್ಷ ಕೋಟಿ. ಇದರಲ್ಲಿ ಕರ್ನಾಟಕದ ಪಾಲು ಶೇ.3.40. ಆದರೆ 2023-24ರಲ್ಲಿ ಒಕ್ಕೂಟ ಸರ್ಕಾರವು ನೀಡಿರುವ ಒಟ್ಟು ಸಹಾಯಾನುದಾನ ರೂ.8.08 ಲಕ್ಷ ಕೋಟಿ. ಇದರಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ.1.61ಕ್ಕಿಳಿದಿದೆ. ಹೀಗೆ ಹಣಕಾಸು ಆಯೋಗಗಳಿಂದ ಕರ್ನಾಟಕ ಪಡೆದುಕೊಳ್ಳುತ್ತಿರುವ ಪಾಲು ಕಡಿಮೆಯಾಗುತ್ತಾ ಬಂದಿದೆ. ಇದರಿಂದ ಕರ್ನಾಟಕ ಸರ್ಕಾರದ ಹಣಕಾಸು ಸ್ವಾಯತ್ತತೆಗೆ ಧಕ್ಕೆಯುಂಟಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯವು ತನಗೆ ಅಗತ್ಯವಾದ ಆರ್ಥಿಕನೀತಿಯನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇಂದಿನ ಒಕ್ಕೂಟ ಸರ್ಕಾರವು ದೇಶದ ಎಲ್ಲ ರಾಜ್ಯಗಳೂ ತನ್ನ ಆರ್ಥಿಕ ನೀತಿಯನ್ನೇ ಪಾಲಿಸಬೇಕು ಎಂದು ಬಯಸುತ್ತದೆ. ಒಕ್ಕೂಟ ತತ್ವಕ್ಕೆ ಬದಲಾಗಿ ಬಿಜೆಪಿಯು ’ಅಖಂಡ’ ನೀತಿಯನ್ನು ಅನುಸರಿಸುತ್ತಿದೆ.
ರಾಜ್ಯಕ್ಕೆ 15ನೆಯ ಹಣಕಾಸು ಆಯೋಗದ ವಿಶೇಷ ಅನುದಾನ ರೂ.5495 ಕೋಟಿ
14ನೆಯ ಹಣಕಾಸು ಆಯೋಗವು ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲನ್ನು ಶೇ.4.71 ಎಂದು ನಿಗದಿಪಡಿಸಿತ್ತು. ಆದರೆ ಕೆಲವು ಕಾರಣಗಳಿಂದಾಗಿ 15ನೆಯ ಹಣಕಾಸು ಆಯೋಗವು ಇದನ್ನು ಶೇ.3.64 ಕ್ಕಿಳಿಸಿತು. ಇದರಿಂದ ರಾಜ್ಯಕ್ಕೆ ಒಕ್ಕೂಟ ತೆರಿಗೆ ರಾಶಿಯಲ್ಲಿನ ವರ್ಗಾವಣೆ ಕಡಿಮೆಯಾಯಿತು. ಇದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ ವರ್ಗಾವಣೆಯ ಪ್ರಮಾಣವನ್ನು ನಿರ್ಧರಿಸುವ ಸೂಚಿಗಳಲ್ಲಿ ಜನಸಂಖ್ಯೆಯ ಪ್ರಮಾಣ ಪ್ರಮುಖವಾದುದಾಗಿದೆ. ಇದುವರೆವಿಗೂ 1971ರ ಜನಸಂಖ್ಯೆಯನ್ನು ಆಧಾರ ಮಾಡಿಕೊಂಡು ಬರಲಾಗುತ್ತಿತ್ತು. ಇದನ್ನು ಮಾಡಲು ಕಾರಣವಾಗಿದ್ದ ಅಂಶವೆಂದರೆ ಜನಸಂಖ್ಯೆ ಬೆಳವಣಿಗೆಯನ್ನು ದಕ್ಷಿಣ ಭಾರತದ ರಾಜ್ಯಗಳು ತೀವ್ರ ರೀತಿಯಲ್ಲಿ ನಿಯಂತ್ರಿಸಿದ್ದವು. ಆದರೆ ಉತ್ತರ ಭಾರತದಲ್ಲಿ ಇದು ತೀವ್ರವಾಗಿ ಬೆಳೆಯುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗುತ್ತದೆ ಎಂಬ ಕಾರಣದಿಂದ ಜನಸಂಖ್ಯೆಯನ್ನು 1971ಕ್ಕೆ ಸ್ಥಗಿತ ಮಾಡಲಾಗಿತ್ತು. ಆದರೆ 15ನೆಯ ಹಣಕಾಸು ಆಯೋಗಕ್ಕೆ ಒಕ್ಕೂಟ ಸರ್ಕಾರ ನೀಡಿದ್ದ ಪರಿಶೀಲನಾರ್ಹ ಅಂಶದ ಪ್ರಕಾರ ಆಯೋಗವು 2011ರ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಯಿತು. ಇದರಿಂದ ಜನಸಂಖ್ಯೆಯ ಬೆಳವಣಿಗೆಯನ್ನು ಕೆಳಮಟ್ಟಕ್ಕೆ ಇಳಿಸಿದ್ದ ರಾಜ್ಯಗಳಿಗೆ, ಮುಖ್ಯವಾಗಿ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಯಿತು. ಎರಡನೆಯದಾಗಿ ಒಕ್ಕೂಟದ ತೆರಿಗೆ ರಾಶಿಯಲ್ಲಿ ಪ್ರತಿ ರಾಜ್ಯದ ಪಾಲನ್ನು ನಿಗದಿಪಡಿಸಲು ಬಳಸುವ ಒಂದು ಮುಖ್ಯ ಸೂಚಿಯೆಂದರೆ ವರಮಾನದ ಅಂತರ(ಇನ್‌ಕಮ್ ಡಿಸ್ಟೆನ್ಸ್). ಯಾವ ರಾಜ್ಯದ ತಲಾ ವರಮಾನವು ಹೆಚ್ಚಿರುತ್ತದೋ ಅವುಗಳಿಗೆ ತೆರಿಗೆ ರಾಶಿ ವರ್ಗಾವಣೆಯಲ್ಲಿ ಕಡಿತವಾಗುತ್ತದೆ. ಈ ಎರಡೂ ನೆಲೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಯಿತು.
ಹೀಗೆ ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲು ಶೇ.4.71ರಿಂದ ಶೇ.3.64ಕ್ಕೆ ಇಳಿದಿದ್ದುದರಿಂದ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಕಡಿತವಾಯಿತು. ಈ ಅನ್ಯಾಯವನ್ನು ಗಮನಿಸಿ 15ನೆಯ ಆಯೋಗವು 2020-21ಕ್ಕೆ ರೂ.5495 ಕೋಟಿ ವಿಶೇಷ ಅನುದಾನವನ್ನು ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ನೀಡಿತ್ತು. ಆದರೆ ಒಕ್ಕೂಟ ಸರ್ಕಾರ, ವಿಶೇಷವಾಗಿ ವಿತ್ತಮಂತ್ರಿಯ ಒತ್ತಾಯದ ಕಾರಣ ಅಂತಿಮ ವರದಿಯಲ್ಲಿ ಸದರಿ ಶಿಫಾರಸ್ಸನ್ನು ಕೈಬಿಡಲಾಯಿತು. ಆದರೆ ಇದನ್ನು ಆಯೋಗವು 2020-21ನೆಯ ಸಾಲಿಗೆ ಮಾತ್ರ ವಿಶೇಷವಾಗಿ ಶಿಫಾರಸ್ಸು ಮಾಡಿತ್ತು. ಆಯೋಗದ ಸಾಮಾನ್ಯ ಶಿಪಾರಸ್ಸುಗಳು 2021-22ರಿಂದ 2025-26ಕ್ಕೆ ಅನ್ವಯವಾಗುತ್ತಿತ್ತು. ಹಾಗಾಗಿ 2020-21ನೆಯ ಸಾಲಿಗೆ ಆಯೋಗದ ವಿಶೇಷ ಅನುದಾನದ ಶಿಫಾರಸ್ಸನ್ನು ಒಕ್ಕೂಟ ಜಾರಿಗೊಳಿಸಬೇಕಾಗಿತ್ತು. ಆದರೆ ಇದನ್ನು ನೀಡದೆ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ. ಸಹಾಯಧನ ನೀಡುವಲ್ಲಿಯೂ ಅದು ಅನ್ಯಾಯ ಮಾಡಿದೆ. ಕರ್ನಾಟಕದ ಒಟ್ಟು ವಾರ್ಷಿಕ ತೆರಿಗೆ ರಾಶಿಯಲ್ಲಿ ಸಹಾಯಧನದ ಪ್ರಮಾಣವು 2017-18ರಲ್ಲಿ ಶೇ. 11.09ರಷ್ಟಿದ್ದುದು 2024-25ರಲ್ಲಿ ಇದು ಶೇ. 5.81ಕ್ಕಿಳಿದಿದೆ.
ಭಾರತ ಒಕ್ಕೂಟ ಸರ್ಕಾರವು ಹೆಜ್ಜೆಹೆಜ್ಜೆಗೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಅದು ಕರ್ನಾಟಕಕ್ಕೆ ನೀಡುವ ಸಹಾಯಾನುದಾನವು 2017-18ರಿಂದ 2024-25ರ ಅವಧಿಯಲ್ಲಿ ಅರ್ಧಕ್ಕಿಂತ ಕಡಿಮೆಯಾಗಿದೆ.
16ನೆಯ ಹಣಕಾಸು ಆಯೋಗ ಮತ್ತು ರಾಜ್ಯದ ಹಕ್ಕೊತ್ತಾಯ
15ನೆಯ ಹಣಕಾಸು ಆಯೋಗದ ಶಿಫಾರಸ್ಸುಗಳ ಕಾಲಾವಧಿಯು 2021-22ರಿಂದ 2025-26ರವರೆಗಿದೆ. ಅದರ ಶಿಫಾರಸ್ಸುಗಳ ಅನುಷ್ಠಾನ 2025-26ಕ್ಕೆ ಕೊನೆಗೊಳ್ಳುತ್ತದೆ. ಮುಂದಿನ ಐದು ವರ್ಷಗಳಿಗೆ, ಅಂದರೆ 2026-27ರಿಂದ 2030-31ರವರೆಗಿನ ಅವಧಿಗೆ ಒಕ್ಕೂಟ ತೆರಿಗೆ ರಾಶಿಯ ವರ್ಗಾವಣೆ ಬಗ್ಗೆ ಶಿಫಾರಸ್ಸು ಮಾಡಲು 16ನೆಯ ಹಣಕಾಸು ಆಯೋಗವನ್ನು ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ ಪಣಗಾರಿಯಾ ಅವರ ಅಧ್ಯಕ್ಷತೆಯಲ್ಲಿ ರಚಿಸಿದೆ. ಹಣಕಾಸು ಸಂಬಂಧಗಳ ಬಗ್ಗೆ ಸಮಾಲೋಚಿಸಲು ಅದು ಕರ್ನಾಟಕಕ್ಕೆ ಆಗಸ್ಟ್ ತಿಂಗಳ 29-30ರಂದು ಬೇಟಿ ನೀಡಿತ್ತು ಮತ್ತು ಅದಕ್ಕೆ ಕರ್ನಾಟಕ ಸರ್ಕಾರ ತನ್ನ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಸಿದೆ. ಅದರ ಪ್ರಮುಖ ಅಂಶಗಳು:

- ಹಂಚಿಕೊಳ್ಳುವ ತೆರಿಗೆ ರಾಶಿಗೆ ರಾಜ್ಯ ಸರ್ಕಾರ ಎಷ್ಟು ಸಂಪನ್ಮೂಲ ನೀಡುತ್ತಿದೆಯೋ ಅದರಲ್ಲಿ ಶೇ.60ರಷ್ಟನ್ನು ರಾಜ್ಯ ಸರ್ಕಾರ ಇಟ್ಟುಕೊಳ್ಳಲು ಅವಕಾಶ ನೀಡಬೇಕು.
- ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ತೆರಿಗೆ ವರ್ಗಾವಣೆಯಿಂದ ಶಿಕ್ಷೆಯಾಗಬಾರದು. ದೇಶದಲ್ಲಿನ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವುದರ ಬಗ್ಗೆ ನಮ್ಮ ಭಿನ್ನಾಭಿಪ್ರಾಯವಿಲ್ಲ. ಆದರೆ ಇದು ವರಮಾನದಲ್ಲಿ ಉತ್ತಮ ಸ್ಥಾನದಲ್ಲಿರುವ ರಾಜ್ಯಗಳ ಹಿತಾಸಕ್ತಿಯನ್ನು ಬಲಿಕೊಟ್ಟು ಹಿಂದುಳಿದ ರಾಜ್ಯಗಳಿಗೆ ಅನುದಾನ ವರ್ಗಾವಣೆಯಾಗಬಾರದು. ಹಣಕಾಸು ಆಯೋಗ ವರ್ಗಾವಣೆಯನ್ನು ಬಿಟ್ಟು ಇತರೆ ಪರ್ಯಾಯ ಮಾರ್ಗಗಳ ಮೂಲಕ ಹಿಂದುಳಿದ ರಾಜ್ಯಗಳಿಗೆ ಅನುದಾನವನ್ನು ಒಕ್ಕೂಟ ಸರ್ಕಾರ ನೀಡಬೇಕು. ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಒಕ್ಕೂಟ ಸರ್ಕಾರ ಎಷ್ಟು ಗಮನ ನೀಡಬೇಕೋ ಮತ್ತು ಸಂಪನ್ಮೂಲ ವಿನಿಯೋಗಿಸಬೇಕೋ ಅಷ್ಟನ್ನು ಅದು ಮಾಡುತ್ತಿಲ್ಲ.
- ಕರ್ನಾಟಕವು ದೇಶದ ಆರ್ಥಿಕ ಬೆಳವಣಿಗೆಯ ಚಾಲಕಶಕ್ತಿಯಾಗಿದೆ. ತೆರಿಗೆ ರಾಶಿಯ ವರ್ಗಾವಣೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಅದರ ಪೆಟ್ಟು ದೇಶದ ಆರ್ಥಿಕತೆಯ ಮೇಲಾಗುತ್ತದೆ. ದೇಶದ ಜನಸಂಖ್ಯೆಯಲ್ಲಿ ಶೇ.೫ರಷ್ಟನ್ನು ಮತ್ತು ದೇಶದ ಭೌಗೋಳದ ವಿಸ್ತೀರ್ಣದಲ್ಲಿ ಶೇ.5ರಷ್ಟು ಪಾಲು ಪಡೆದಿರುವ ಕರ್ನಾಟಕ, ದೇಶದ ಜಿಡಿಪಿಗೆ 2023-24ರಲ್ಲಿ ಶೇ.8.79ರಷ್ಟು ಕಾಣಿಕೆ ನೀಡಿದೆ. ದೇಶದ 28 ರಾಜ್ಯಗಳಲ್ಲಿ ಕರ್ನಾಟಕ ವರಮಾನದಲ್ಲಿ ಮೂರನೆಯ ಸ್ಥಾನದಲ್ಲಿದೆ. ಹಣಕಾಸು ಆಯೋಗವು ಇದಕ್ಕೆ ನೋವುಂಟು ಮಾಡಬಾರದು.
- ದೇಶದ ಒಟ್ಟು ತೆರಿಗೆ ರಾಶಿಗೆ ಕರ್ನಾಟಕ ವಾರ್ಷಿಕ ನೀಡುತ್ತಿರುವ ಮೊತ್ತ ಸರಿಸುಮಾರು ರೂ.4 ಲಕ್ಷ ಕೋಟಿ. ಆದರೆ ಇದಕ್ಕೆ ಪ್ರತಿಯಾಗಿ ತೆರಿಗೆ ವರ್ಗಾವಣೆಯಲ್ಲಿ ಒಕ್ಕೂಟ ಸರ್ಕಾರದಿಂದ ರಾಜ್ಯ ಪಡೆದುಕೊಳ್ಳುತ್ತಿರುವುದು ರೂ. 45000 ಕೋಟಿ ಮತ್ತು ಸಹಾಯಾನುದಾನದಲ್ಲಿ ರೂ.15000 ಕೋಟಿ. ರಾಜ್ಯವು ಒಕ್ಕೂಟ ಸರ್ಕಾರಕ್ಕೆ ನೀಡುತ್ತಿರುವ ಪ್ರತಿ ರೂಪಾಯಿಯಲ್ಲಿ ಅದು ಪಡೆಯುತ್ತಿರುವುದು 15 ಪೈಸೆ. ಇದು ವಿತ್ತೀಯ ಅನ್ಯಾಯ.
- ಒಟ್ಟು ತೆರಿಗೆ ರಾಶಿಯಲ್ಲಿ ಈಗಿರುವ ಶೇ.41ಕ್ಕೆ ಬದಲಾಗಿ ಶೇ.50ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು.
- ಸೆಸ್ ಮತ್ತು ಸರ್‌ಚಾರ್ಜ್‌ಗಳಿಂದ ಒಕ್ಕೂಟ ಸರ್ಕಾರ ಪಡೆಯುವ ಮೊತ್ತವು ಒಟ್ಟು ತೆರಿಗೆ ರಾಶಿಯ ಶೇ.5 ಮೀರಬಾರದು. ಇದು ಶೇ.5 ಮೀರಿದರೆ ಅದನ್ನು ಹಂಚಿಕೊಳ್ಳುವ ತೆರಿಗೆ ರಾಶಿಗೆ ಸೇರಿಸಬೇಕು.
- ರಾಜ್ಯದಲ್ಲಿರುವ ಹೊರ ರಾಜ್ಯಗಳ ಕಾರ್ಮಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಹೊರ ರಾಜ್ಯಗಳ ವ್ಯಾಪಾರಿಗಳು ರಾಜ್ಯದಲ್ಲಿ ಗಳಿಸುವ ಲಾಭ ಎಲ್ಲವೂ ರಾಜ್ಯದಿಂದ ಹೊರಹರಿಯುತ್ತದೆ. ಇದು ವಾರ್ಷಿಕ ರೂ.35000 ಕೋಟಿಯಿಂದ ರೂ.40000 ಕೋಟಿಯಷ್ಟಾಗುತ್ತದೆ. ಇದು ರಾಜ್ಯದ ಜಿಎಸ್‌ಡಿಪಿಯಲ್ಲಿ ಶೇ.1.8ರಷ್ಟಾಗುತ್ತದೆ.
- ಒಕ್ಕೂಟದ ಒಟ್ಟು ತೆರಿಗೆರಹಿತ ರಾಜಸ್ವವನ್ನು ಹಂಚಿಕೊಳ್ಳುವ ತೆರಿಗೆ ರಾಶಿಯಲ್ಲಿ ಸೇರಿಸಬೇಕು. ಒಕ್ಕೂಟ ಸರ್ಕಾರದ 2024-25ರ ತೆರಿಗೆರಹಿತ ರಾಜಸ್ವ ರೂ. 5.45 ಲಕ್ಷ ಕೋಟಿ. ಇದನ್ನು ಹಂಚಿಕೊಳ್ಳುವ ತೆರಿಗೆ ರಾಶಿಗೆ ಸೇರಿಸಿದರೆ ಹಂಚಿಕೊಳ್ಳುವ ತೆರಿಗೆ ರಾಶಿಯ ಗಾತ್ರ ಹೆಚ್ಚುತ್ತದೆ. ಆಗ ರಾಜ್ಯಗಳಿಗೆ ದೊರೆಯುವ ಸಂಪನ್ಮೂಲವೂ ಅಧಿಕವಾಗುತ್ತದೆ.
- ದೇಶದಲ್ಲಿ ನಕ್ಷತ್ರದಂತೆ ಥಳಥಳನೆ ಹೊಳೆಯುತ್ತಿರುವ ನಗರ ಬೆಂಗಳೂರು. ಅದರ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಆಯೋಗ ಶಿಫಾರಸ್ಸು ಮಾಡಬೇಕು. ದೇಶದ ಅತ್ಯಧಿಕ ವಲಸೆ ಕಾರ್ಮಿಕರನ್ನು ಪೊರೆಯುತ್ತಿರುವ ನಗರ ಬೆಂಗಳೂರು. ಆದ್ದರಿಂದ ಅದರ ಬೆಳವಣಿಗೆಗೆ ಹಣಕಾಸು ಆಯೋಗವು ಅನುದಾನವನ್ನು ಶಿಫಾರಸ್ಸು ಮಾಡಬೇಕು.
- ಇದಲ್ಲದೆ ಹಣಕಾಸು ಆಯೋಗವು ತೆರಿಗೆ ರಾಶಿಯ ವರ್ಗಾವಣೆ ಸೂತ್ರದಲ್ಲಿ ಬಳಸುತ್ತಿರುವ ವರಮಾನ ಅಂತರಕ್ಕೆ ನೀಡುತ್ತಿರುವ ಶೇ.45ರಷ್ಟು ತೂಕವನ್ನು ಶೇ.30ಕ್ಕಿಳಿಸಬೇಕು. ಕರ್ನಾಟಕದ ನಿವ್ವಳ ತಲಾ ವರಮಾನ 2023-24ರಲ್ಲಿ ರೂ.332926 ರಷ್ಟಿತ್ತು. ಭಾರತದ ನಿವ್ವಳ ತಲಾ ವರಮಾನ ರೂ.184205. ಇವುಗಳ ವರಮಾನ ಅಂತರ ರೂ.148712. ಆದರೆ ಉತ್ತರ ಪ್ರದೇಶದ ನಿವ್ವಳ ತಲಾ ವರಮಾನ ರೂ.93514. ಇದರ ವರಮಾನ ಅಂತರ ರೂ.90691. ವರಮಾನ ಅಂತರಕ್ಕೆ ಹೆಚ್ಚಿನ ತೂಕ ನೀಡಿದರೆ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಆದ್ದರಿಂದ ತೆರಿಗೆ ವರ್ಗಾವಣೆ ಸೂತ್ರದಲ್ಲಿ ವರಮಾನ ಅಂತರಕ್ಕೆ ನೀಡುತ್ತಿರುವ ತೂಕವನ್ನು ಈಗಿರುವ ಶೇ.45 ರಿಂದ ಶೇ.30ಕ್ಕಿಳಿಸಬೇಕು.
- ಇಂದು ಪರಿಸರ ಮತ್ತು ಜೀವಜಾಲದ ಪ್ರಶ್ನೆಯು ಗಂಭೀರ ಸ್ವರೂಪ ತಳೆದಿದೆ. ಪರಿಸರ ಮಾಲಿನ್ಯವನ್ನು ಮತ್ತು ಜೀವಜಾಲದ ಸಂರಕ್ಷಣೆಯನ್ನು ನಿರ್ವಹಿಸಲು ಅರಣ್ಯ ಪ್ರದೇಶವನ್ನು ವಿಸ್ತರಿಸಬೇಕು. ಯಾವುದನ್ನು ಕ್ಲೈಮೇಟ್ ಚೇಂಚ್ ಎಂದು ಕರೆಯುತ್ತೇವೆಯೋ ಅದನ್ನು ತಡೆಯಲು ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು ಈ ಹಿನ್ನೆಲೆಯಲ್ಲಿ ತೆರಿಗೆ ವರ್ಗಾವಣೆಯನ್ನು ನಿರ್ಧರಿಸುವ ಸೂಚಿಯಾದ ಅರಣ್ಯ ಮತ್ತು ಜೀವಜಾಲಕ್ಕೆ ನೀಡಿರುವ ತೂಕವನ್ನು ಶೇ.10ಕ್ಕಿಂತ ಹೆಚ್ಚಿಸಬೇಕು.
ಕೊನೆಯದಾಗಿ ರಾಜ್ಯಗಳ ಆರ್ಥಿಕ ಬೆಳವಣಿಗೆಯ ಮೊತ್ತವೇ ಭಾರತದ ಆರ್ಥಿಕ ಬೆಳವಣಿಗೆ. ರಾಜ್ಯಗಳ ಬೆಳವಣಿಗೆ ಕುಂಠಿತಗೊಂಡರೆ ದೇಶದ ಆರ್ಥಿಕತೆಯು ದುರ್ಬಲವಾಗುತ್ತದೆ. ಸಂವಿಧಾನಾತ್ಮಕ ವಿತ್ತೀಯ ಒಕ್ಕೂಟ ತತ್ವವು ಸಹಕಾರಿ ಒಕ್ಕೂಟ ತತ್ವದ ಬುನಾದಿಯಾಗಿದೆ. ಒಟ್ಟು ತೆರಿಗೆ ರಾಶಿಯಲ್ಲಿ ಶೇ.41ಕ್ಕೆ ಬದಲಾಗಿ ಶೇ.50ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಿದರೆ ಕರ್ನಾಟಕಕ್ಕೆ ದೊರೆಯುವ ಅನುದಾನ ಹೆಚ್ಚಾಗುತ್ತದೆ. ಇದೇ ರೀತಿಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು, ಹಂಚಿಕೊಳ್ಳುವ ತೆರಿಗೆ ರಾಶಿಯ ಭಾಗನ್ನಾಗಿಸಿದರೆ ಆಗ ರಾಜ್ಯಗಳಿಗೆ ದೊರೆಯುವ ಸಂಪನ್ಮೂಲ ಹೆಚ್ಚಾಗುತ್ತದೆ. ಒಕ್ಕೂಟದ ತೆರಿಗೆ ರಹಿತ ರಾಜಸ್ವವನ್ನು ಹಂಚಿಕೊಳ್ಳುವ ತೆರಿಗೆ ರಾಶಿಯ ಭಾಗವನ್ನಾಗಿ ಮಾಡಿದರೆ ರಾಜ್ಯಗಳ ಸಂಪನ್ಮೂಲ ಜಾಸ್ತಿಯಾಗುತ್ತದೆ. ಸಂವಿಧಾನಾತ್ಮಕ ವಿತ್ತೀಯ ಒಕ್ಕೂಟ ತತ್ವವನ್ನು ಪಾಲಿಸಬೇಕಾದುದು ಹಣಕಾಸು ಆಯೋಗದ ನೈತಿಕ ಜವಾಬ್ದಾರಿಯಾಗಿದೆ. ಈಗ ವಿತ್ತೀಯ ಒಕ್ಕೂಟ ತತ್ವದ ಹರಣವಾಗುತ್ತಿದೆ. 16ನೆಯ ಹಣಕಾಸು ಆಯೋಗವು ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಬದ್ಧವಾಗಿ ಶಿಫಾರಸ್ಸುಗಳನ್ನು ನೀಡುತ್ತದೆ ಎಂದು ಭಾವಿಸಬಹುದಾಗಿದೆ.
ಕರ್ನಾಟಕವು ಅಭಿವೃದ್ಧಿಯನ್ನು ನಿರ್ವಹಿಸುವುದರಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಈಗಾಗಲೆ ಹೇಳಿರುವಂತೆ ವರಮಾನದಲ್ಲಿ ದೇಶದಲ್ಲಿ ಇದು ಮೂರನೆಯ ಸ್ಥಾನದಲ್ಲಿದೆ. ಒಕ್ಕೂಟ ನೇರ ತೆರಿಗೆ ರಾಶಿಗೆ ಅತಿಹೆಚ್ಚು ರಾಜಸ್ವವನ್ನು ನೀಡುತ್ತಿರುವ ರಾಜ್ಯ ಕರ್ನಾಟಕ. ಇದರಲ್ಲಿ ರಾಜ್ಯವು ಮೂರನೆಯ ಸ್ಥಾನದಲ್ಲಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ತೀವ್ರಗತಿಯಲ್ಲಿ ನಿಯಂತ್ರಿಸುವುದರಲ್ಲಿ ಅದು ಯಶಸ್ವಿಯಾಗಿದೆ. ಕರ್ನಾಟಕವು ತೆರಿಗೆ ರಾಜಸ್ವವನ್ನು ಸಂಗ್ರಹಿಸುವುದರಲ್ಲಿಯೂ ಮುಂದಿದೆ. ರಾಜ್ಯದ ಒಟ್ಟು ತೆರಿಗೆ ರಾಜಸ್ವದಲ್ಲಿ ಅದರ ಸ್ವಂತ ರಾಜಸ್ವದ ಪ್ರಮಾಣ 2021-22ರಲ್ಲಿ ಶೇ.79.7. ಆದರೆ ಉತ್ತರ ಪ್ರದೇಶದ್ದು ಶೇ.54. ಬಿಹಾರದ್ದು ಶೇ.29.4.
ಭಾರತದ ’ಗ್ರೋಥ್ ಎಂಜಿನ್’ ಕರ್ನಾಟಕ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 16ನೆಯ ಹಣಕಾಸು ಆಯೋಗವು ತನ್ನ ಶಿಫಾರಸ್ಸುಗಳನ್ನು ನೀಡಬೇಕು. ನಿಯಮ ಮೀರಿ ಅದು ಕರ್ನಾಟಕಕ್ಕೆ ಅನುದಾನ ನೀಡುವ ಅಗತ್ಯವಿಲ್ಲ. ಆದರೆ ಅದು ರಾಜ್ಯಕ್ಕೆ ಅನ್ಯಾಯ ಮಾಡಬಾರದು.

ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.


