ಸಹಕಾರಿ ಬ್ಯಾಂಕ್ ಒಂದರಲ್ಲಿ ಹಣಕಾಸಿನ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದ ಅಸ್ಸಾಂನ ಡಿಜಿಟಲ್ ನ್ಯೂಸ್ ಪೋರ್ಟಲ್ ಪತ್ರಕರ್ತನನ್ನು ಬಂಧಿಸಲಾಗಿದೆ.
‘ದಿ ಕ್ರಾಸ್ ಕರೆಂಟ್’ ಎಂಬ ಡಿಜಿಟಲ್ ಸುದ್ದಿ ಸಂಸ್ಥೆಯ ಮುಖ್ಯ ವರದಿಗಾರ ದಿಲ್ವಾರ್ ಹುಸೇನ್ ಮೊಜುಂದಾರ್ ಅವರನ್ನು ಮಂಗಳವಾರ ಮಧ್ಯಾಹ್ನ ಪನ್‌ಬಜಾರ್ ಪೊಲೀಸ್ ಠಾಣೆಗೆ ಕರೆಸಿ, ಸುಮಾರು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿ ನಂತರ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಗುವಾಹಟಿ ಪ್ರೆಸ್ ಕ್ಲಬ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮೊಜುಂದಾರ್ ಅವರನ್ನು ಮಧ್ಯರಾತ್ರಿಯ ಬಳಿಕ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ನ ವಿವಿಧ ಸೆಕ್ಷನ್‌ಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳಡಿ ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
ಅಸ್ಸಾಂ ರಾಷ್ಟ್ರೀಯ ಪರಿಷತ್ತಿನ ಯುವ ಘಟಕವಾದ ರಾಷ್ಟ್ರೀಯ ಯುವ ಶಕ್ತಿ (ಜೆವೈಎಸ್) ಮಂಗಳವಾರ ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ಮುಂದೆ ಆರ್ಥಿಕ ಅಕ್ರಮಗಳ ವಿರುದ್ಧ ಧರಣಿ ನಡೆಸುತ್ತಿದ್ದಾಗ ಪತ್ರಕರ್ತ ದಿಲ್ವಾರ್ ಹುಸೇನ್ ಅವರು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಬಳಿಕ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೊಜುಂದಾರ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಕ್ಕೆ ಸೇರಿದ ದೂರುದಾರರನ್ನು ಪತ್ರಕರ್ತ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ವರದಿಯಲ್ಲಿ, ಬಿಎನ್ಎಸ್ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ನಿಬಂಧನೆಗಳ ಪ್ರಕಾರ ಅಪರಾಧವು ಸಂಜ್ಞೇಯ ಮತ್ತು ಜಾಮೀನು ರಹಿತವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಪತ್ರಕರ್ತನನ್ನು ತಕ್ಷಣ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ದೂರುದಾರರು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ತಡೆಯಲು, ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಕ್ಷ್ಯಗಳನ್ನು ಹಾಳು ಮಾಡುವುದನ್ನು ತಪ್ಪಿಸಲು ಬಂಧನ ಅಗತ್ಯವಾಗಿತ್ತು ಎಂದು ಪೊಲೀಸರು ಹೇಳೀದ್ದಾರೆ.
ಬ್ಯಾಂಕಿನ ಎಂ.ಡಿ ಕಚೇರಿಗೆ ಕರೆಸಿ ಪ್ರತಿಭಟನೆಯ ವಿಡಿಯೋ ಡಿಲಿಟ್ ಮಾಡುವಂತೆ ನನ್ನನ್ನು ಒತ್ತಾಯಿಸಲಾಗಿದೆ. ಪ್ರತಿಭಟನೆ ನಿಲ್ಲಿಸುವಂತೆ ನನಗೆ ಒತ್ತಾಯಿಸಲಾಗಿದೆ ಎಂದು ಪತ್ರಕರ್ತ ದಿಲ್ವಾರ್ ಹುಸೇನ್ ಕೂಡ ಪ್ರತಿದೂರು ನೀಡಿದ್ದಾರೆ. ಆದರೆ, ಅದನ್ನು ಇನ್ನೂ ದಾಖಲು ಮಾಡಿಕೊಂಡಿಲ್ಲ ಎನ್ನಲಾಗಿದೆ.
ದಿಲ್ವಾರ್ ಹುಸೇನ್ ಅವರಿಗೆ ಔಷಧಿ ಬೇಕು ಎಂದು ಪದೇ ಪದೇ ಮನವಿ ಮಾಡಿದ ನಂತರ, ಮಂಗಳವಾರ ತಡರಾತ್ರಿ ಅವರ ಪತ್ನಿ ಮತ್ತು ವಕೀಲರಿಗೆ ಪೊಲೀಸ್ ಠಾಣೆಗೆ ಪ್ರವೇಶಿಸಲು ಅವಕಾಶ ನೀಡಲಾಯಿತು ಎಂದು ವರದಿಯಾಗಿದೆ.
ಹಲವಾರು ಮಾಧ್ಯಮ ಸಂಸ್ಥೆಗಳು ಪತ್ರಕರ್ತನ ಬಂಧನವನ್ನು ಖಂಡಿಸಿವೆ ಮತ್ತು ಬುಧವಾರ ಪ್ರತಿಭಟನೆ ಆಯೋಜಿಸಿದೆ. ಕಾಂಗ್ರೆಸ್, ರೈಜೋರ್ ದಳ ಮತ್ತು ಅಸ್ಸಾಂ ರಾಷ್ಟ್ರೀಯ ಪರಿಷತ್‌ನಂತಹ ವಿರೋಧ ಪಕ್ಷಗಳು ಕೂಡ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿವೆ.


