ಇಬ್ಬರು ವಿದ್ಯಾರ್ಥಿಗಳ ನಡುವಿನ ಪರಸ್ಪರ ಬೈಗುಳದ ಘಟನೆಯ ಸಂಬಂಧ ಕೋಮು ಪ್ರಚೋದಕ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಸುಮಾರು 1,000 ಅಪರಿಚಿತ ಮಂದಿಯ ವಿರುದ್ದ ಉತ್ತರ ಪ್ರದೇಶದ ಬಹ್ರೈಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಬಹ್ರೈಚ್ ಜಿಲ್ಲೆಯ ನನ್ಪಾರ ಪ್ರದೇಶದಲ್ಲಿ ಜನರ ಗುಂಪು ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದ್ದು, ಇದರಿಂದ ಸ್ಥಳೀಯರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ನಡೆಸಿದ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡು ಉದ್ವಿಗ್ನತೆ ಸೃಷ್ಟಿಯಾಗಿದೆ. ಘಟನೆಯ ಒಂದು ದಿನದ ನಂತರ, ಅಕ್ಟೋಬರ್ 8ರಂದು 9 ನೇ ತರಗತಿ ವಿದ್ಯಾರ್ಥಿಯನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪರಸ್ಪರರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯ ಮೆಸೇಜ್‌ನ ಸ್ಕ್ರೀನ್ ಶಾಟ್‌ಗಳು ವೈರಲ್ ಆದ ನಂತರ, ಅಕ್ಟೋಬರ್ 7ರ ರಾತ್ರಿ ನನ್ಪಾರ ಪ್ರದೇಶದ ಆತನ ಮನೆಯ ಹೊರಗೆ ದೊಡ್ಡ ಜನಸಮೂಹ ಜಮಾಯಿಸಿತ್ತು. ಅಲ್ಲಿ ಆತನ ಬಂಧನದ ಬೇಡಿಕೆಯೊಂದಿಗೆ ಕೋಮು ಘೋಷಣೆಗಳನ್ನು ಕೂಗಲಾಗಿತ್ತು ಎಂದು ಆರೋಪಿಸಲಾಗಿದೆ.
ಪ್ರಚೋದನಕಾರಿ ಘೋಷನೆಗಳನ್ನು ಕೂಗಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನನ್ಪಾರಾ ಕೊಟ್ವಾಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಹ್ರೈಚ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಯ ಅನಿರ್ದಿಷ್ಟಾವಧಿ ಉಚ್ಚಾಟನೆ ಶೈಕ್ಷಣಿಕ ಸಾವಿಗೆ ಕಾರಣ: ಬಾಂಬೆ ಹೈಕೋರ್ಟ್


