ಮುಸ್ಲಿಂ ಜನಸಂಖ್ಯೆಯನ್ನು ತೋರಿಸಲು ಪಾಕಿಸ್ತಾನ ಧ್ವಜವನ್ನು ಬಳಸಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅದರ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕೋಮು ದ್ವೇಷವನ್ನು ಹರಡಿದ ಆರೋಪದಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಸಂಘಟನೆಯ ನಿಯೋಗವು (ಎಪಿಸಿಆರ್) ಬೆಂಗಳೂರು ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಈ ಬಗ್ಗೆ ಮಾತನಾಡಿದ ಎಪಿಸಿಆರ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಿಯಾಝ್, ಸುವರ್ಣ ನ್ಯೂಸ್ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ಪ್ರಸಾರದ ಸಮಯದಲ್ಲಿ ಅಜಿತ್ ಹನಮಕ್ಕನವರ್ ಹಿಂದೂ ಜನಸಂಖ್ಯೆಯನ್ನು ಪ್ರತಿನಿಧಿಸಲು ಭಾರತೀಯ ಧ್ವಜವನ್ನು ಮತ್ತು ಮುಸ್ಲಿಮರನ್ನು ಪ್ರತಿನಿಧಿಸಲು ಪಾಕಿಸ್ತಾನದ ಧ್ವಜವನ್ನು ಬಳಸಿ ಕೋಮು ದ್ವೇಷ ಹರಡಲು ಯತ್ನಿಸಿದ್ದಾರೆ. ರಾಷ್ಟ್ರೀಯ ಧ್ವಜಗಳನ್ನು ಧಾರ್ಮಿಕ ಸಮುದಾಯಗಳಿಗೆ ರೂಪಕಗಳಾಗಿ ಬಳಸುವುದು ತಪ್ಪುದಾರಿಗೆಳೆಯುವಂತಿದೆ, ಆದ್ದರಿಂದ ಸುವರ್ಣ ನ್ಯೂಸ್ ಮತ್ತು ನಿರೂಪಕ ಅಜಿತ್ ಹನಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ವರದಿ ಆಧರಿಸಿ ಮೇ 9, 2024ರಂದು ರಾತ್ರಿ 8:30ಕ್ಕೆ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸಿತ್ತು. ಅಜಿತ್ ಹನುಮಕ್ಕನವರ್ ಸುದ್ದಿ ವಿಶ್ಲೇಷಣೆ ಮಾಡಿದ್ದರು. ಸುದ್ದಿಯಲ್ಲಿ ಹಿಂದೂ ಮುಸ್ಲಿಮರ ಜನಸಂಖ್ಯೆ ತೋರಿಸುವಾಗ ಹಿಂದೂಗಳ ಜನಸಂಖ್ಯೆಗೆ ಭಾರತದ ಧ್ವಜ ಮತ್ತು ಮುಸ್ಲಿಮರ ಜನಸಂಖ್ಯೆಗೆ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಲಾಗಿದೆ.
ಇದರ ವಿಡಿಯೋ ಹಾಗೂ ಸ್ಕ್ರೀನ್‌ಶಾಟ್‌ನ ವಿಡಿಯೋವನ್ನು ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಭಾರತೀಯ ಹಿಂದೂಗಳಿಗೆ ಭಾರತದ ಧ್ವಜ ಮತ್ತು ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನದ ಧ್ವಜ ಬಳಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ಮತ್ತು ಅದರ ಆ್ಯಂಕರ್ ಅಜಿತ್ ಹನುಮಕ್ಕನವರ್ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ವರದಿಯನ್ನು ಚರ್ಚಿಸುವಾಗ 20 ಕೋಟಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಧ್ವಜ ಬಳಸಿ ಚಿತ್ರಿಸಿದ್ದಾರೆ. ಕರ್ನಾಟಕದ ಸಂಘಟನೆಗಳು ಆ್ಯಂಕರ್ ಮತ್ತು ಚಾನೆಲ್ ವಿರುದ್ಧ ದೂರು ದಾಖಲಿಸುತ್ತವೆ ಎಂದುಕೊಂಡಿದ್ದೇನೆ” ಎಂದು ಝಬೈರ್ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಇದರ ಬೆನ್ನಲ್ಲಿ ಸುವರ್ಣ ನ್ಯೂಸ್ ಮತ್ತು ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನು ಓದಿ: ಪ್ರತಿ ಹಂತದ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸಿ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಪತ್ರಿಕಾ ಸಂಸ್ಥೆಗಳು


