ಆಂದ್ರಪ್ರದೇಶ ರಾಜ್ಯ ನಡೆಸುತ್ತಿರುವ ವಿದ್ಯುತ್ ಕಂಪನಿಗೆ ಆಮದು ಕಲ್ಲಿದ್ದಲು ಪೂರೈಕೆ ಮಾಡುವ ಸಲುವಾಗಿ 2010ರಲ್ಲಿ ಟೆಂಡರ್ ಗುತ್ತಿಗೆ ಪಡೆಯಲು ಟೆಂಡರ್ ತಿದ್ದಿದ ಆರೋಪದ ಮೇರೆಗೆ ಗೌತಮ್ ಅದಾನಿ ಮಾಲಿಕತ್ವದ ಕಂಪನಿಯೊಂದರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ನ್ಯಾಷನಲ್ ಹೆರಾಲ್ಡ್.ಕಾಮ್ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಲಂತರ್ಗಾಮಿ ನಿರ್ಮಾಣ ಯೋಜನೆಯಲ್ಲಿ ಉದ್ಯಮಿ ಗೌತಮ್ ಅದಾನಿ ಮಾಲಿಕತ್ವದ ಅದಾನಿ ಎಂಟರ್ ಪ್ರೈಸಸ್ ಭಾಗಿಯಾಗಲು ಅವಕಾಶ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸದ ಬೆನ್ನಲ್ಲೇ 2010ರಲ್ಲಿ ಟೆಂಡರ್ ತಿದ್ದಿದ ಆರೋಪದ ಮೇಲೆ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ ಮಾಲಿಕತ್ವದ ಅದಾನಿ ಎಂಟರ್ ಪ್ರೈಸಸ್ ಸಬ್ ಮೆರಿನ್ ಗಳನ್ನು ನಿರ್ಮಾಣ ಮಾಡುವುದರಲ್ಲಿ ಯಾವುದೇ ಅನುಭವವನ್ನು ಹೊಂದಿಲ್ಲ. ಸಬ್ ಮರಿನ್ ನಿರ್ಮಾಣದಲ್ಲಿ ಕಂಪನಿಯು ಶೂನ್ಯ ಸಾಧನೆ ಹೊಂದಿದೆ ಎಂದು ಜನವರಿ 16ರಂದು ಆರೋಪ ಮಾಡಿತ್ತು. ಇದಾದ ಒಂದು ದಿನದಲ್ಲೇ ಕಂಪನಿಯ ವಿರುದ್ದ ಎಫ್ಐಆರ್ ದಾಖಲಿಸಿರುವುದು ಹುಬ್ಬೇರುವಂತೆ ಮಾಡಿದೆ.
ಸಿಬಿಐ ದಾಖಲಿಸಿರುವ ಎಫ್ಐಆರ್ ನಲ್ಲಿ ಆಂದ್ರಪ್ರದೇಶ ಸರ್ಕಾರಿ ಒಡೆತನದ ಕಂಪನಿಗೆ ಆಮದು ಕಲ್ಲಿದ್ದಲನ್ನು ಸರಬರಾಜು ಮಾಡಲು ಅದಾನಿ ಎಂಟರ್ ಪ್ರೈಸಸ್ ಟೆಂಡರ್ ಸಲ್ಲಿಸಿತ್ತು. ಟೆಂಡರ್ ತೆರೆದಾಗ ಅದಾನಿ ಕಂಪನಿ ಅರ್ಹತೆಯನ್ನು ಪಡೆದಿರಲಿಲ್ಲ.. ಆಗ ರಾಷ್ಟ್ರೀಯ ಸಹಕಾರ ಗ್ರಾಹಕರ ಫೆಡರೇಷನ್ ಟೆಂಡರ್ ತಿದ್ದಿ ಅದಾನಿ ಕಂಪನಿಗೆ ಆಮದು ಕಲ್ಲಿದ್ದಲು ಪೂರೈಸಲು ಅವಕಾಶ ಮಾಡಿಕೊಟ್ಟಿತ್ತು ಎಂದು ಆರೋಪಿಸಲಾಗಿದೆ.
ಅಧಿಕಾರಿಗಳು ಯಾವುದೇ ಅಡೆತಡೆಯಿಲ್ಲದೆ ಅದಾನಿ ಕಂಪನಿಗೆ ಗುತ್ತಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಹಕಾರ ಗ್ರಾಹಕರ ಫೆಡರೇಷನ್ ಅಧ್ಯಕ್ಷ ವೀರೇಂದ್ರ ಸಿಂಗ್, ವ್ಯವಸ್ಥಾಪಕ ನಿರ್ದೇಶಕ ಜಿ.ಪಿ. ಗುಪ್ತ ಹಾಗೂ ಅದಾನಿ ಎಂಟರ್ ಪ್ರೈಸಸ್ ಹಿರಿಯ ಸಲಹೆಗಾರ ಎಸ್.ಸಿ. ಸಿಂಘಾಲ್ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಸಿಬಿಐ ಎಫ್ಐಆರ್ ನಲ್ಲಿ ಆಂದ್ರಪ್ರದೇಶ ವಿದ್ಯುತ್ ಉತ್ಪಾದನಾ ಕಾರ್ಪೋರೇಷನ್ ಟೆಂಡರ್ ಸಂಬಂಧ 2010ರಲ್ಲಿ ವಿಜಯವಾಡದ ಡಾ.ನಾರ್ಲಾ ಟಾಟಾ ರವ್ ಥರ್ಮಲ್ ಪವರ್ ಪ್ಲಾಂಟ್ ಮತ್ತು ಕಡಪದ ರಾಯಲಸೀಮಾ ಥರ್ಮಲ್ ಪವರ್ ಪ್ಲಾಂಟ್ ಗೆ ಕಾಳಿನಾಡ, ವಿಶಾಖ, ಚನ್ನೈ ಮತ್ತು ಕ್ರಿಷ್ಣಪಟ್ಟಣಂ ಬಂದರು ಮೂಲಕ 6 ಲಕ್ಷ ಮೆಟ್ರಿಕ್ ಟನ್ ಆಮದು ಕಲ್ಲಿದ್ದನ್ನು ಪೂರೈಕೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ..


