ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಮಗ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರ ವಿರುದ್ದ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ (ಮಾ.28) ಎಫ್‌ಐಆರ್ ದಾಖಲಾಗಿದೆ.
“ಬೆಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ನನ್ನ ಕೊಲೆಗೆ 70 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದರು” ಎಂದು ರಾಜೇಂದ್ರ ಅವರು ತಮ್ಮ ದೂರಿನಲ್ಲಿ ಆರೋಪಿಸಿರುವುದಾಗಿ ವರದಿಯಾಗಿದೆ.
ಕಳೆದ ನವೆಂಬರ್ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿ ರಾಜೇಂದ್ರ ಅವರು ತುಮಕೂರು ಎಸ್ಪಿಗೆ ಶುಕ್ರವಾರ ದೂರು ನೀಡಿದ್ದು, ಈ ದೂರಿನ ಅನ್ವಯ ಕೆ.ಎನ್.ರಾಜಣ್ಣ ಅವರ ಮನೆ ಇರುವ ವ್ಯಾಪ್ತಿಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 109 (ಕೊಲೆ ಯತ್ನ ) 329 (4)(ಅತಿಕ್ರಮ ಪ್ರವೇಶ) 190 (ಕಾನೂನು ಬಾಹಿರ ಚಟುವಟಿಕೆ) ಮತ್ತು 61(2) (ಕ್ರಿಮಿನಲ್ ಸಂಚು) ಅನ್ವಯ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಸೋಮ ಎಂಬಾತ ರೌಡಿ ಶೀಟರ್ ಎಂದು ವರದಿಗಳು ಹೇಳಿವೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರನ್ನು ಗುರುವಾರ (ಮಾ.27) ಭೇಟಿ ಮಾಡಿದ್ದ ರಾಜೇಂದ್ರ ಅವರು ದೂರು ಸಲ್ಲಿಸಿದ್ದರು. ಘಟನೆ ತುಮಕೂರಿನಲ್ಲಿ ನಡೆದಿರುವುದರಿಂದ ತುಮಕೂರು ಎಸ್‌ಪಿಯವರಿಗೆ ದೂರು ನೀಡುವಂತೆ ಡಿಜಿಪಿ ಸೂಚಿಸಿದ್ದರು. ಅದರಂತೆ ಶುಕ್ರವಾರ ಎಸ್‌ಪಿ ಕಚೇರಿಗೆ ತೆರಳಿದ ರಾಜೇಂದ್ರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ದೂರು ನೀಡಿದ್ದಾರೆ. ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ಐವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.
ರಾಜೇಂದ್ರ ದೂರಿನಲ್ಲಿ ಏನಿದೆ?
“ಬೆಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ನನ್ನ ಕೊಲೆಗೆ ಪಿತೂರಿ ನಡೆಸಿದ್ದು, ಒಂದು ಗುಂಪಿಗೆ 70 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾರೆ. ಮುಂಗಡವಾಗಿ 5 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ತುಣುಕು ಲಭ್ಯವಾಗಿದೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ಸಂಭಾಷಣೆ ನಡೆಸಿದ್ದು ಇದೆ. ಸೋಮ, ಭರತ್, ಅಮಿತ್, ಗುಂಡಾ ಹಾಗೂ ಇತರರು ನನ್ನ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ”.
“ಸೋಮ, ಭರತ್ ಹಾಗೂ ಇತರರು ತುಮಕೂರು ನಗರದ ಶಿರಾ ಗೇಟ್ ತೋಟದ ಮನೆಯಲ್ಲಿ ನನ್ನ ಕೊಲೆಗೆ ಸಂಚು ರೂಪಿಸಿದ್ದರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಕೊಲೆ ಮಾಡುವುದಕ್ಕಾಗಿಯೇ ಕಾರನ್ನೂ ಖರೀದಿಸಿದ್ದರು. ಬೆಂಗಳೂರಿನ ಕಲಾಸಿಪಾಳ್ಯ, ಮಧುಗಿರಿ ಭಾಗದಲ್ಲಿ ನನ್ನ ಚಲನವಲನ ತಿಳಿದುಕೊಳ್ಳಲು ಕೆಲವು ಹಿಂಬಾಲಕರನ್ನು ನೇಮಿಸಿಕೊಂಡಿದ್ದರು” ಎಂದು ರಾಜೇಂದ್ರ ಅವರು ದೂರಿನಲ್ಲಿ ಆರೋಪಿಸಿರುವುದಾಗಿ ವರದಿಗಳು ವಿವರಿಸಿವೆ
ಮಗಳ ಜನ್ಮ ದಿನದಂದು ಕೊಲೆ ಯತ್ನ
“ಕಳೆದ ನವೆಂಬರ್ ತಿಂಗಳಲ್ಲಿ ಕ್ಯಾತ್ಸಂದ್ರದ ಮನೆಯಲ್ಲಿ ನನ್ನ ಹಿರಿಯ ಮಗಳ ಜನ್ಮದಿನಾಚರಣೆ ಕಾರ್ಯಕ್ರಮವಿತ್ತು. ಆವತ್ತು ಕಾರ್ಮಿಕರ ವೇಷದಲ್ಲಿ ಬಂದಿದ್ದ ಆರೋಪಿಗಳು ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಹತ್ಯೆ ಮಾಡಲು ನನ್ನ ಕಾರಿಗೆ ಜಿಪಿಎಸ್ ಅಳವಡಿಸುವ ಯತ್ನ ನಡೆಸಿದ್ದರು” ಎಂದು ರಾಜೇಂದ್ರ ಅವರು ದೂರಿನಲ್ಲಿ ಆರೋಪಿಸಿದ್ದಾಗಿ ವರದಿಯಾಗಿದೆ.
ಒಳ ಮೀಸಲಾತಿ: ಜಸ್ಟೀಸ್ ನಾಗಮೋಹನದಾಸ್ ಆಯೋಗ ‘ಹೊಸ ಸಮೀಕ್ಷೆ’ಗೆ ಶಿಫಾರಸ್ಸು ಮಾಡಿದ್ದೇಕೆ?


