ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯದ ನಿಯಮಗಳನ್ನು ಉಲ್ಲಂಘಿಸಿ ದೀಪಾವಳಿ ಪ್ರಯುಕ್ತ ಜನರು ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದೆಗೆಟ್ಟಿದೆ.
ಸೋಮವಾರ (ನಿನ್ನೆ) ರಾತ್ರಿಯಿಡೀ ಜನರು ಪಟಾಕಿಗಳನ್ನು ಸಿಡಿಸಿದ ಪರಿಣಾಮ, ಮಂಗಳವಾರ (ಇಂದು) ಬೆಳಿಗ್ಗೆ ರಾಜಧಾನಿ ನಗರದಾದ್ಯಂತ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 7 ಗಂಟೆಯ ಸುಮಾರಿಗೆ 451 ತಲುಪಿತ್ತು. ಇದು ರಾಷ್ಟ್ರೀಯ ಸರಾಸರಿಗಿಂತ 1.8 ಪಟ್ಟು ಹೆಚ್ಚು ಮತ್ತು ತೀವ್ರ ವಾಯಮಾಲಿನ್ಯವನ್ನು ಸೂಚಿಸುತ್ತದೆ.
ದೀಪಾವಳಿ ರಾತ್ರಿ (ಸೋಮವಾರ ರಾತ್ರಿ) ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತೀವ್ರ ಕಳಪೆ’ ಮಟ್ಟಕ್ಕೆ ಇಳಿದಿತ್ತು. ದೆಹಲಿಯ ಸ್ಯಾಟ್‌ಲೈಟ್ ನಗರಗಳಾದ ನೋಯ್ಡಾ ಮತ್ತು ಗುರ್‌ಗಾಂವ್‌ನಲ್ಲೂ ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿದೆ. ಮಂಗಳವಾರ ಬೆಳಿಗ್ಗೆ ಈ ನಗರಗಳಲ್ಲಿ ಕ್ರಮವಾಗಿ 407 ಮತ್ತು 402 ಎಕ್ಯೂಐ ದಾಖಲಾಗಿದೆ.
#WATCH | Visuals from the India Gate as GRAP-2 invoked in Delhi.
The Air Quality Index (AQI) around the India Gate was recorded at 342, in the 'Very Poor' category, in Delhi this morning as per the Central Pollution Control Board (CPCB). pic.twitter.com/ITc38aoGgQ
— ANI (@ANI) October 21, 2025
ದೆಹಲಿಯ ಬಹುತೇಕ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ‘ರೆಡ್‌ಝೋನ್’ ತಲುಪಿರುವುದಾಗಿ ದಾಖಲಾಗಿದೆ. ವಝೀರ್‌ಪುರ (435), ದ್ವಾರಕಾ (422), ಅಶೋಕ್ ವಿಹಾರ್ (445), ಮತ್ತು ಆನಂದ್ ವಿಹಾರ್ (440)ಗಳಲ್ಲಿ ಗಾಳಿಯು ತೀವ್ರ ಕಳಪೆ ಮಟ್ಟಕ್ಕೆ ಇಳಿದಿದೆ. ಇದು ವಾಯು ಮಾಲಿನ್ಯದ ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ ಎಂದು ವರದಿಗಳು ವಿವರಿಸಿವೆ.
0 ಯಿಂದ 50ರ ನಡುವಿನ ವಾಯುಗುಟ್ಟವನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತೀ ಕಳಪೆ’ ಮತ್ತು 401 ರಿಂದ 500 ‘ತೀವ್ರ ಕಳಪೆ’ ಅಥವಾ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.
2020ರಿಂದ ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.
ಈ ವರ್ಷ ಸುಪ್ರೀಂ ಕೋರ್ಟ್ ಅಕ್ಟೋಬರ್ 18 ರಿಂದ 20 ರವರೆಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡಿತ್ತು. ಬೆಳಿಗ್ಗೆ 6 ರಿಂದ ಬೆಳಿಗ್ಗೆ 7 ರವರೆಗೆ ಮತ್ತು ರಾತ್ರಿ 8 ರಿಂದ ರಾತ್ರಿ 10 ರವರೆಗೆ ಎರಡು ಸಮಯಗಳಲ್ಲಿ ಮಾತ್ರ ಪಟಾಕಿ ಸಿಡಿಸಲು ಅನುಮತಿಸಿತ್ತು. ಆದರೆ, ಜನರು ನಿಯಮ ಮೀರಿ ನಿಗದಿ ಸಮಯಕ್ಕಿಂತ ಮೊದಲು ಮತ್ತು ನಂತರ ಪಟಾಕಿಗಳು ಸಿಡಿಸಿದ್ದಾರೆ ಎನ್ನಲಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿ ಇರುವಾಗ ಹಸಿರು ಪಟಾಕಿಗಳನ್ನು ಸಿಡಿಸುವುದು ಕೂಡ ಸಮಂಜಸವಲ್ಲ. ಏಕೆಂದರೆ, ಅದೇನು ಕಡಿಮೆ ವಿಷಕಾರಿಯಲ್ಲ ಎಂದು ತಜ್ಞರು ಎಚ್ಚರಿಸಿದ್ದರು.
ದೀಪಾವಳಿ ರಾತ್ರಿ ದೆಹಲಿ ಅಗ್ನಿಶಾಮಕ ಸೇವೆಗಳಿಗೆ 269 ತುರ್ತು ಕರೆಗಳು ಬಂದಿವೆ ಎಂದು ಪಿಟಿಐ ವರದಿ ಮಾಡಿದೆ. ಆದಾಗ್ಯೂ, ಜೀವಹಾನಿ ಅಥವಾ ದೊಡ್ಡ ಮಟ್ಟದ ಗಾಯಗಳು ಸೇರಿದಂತೆ ಯಾವುದೇ ಪ್ರಮುಖ ಅವಘಡಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಕಳೆದ ವಾರ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿದ್ದಾಗ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ) ನ ಎರಡನೇ ಹಂತವನ್ನು ಜಾರಿಗೊಳಿಸಿತ್ತು. ಧೂಳು ನಿಯಂತ್ರಣವನ್ನು ತೀವ್ರಗೊಳಿಸುವುದು. ಸಾರ್ವಜನಿಕ ಸಾರಿಗೆ ಸೇವೆಗಳ ವಿಸ್ತರಣೆ ಮತ್ತು ಡೀಸೆಲ್ ಜನರೇಟರ್ ಸೆಟ್‌ಗಳ ಮೇಲಿನ ನಿರ್ಬಂಧಗಳು ಜಿಆರ್‌ಪಿಎ ಎರಡನೇ ಹಂತದಲ್ಲಿ ಸೇರಿವೆ.
ದೆಹಲಿ-ಎನ್‌ಸಿಆರ್‌ನ ಸ್ಥಳೀಯಾಡಳಿತ ಈಗಾಗಲೇ ಪ್ರತಿದಿನ ಯಂತ್ರಗಳ ಮೂಲಕ ಗುಡಿಸುವುದು ಮತ್ತು ರಸ್ತೆಗಳ ಮೇಲೆ ನೀರು ಚಿಮುಕಿಸುವುದನ್ನ ಪ್ರಾರಂಭಿಸಿವೆ.
ಬಲವಾದ ಗಾಳಿ ಬೀಸದ ಕಾರಣ ನಗರದಲ್ಲಿ ಹೊಗೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31–33 ಡಿಗ್ರಿ ಮತ್ತು 20–22 ಡಿಗ್ರಿಗಳ ನಡುವೆ ಉಳಿಯುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1–3 ಡಿಗ್ರಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಗರಿಷ್ಠ ತಾಪಮಾನವು ಋತುಮಾನದ ಸರಾಸರಿಗೆ ಹತ್ತಿರದಲ್ಲಿದೆ.
ಬಿಹಾರ ಮಹಾಮೈತ್ರಿಯಲ್ಲಿ ಅಸಮಾಧಾನ : ಚುನಾವಣಾ ಕಣದಿಂದ ಹಿಂದೆ ಸರಿದ ಜೆಎಂಎಂ


