ಬಾವಿಗೆ ಹಾರಿದ ಮಹಿಳೆಯೊಬ್ಬರನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆ ಕೇರಳದ ಕೊಲ್ಲಂ ಸಮೀಪದ ನೆಡುವತೂರಿನಲ್ಲಿ ಸೋಮವಾರ (ಅ.13) ಮುಂಜಾನೆ ನಡೆದಿದೆ.
ನೆಡುವತೂರಿನ ಅರ್ಚನಾ, ಅವರ ಸ್ನೇಹಿತ ಶಿವಕೃಷ್ಣನ್ ಮತ್ತು ಕೊಟ್ಟಾರಕ್ಕರ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿ ಸೋನಿ ಎಸ್. ಕುಮಾರ್ ಮೃತರು ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ನೆಡುವತೂರಿನ ಅರ್ಚನಾ 80 ಅಡಿ ಆಳದ ಬಾವಿಗೆ ಹಾರಿದ್ದಾರೆ ಎಂದು ಕೊಟ್ಟಾರಕ್ಕರ ಅಗ್ನಿಶಾಮಕ ಠಾಣೆಗೆ ತುರ್ತು ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ, ಆಕೆಯನ್ನು ರಕ್ಷಿಸುವ ಕಾರ್ಯಾಚರಣೆ ಪ್ರಾರಂಭಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಸೋನಿ ಕುಮಾರ್ ಸುರಕ್ಷತಾ ಸಾಧನಗಳನ್ನು ಧರಿಸಿ ಬಾವಿಗೆ ಇಳಿಯುವಾಗ, ಬಾವಿಯ ತಡೆಗೋಡೆ ಕುಸಿದು, ಕುಮಾರ್ ಮತ್ತು ಬಾವಿಗೆ ಹಾರಿದ್ದ ಅರ್ಚನಾ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡೆಗೋಡೆ ಕುಸಿಯುವಾಗ ಮೇಲ್ಗಡೆ ನಿಂತಿದ್ದ ಶಿವಕೃಷ್ಣನ್ ಕೂಡ ಬಾವಿಗೆ ಬಿದ್ದಿದ್ದಾರೆ. ಉಳಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಕೈಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನೂ ಬಾವಿಯಿಂದ ಮೇಲೆತ್ತಿದ್ದರು. ನಂತರ ತಕ್ಷಣ ಮೂವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಸಾವನ್ನಪ್ಪಿದ್ದಾರೆ ಪೊಲೀಸರು ಹೇಳಿದ್ದಾರೆ.
ವೈಯಕ್ತಿಕ ಸಮಸ್ಯೆಗಳಿಂದಾಗಿ ಅಥವಾ ಕೌಟುಂಬಿಕ ಕಲಹದಿಂದ ಅರ್ಚನಾ ಬಾವಿಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದುರ್ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.


