ಮೊಟ್ಟ ಮೊದಲ ಬಾರಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಗುರುವಾರ (ಫೆ.27) ಸಂಜೆ ಉದ್ಘಾಟನೆಗೊಂಡಿದೆ.
ಇಂದಿನಿಂದ (ಫೆ.28) ಮಾರ್ಚ್ 3ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇದರ ಜೊತೆಗೆ ಸಂವಾದ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ವಿವಿಧ ಪ್ರಕಾಶನ ಸಂಸ್ಥೆಗಳ ಮಳಿಗೆಗಳ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ವಿವಿಧ ಅಕಾಡೆಮಿಗಳಿಗೆ ಸಂಬಂಧಿಸಿದ ಮಳಿಗೆಗಳೂ ಮೇಳದಲ್ಲಿ ಇದ್ದು, ಕನ್ನಡ ಹಾಗೂ ಇತರೆ ಎಲ್ಲ ಭಾಷೆಗಳ ಪುಸ್ತಕಗಳ ಮಾರಾಟವೂ ಇರಲಿದೆ. ಸಾಹಿತ್ಯ, ಕಲೆ, ಸಂಗೀತ, ರಾಜಕೀಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಮೇಳದಲ್ಲಿ ಒಂದು ಮಳಿಗೆ ಇರಲಿದೆ. ಇಲ್ಲಿ ವಿವಿಧ ಲೇಖಕರ ಪುಸ್ತಕಗಳು ಬಿಡುಗಡೆಯಾಗಲಿದೆ. ಮೇಳದಲ್ಲಿ ಪ್ರತಿದಿನ ಸಂಜೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಹಾರ ಮೇಳವೂ ಇರಲಿದೆ ಎಂದು ಸರ್ಕಾರ ಹೇಳಿದೆ.

ವಿವಿಧ ವಿಷಯಗಳಲ್ಲಿ ಸಂವಾದಗೋಷ್ಠಿ
ಎರಡು ವೇದಿಕೆಗಳಲ್ಲಿ ಸಂವಾದ ಗೋಷ್ಠಿಗಳು ನಡೆಯಲಿವೆ. ಎರಡನೇ ದಿನವಾದ ಶುಕ್ರವಾರ (ಫೆ.28) ನಾಲ್ಕು ಸಂವಾದಗಳು ನಡೆಯಲಿವೆ. ‘ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಜವಾಬ್ದಾರಿ’, ‘ಸಮಕಾಲೀನ ಪ್ರಕಾಶನ ಕ್ಷೇತ್ರದ ಸವಾಲುಗಳು’, ‘ನಾಯಕತ್ವ–ಇಂದು ಮತ್ತು ನಾಳೆ ಹಾಗೂ ‘ನೆಲಮೂಲದಿಂದ ಅಂತರಿಕ್ಷದವರೆಗೆ’ ವಿಷಯದ ಮೇಲೆ ಸಂವಾದ ಹಮ್ಮಿಕೊಳ್ಳಲಾಗಿದೆ. ಸಂಜೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶನಿವಾರ (ಮಾ.1) ನಾಲ್ಕು ಸಂವಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ‘ಪರಿಸರದ ಅಳಿವು–ಉಳಿವು’, ‘ಸಂವಿಧಾನದ ಹಿರಿಮೆ ಗರಿಮೆ ಹಾಗೂ ಅರಿವು’, ‘ಕ್ರೀಡೆ ಮತ್ತು ಸಾಹಿತ್ಯ’, ‘ಕೃತಕ ಬುದ್ಧಿಮತ್ತೆ/ ಸೈಬರ್ ಭದ್ರತೆ’ ವಿಷಯಗಳ ಮೇಲೆ ಸಂವಾದ ನಡೆಯಲಿದೆ.
ಭಾನುವಾರ (ಮಾ.2) ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವದ ಚಿಂತನೆಗಳು’, ‘ಮಕ್ಕಳ ಸಾಹಿತ್ಯ’, ‘ಅಂಗಾಂಗ ದಾನದ ಅರಿವು’, ‘ಸಾಹಿತ್ಯ ಮತ್ತು ಚಲನಚಿತ್ರ’ ಹಾಗೂ ‘ಓದಿನ ಸುಖ’ ವಿಷಯದ ಮೇಲೆ ಸಂವಾದಗಳು ನಡೆಯಲಿವೆ. ಬಳಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಯಿಂದ ಅರ್ಜುನ್ ಜನ್ಯ, ಸಾಧುಕೋಕಿಲ ಹಾಗೂ ಸಂಗಡಿಗರಿಂದ ಸಂಗೀತ ಸಂಜೆ ನಡೆಯಲಿದೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಪುಸ್ತಕ ಮೇಳದ ಪ್ರಯುಕ್ತ ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ವಿಧಾನಸೌಧದ ಎಲ್ಲಾ ಗೇಟ್‌ಗಳಿಂದ ಸಾರ್ವಜನಿಕರು ಒಳಗೆ ಹೋಗಬಹುದು. ಫ್ರೀಡಂ ಪಾರ್ಕ್ ಮತ್ತು ಸರ್ಕಾರಿ ಕಾಲೇಜು (ಗ್ಯಾಸ್ ಕಾಲೇಜು) ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ : ಸಿಎಂ ಘೋಷಣೆ
ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗುರುವಾರ ಸಂಜೆ ಮೇಳ ಉದ್ಘಾಟಿಸಿ ಮಾತನಾಡಿದ ಅವರು, “ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಆದ್ದರಿಂದ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಿ” ಎಂದು ಕರೆ ನೀಡಿದ್ದಾರೆ.
“ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಿ. ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಹೊಸ ಕಾರ್ಯಕ್ರಮ ಏರ್ಪಡಿಸಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಭಿನಂದಿಸಿದ್ದಾರೆ.
“ತಂತ್ರಜ್ಞಾನವು ಬಹಳಷ್ಟು ಮುಂದುವರೆದಿದೆ. ಈಗ ChatGPTಯಂತಹ ತಂತ್ರಜಾಗಳಲ್ಲಿ ತಕ್ಷಣವೇ ಬಹಳಷ್ಟು ಮಾಹಿತಿಗಳನ್ನು ಪಡೆಯಬಹುದು. ಆದರೂ, ನಾವು ನಮ್ಮ ಬೇರುಗಳನ್ನು ಮರೆತರೆ, ನಮಗೆ ಫಲ ಸಿಗುವುದಿಲ್ಲ ಎಂಬ ಮಾತಿದೆ. ಪುಸ್ತಕಗಳು ನಮ್ಮ ಬೇರುಗಳು. ಐತಿಹಾಸಿಕ ವಿಷಯಗಳನ್ನು ಅವುಗಳ ಮೂಲಕ ಮಾತ್ರ ಕಲಿಯಬಹುದು” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪುಸ್ತಕ ಮೇಳ ಏರ್ಪಡಿಸಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಮತ್ತು ಸರ್ಕಾರವನ್ನು ಶ್ಲಾಘಿಸಿದಿ ಸಾಹಿತಿ ಬೋಲ್ವಾರ್ ಮೊಹಮ್ಮದ್ ಕುಂಞಿ ಅವರು ಸರ್ಕಾರ ಓದುವ ಸಂಸ್ಕೃತಿಯನ್ನು ಉತ್ತೇಜಿಸುವಂತೆ ಸಲಹೆ ನೀಡಿದ್ದಾರೆ.
“2021ರ ನಂತರ 3-4 ವರ್ಷಗಳಿಂದ, ಸರ್ಕಾರ ಪುಸ್ತಕಗಳನ್ನು ಖರೀದಿಸದ ಕಾರಣ ಕನ್ನಡ ಪ್ರಕಾಶಕರು ಕಷ್ಟಪಡುತ್ತಿದ್ದಾರೆ. ಸರ್ಕಾರ ಅವರ ಪುಸ್ತಕಗಳನ್ನು ಖರೀದಿಸಬೇಕು. ಸ್ಪೀಕರ್ ಯು ಟಿ ಖಾದರ್ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಲು ನಿರ್ದೇಶಿಸಬೇಕು” ಎಂದು ಮೊಹಮ್ಮದ್ ಕುಂಞಿ ಮನವಿ ಮಾಡಿದ್ದಾರೆ.
ಕನ್ನಡದ ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಗೋವಾದ ಸಾಹಿತಿ ದಾಮೋಧರ್ ಮೌಜೊ ಹಾಗೂ ಸಾಹಿತಿಗಳಾದ ಪ್ರಶಾಂತ್ ಮಾರ್ತಾ, ವಸುದೇಂದ್ರ, ಬೊಳ್ವಾರ್ ಮಹಮ್ಮದ್ ಕುಂಞಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.
ಪುಸ್ತಕ ಮೇಳದಲ್ಲಿ ಗೌರಿ ಮೀಡಿಯಾ ಟ್ರಸ್ಟ್ ಮಳಿಗೆ ಸಂಖ್ಯೆ -142
ವಿಧಾನಸೌಧದ ಪುಸ್ತಕ ಮೇಳದಲ್ಲಿ ಗೌರಿ ಮೀಡಿಯಾ ಟ್ರಸ್ಟ್ ಪ್ರಕಾಶನದ ಪುಸ್ತಕಗಳು ಮತ್ತು ಗೌರಿ ಲಂಕೇಶ್ ನ್ಯಾಯಪಥ ಪಾಕ್ಷಿಕ, ಇತರ ಪ್ರಕಾಶನಗಳ ಪುಸ್ತಕಗಳು ಮಳಿಗೆ ಸಂಖ್ಯೆ 142ರಲ್ಲಿ ಲಭ್ಯವಿದೆ. ಭೇಟಿ ಕೊಡಿ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಿ ನಮ್ಮನ್ನು ಬೆಂಬಲಿಸಿ
ರಾಜಕಾರಣಿಗಳು, ರೈತರು, ಹೋರಾಟಗಾರರ ವಿರುದ್ಧದ 43 ಪ್ರಕರಣ ಹಿಂತೆಗೆತ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್


