ಅಸ್ಸಾಂನ ಸೋನಿತ್‌ಪುರ ಜಿಲ್ಲಾಡಳಿತವು ಬುಧವಾರ (ನವೆಂಬರ್ 19) ಐದು ಮಂದಿಯನ್ನು ವಿದೇಶಿಯರು ಎಂದು ಘೋಷಿಸಿದ್ದು, 24 ಗಂಟೆಯೊಳಗೆ ಭಾರತ ತೊರೆಯುವಂತೆ ಅವರಿಗೆ ಆದೇಶಿಸಿದೆ.
ಸೋನಿತ್‌ಪುರ ಜಿಲ್ಲೆಯ ಧೋಬೋಕಟಾ ಗ್ರಾಮದ ಐವರು ನಿವಾಸಿಗಳಾದ ಹನುಫಾ, ಮರಿಯಮ್ ನೆಸ್ಸಾ, ಫಾತೆಮಾ, ಮೊನೊವಾರಾ ಮತ್ತು ಅಮ್ಜದ್ ಅಲಿ, ಇವರಿಗೆ 1950ರ ಅಸ್ಸಾಂನಿಂದ ವಲಸಿಗರನ್ನು ಹೊರಹಾಕುವ ಕಾಯ್ದೆಯಡಿ ದೇಶ ತೊರೆಯಲು ಸೂಚಿಸಲಾಗಿದೆ.
ತಕ್ಷಣಕ್ಕೆ ಅಸ್ಸಾಂನಿಂದ ಹೊರ ಹೋಗುವಂತೆ ಆದೇಶಿಸಲಾಗಿದೆ. ಅವರು ಭಾರತೀಯ ಪ್ರಜೆಗಳಲ್ಲ ಎಂಬ ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಹಾಗಾಗಿ, ಅವರು ದೇಶದ ಇತರ ರಾಜ್ಯಗಳಲ್ಲೂ ವಾಸಿಸಲು ಸಮಸ್ಯೆಯಾಗಲಿದೆ. ಭಾರತ ತೊರೆಯುವ ಆಯ್ಕೆ ಮಾತ್ರ ಉಳಿದಿದೆ.
ಅಸ್ಸಾಂ ಸಚಿವ ಸಂಪುಟ 2025ರ ಸೆಪ್ಟೆಂಬರ್ 9ರಂದು 1950ರ ಅಸ್ಸಾಂ ವಲಸಿಗರ ಗಡಿಪಾರು ಕಾಯ್ದೆಯಡಿಯಲ್ಲಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ರೂಪಿಸಲು ಅನುಮೋದನೆ ನೀಡಿದೆ. ಇದು ವಿದೇಶಿಯರ ನ್ಯಾಯಮಂಡಳಿಗಳನ್ನು ಬೈಪಾಸ್ ಮಾಡುವ ಮೂಲಕ ರಾಜ್ಯದಿಂದ ‘ಅಕ್ರಮ ವಲಸಿಗರನ್ನು’ ಹೊರಹಾಕಲು ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಇದಕ್ಕೂ ಮೊದಲು, ದಾಖಲೆರಹಿತ ವಲಸಿಗರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿದೇಶಿಯರ ನ್ಯಾಯಮಂಡಳಿಗಳು ನಿರ್ವಹಿಸುತ್ತಿದ್ದವು.
1950ರ ಕಾಯ್ದೆಯನ್ನು ಬಳಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಮೋದಿಸಲಾಗಿದೆ. ವಿದೇಶಿಯರ ನ್ಯಾಯಮಂಡಳಿಗಳ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದರು.
“ಘೋಷಿತ ವಿದೇಶಿಯರಾಗಿರುವುದರಿಂದ, ಭಾರತ/ಅಸ್ಸಾಂನಲ್ಲಿ ನಿಮ್ಮ ಉಪಸ್ಥಿತಿಯು ಸಾರ್ವಜನಿಕರ ಹಿತಾಸಕ್ತಿಗೆ ಮತ್ತು ರಾಜ್ಯದ ಆಂತರಿಕ ಭದ್ರತೆಗೆ ಹಾನಿಕಾರಕವಾಗಿದೆ” ಎಂದು ಮಂಗಳವಾರ (ನವೆಂಬರ್ 18) ಹೊರಡಿಸಲಾದ ನೋಟಿಸ್‌ನಲ್ಲಿ ಸೋನಿತ್‌ಪುರ ಜಿಲ್ಲಾಧಿಕಾರಿ ಆನಂದ ಕುಮಾರ್ ದಾಸ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
2006ರಲ್ಲಿ ತೇಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಗಡಿ) ದಾಖಲಿಸಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಸೋನಿತ್‌ಪುರ ವಿದೇಶಿಯರ ನ್ಯಾಯಮಂಡಳಿ ಅಕ್ಟೋಬರ್ 24ರಂದು ಈ ಐವರು ವ್ಯಕ್ತಿಗಳನ್ನು ವಿದೇಶಿ ಪ್ರಜೆಗಳೆಂದು ಘೋಷಿಸಿತ್ತು.
ಧುಬ್ರಿ, ಶ್ರೀಭೂಮಿ ಅಥವಾ ದಕ್ಷಿಣ ಸಲ್ಮಾರಾ-ಮಂಕಚಾರ್ ಮಾರ್ಗಗಳ ಮೂಲಕ ರಾಜ್ಯವನ್ನು ತೊರೆಯುವಂತೆ ಜಿಲ್ಲಾಧಿಕಾರಿ ಆನಂದ ಕುಮಾರ್ ದಾಸ್ ಐದು ಮಂದಿಗೂ ನಿರ್ದೇಶಿಸಿದ್ದಾರೆ.
ಮತದಾರರ ಪಟ್ಟಿಯಿಂದ ಐದು ಮಂದಿಯ ಹೆಸರುಗಳನ್ನು ಅಳಿಸಲು, ಅವರ ಪಡಿತರ ಚೀಟಿಗಳನ್ನು ರದ್ದುಗೊಳಿಸಲು, ಆಧಾರ್ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲು ಅಥವಾ ರದ್ದುಗೊಳಿಸಲು ಮತ್ತು ಎಲ್ಲಾ ಸರ್ಕಾರಿ ಯೋಜನೆಗಳಿಂದ ಅವರನ್ನು ತೆಗೆದುಹಾಕಲು ನೋಟಿಸ್‌ನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆದೇಶ ಪಾಲಿಸರು ಐವರು ವಿಫಲವಾದರೆ, 1950ರ ಕಾಯ್ದೆಯಡಿಯಲ್ಲಿ ಅವರನ್ನು ಅಸ್ಸಾಂನಿಂದ ಹೊರಹಾಕಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಅಸ್ಸಾಂನಲ್ಲಿರುವ ವಿದೇಶಿಯರ ನ್ಯಾಯಮಂಡಳಿಗಳು ಪೌರತ್ವದ ವಿಷಯಗಳಲ್ಲಿ ತೀರ್ಪು ನೀಡುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ. ಆದಾಗ್ಯೂ, ನ್ಯಾಯಮಂಡಳಿಗಳು ಅನಿಯಂತ್ರಿತತೆ ಮತ್ತು ಪಕ್ಷಪಾತದ ಆರೋಪಗಳನ್ನು ಹೊಂದಿವೆ. ಸಣ್ಣ ಕಾಗುಣಿತ ತಪ್ಪುಗಳು, ದಾಖಲೆಗಳ ಕೊರತೆ ಅಥವಾ ನೆನಪಿನ ಕೊರತೆಗಳ ಆಧಾರದ ಮೇಲೆ ಜನರನ್ನು ವಿದೇಶಿಯರೆಂದು ಘೋಷಿಸುತ್ತಿವೆ ಎನ್ನಲಾಗುತ್ತಿದೆ.
ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಪ್ರಕಾರ, ಒಬ್ಬ ವ್ಯಕ್ತಿಯು ‘ಅಕ್ರಮ ವಲಸಿಗ’ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಥವಾ ಇತರ ಮೂಲಗಳಿಂದ ಜಿಲ್ಲಾಧಿಕಾರಿಗೆ ಮಾಹಿತಿ ಬಂದರೆ, ಅಧಿಕಾರಿಯು 10 ದಿನಗಳಲ್ಲಿ ಆ ವ್ಯಕ್ತಿಗೆ ತನ್ನ ಪೌರತ್ವದ ಪುರಾವೆಗಳನ್ನು ಒದಗಿಸುವಂತೆ ನಿರ್ದೇಶಿಸಬೇಕು.
ಸಲ್ಲಿಸಿದ ಪುರಾವೆಗಳು ತೃಪ್ತಿಕರವಾಗಿಲ್ಲ ಎಂದು ಜಿಲ್ಲಾಧಿಕಾರಿ ಕಂಡುಕೊಂಡರೆ, ಅವರು 1950ರ ಕಾಯ್ದೆಯನ್ನು ಅನ್ವಯಿಸುವ ಮೂಲಕ, ದಾಖಲೆರಹಿತ ವಲಸಿಗರನ್ನು ಅಸ್ಸಾಂನಿಂದ 24 ಗಂಟೆಗಳ ಕಾಲಾವಕಾಶ ನೀಡುವ ಮೂಲಕ ಮತ್ತು ನಿರ್ದಿಷ್ಟಪಡಿಸಿದ ಮಾರ್ಗದ ಮೂಲಕ ಹೊರದಬ್ಬುವ ಆದೇಶವನ್ನು ಹೊರಡಿಸಬಹುದು.


