ಜಾರ್ಖಂಡ್‌ನ ಐವರು ವಲಸೆ ಕಾರ್ಮಿಕರನ್ನು ಪಶ್ಚಿಮ ಆಫ್ರಿಕಾದ ನೈಜರ್‌ನಲ್ಲಿ ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಅವರು ಜನವರಿ 2024ರಲ್ಲಿ ಕಲ್ಪತರು ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡಲು ನೈಜರ್‌ಗೆ ವಲಸೆ ಹೋಗಿದ್ದರು. ಅಂದಿನಿಂದ ಮನೆಗೆ ಹಿಂತಿರುಗಿಲ್ಲ ಎನ್ನಲಾಗಿದೆ.
ಕಳೆದ ಶುಕ್ರವಾರ ಮಧ್ಯಾಹ್ನ ಕಾರ್ಮಿಕರ ಅಪಹರಣ ನಡೆದಿದೆ ಎಂದು ವರದಿಯಾಗಿದೆ.ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಬಾಗೋದರ್ ಪೊಲೀಸ್ ಠಾಣೆ ವ್ಯಾಪ್ತಿಯ ಡೊಂಡ್ಲೋ ಪಂಚಾಯತ್‌ನ ಸಂಜಯ್ ಮಹತೋ, ಫಲ್ಜಿತ್ ಮಹತೋ, ರಾಜು ಮಹತೋ,ಚಂದ್ರಿಕಾ ಮಹತೋ ಮತ್ತು ಮುಂಡ್ರೋ ಪಂಚಾಯತ್‌ನ ಉತ್ತಮ್ ಮಹತೋ ಅಪಹರಣಕ್ಕೊಳಗಾದವರಲ್ಲಿ ಸೇರಿದ್ದಾರೆ.
ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ವಲಸೆ ಕಾರ್ಮಿಕರ ಪ್ರಕಾರ, ಸ್ಥಳೀಯರ ಗುಂಪೊಂದು ಕೆಲಸ ಸ್ಥಳದ ಮೇಲೆ ದಾಳಿ ನಡೆಸಿ, ಸರ್ಕಾರದಿಂದ ನಿಯೋಜಿಸಲ್ಪಟ್ಟ ಹನ್ನೆರಡು ಭದ್ರತಾ ಸಿಬ್ಬಂದಿಯನ್ನು ಕೊಂದು, ಬಂದೂಕು ತೋರಿಸಿ ಒಬ್ಬ ಸ್ಥಳೀಯ ಸೇರಿದಂತೆ ಆರು ಜನರನ್ನು ಕರೆದೊಯ್ದಿದೆ ಎಂದು ವರದಿಯಾಗಿದೆ.
“ನನ್ನ ಪತಿ ಸಂಜಯ್ ಮಹ್ತೋ ಕೆಲಸಕ್ಕೆಂದು ನೈಜರ್‌ಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನನಗೆ ಅವರಿಂದ ಕೊನೆಯ ಬಾರಿಗೆ ಕರೆ ಬಂದಿತ್ತು, ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರನ್ನು ಅಪಹರಿಸಲಾಗಿದೆ ಎಂದು ಅವರೊಂದಿಗೆ ಕೆಲಸ ಮಾಡುತ್ತಿರುವ ಇತರರು ನಮಗೆ ತಿಳಿಸಿದ್ದಾರೆ” ಎಂದು ಸಂಜಯ್ ಮಹ್ತೋ ಅವರ ಪತ್ನಿ ಹೇಳಿದ್ದಾರೆ.ನನ್ನ ಪತಿ ಸುರಕ್ಷಿತವಾಗಿ ಮನೆಗೆ ಮರಳಲು ವ್ಯವಸ್ಥೆ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಫಲ್ಜಿತ್ ಕುಮಾರ್ ಮಹ್ತೊ ಅವರು 2024ರ ಜನವರಿಯಲ್ಲಿ ನೈಜೀರಿಯಾಕ್ಕೆ ಹೋಗಿದ್ದರು. ಏಪ್ರಿಲ್ 25ರಂದು ಬೈಕ್‌ನಲ್ಲಿ ಬಂದ ಕೆಲವರು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಸಹೋದರ ದಾಮೋದರ್ ಮಹ್ತೊ ಹೇಳಿದ್ಧಾರೆ. ಅವರನ್ನು ಪತ್ತೆಹಚ್ಚಲು ಮತ್ತು ಅವರು ಭಾರತಕ್ಕೆ ಸುರಕ್ಷಿತವಾಗಿ ಮರಳಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಿಕಂದರ್ ಅಲಿ, ಅಪಹರಣಕ್ಕೊಳಗಾದವರು ಕಲ್ಪತರು ಪವರ್ ಟ್ರಾನ್ಸ್ಮಿಷನ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಕ್ಷಣ ಕಾರ್ಮಿಕರನ್ನು ಬಿಡುಗಡೆ ಮಾಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇವೆ, ಈ ವಿಷಯದಲ್ಲಿ ಸಕಾಲಿಕ ಕ್ರಮ ತೆಗೆದುಕೊಂಡು ಸಂಕಷ್ಟದಲ್ಲಿರುವ ಕಾರ್ಮಿಕರನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ವಿನಂತಿಸುತ್ತಿದ್ದೇವೆ” ಎಂದು ಸಿಕಂದರ್ ಅಲಿ ಹೇಳಿದ್ದಾರೆ.
ಈ ವಿಷಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಗಮನಕ್ಕೆ ಬಂದಿದ್ದು, ಅವರು ವಿದೇಶಾಂಗ ಸಚಿವ ಎಸ್ ಜೈಶಕರ್ ಅವರ ಸಹಾಯವನ್ನು ಕೋರಿದ್ದಾರೆ.
ಗೌರವಾನ್ವಿತ ಕೇಂದ್ರ ವಿದೇಶಾಂಗ ಸಚಿವರೇ ನೈಜರ್‌ನಲ್ಲಿ ಅಪಹರಿಸಲ್ಪಟ್ಟಿರುವ ಜಾರ್ಖಂಡ್‌ನ ನಮ್ಮ ವಲಸೆ ಸಹೋದರರಿಗೆ ದಯವಿಟ್ಟು ಸಹಾಯ ಮಾಡುವಂತೆ ವಿನಂತಿಸುತ್ತೇನೆ ಎಂದು ಸಿಎಂ ಹೇಮಂತ್ ಸೊರೇನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.


