ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಉಂಟಾದ ಭಾರೀ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ.
ಡಿಸೆಂಬರ್ 3 ರಿಂದ 5 ರವರೆಗಿನ ವಿಮಾನಯಾನ ಕಾರ್ಯಾಚರಣೆಗಳ ಬಗ್ಗೆ ವಿವರವಾದ ವಿಚಾರಣೆಯ ನಂತರ ಡಿಜಿಸಿಎ ಈ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ 2,507 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿತ್ತು ಮತ್ತು 1,852 ವಿಮಾನಗಳ ಹಾರಾಟ ವಿಳಂಬವಾಗಿತ್ತು. ಪರಿಣಾಮ ಬರೋಬ್ಬರಿ 3 ಲಕ್ಷ ಪ್ರಯಾಣಿಕರು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಂಕಷ್ಟ ಅನುಭವಿಸಿದ್ದರು.
ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ವ್ಯತ್ಯಯದ ಕುರಿತು ತನಿಖೆಗೆ ಆದೇಶಿಸಿತ್ತು. ಅದರಂತೆ, ಡಿಜಿಸಿಎ ರಚಿಸಿದ ನಾಲ್ವರು ಸದಸ್ಯರ ಸಮಿತಿ ತನಿಖೆ ನಡೆಸಿತ್ತು.
ನಾಗರಿಕ ವಿಮಾನಯಾನ ಅವಶ್ಯಕತೆಗಳನ್ನು ಪಾಲಿಸದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಜಿಸಿಎ ಒಂದು ಬಾರಿ 1.80 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಇದರಲ್ಲಿ ಎಫ್‌ಡಿಟಿಎಲ್ ಮಾನದಂಡಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲತೆ, ಕಾರ್ಯಾಚರಣೆಯ ನಿಯಂತ್ರಣದ ತಪ್ಪಾದ ನಿಯೋಜನೆ ಮತ್ತು ಜವಾಬ್ದಾರಿಯುತ ನಿರ್ವಹಣೆಯಲ್ಲಿನ ನ್ಯೂನತೆಗಳು ಸೇರಿವೆ.
ಇದರ ಜೊತೆಗೆ, ಡಿಸೆಂಬರ್ 5, 2025 ರಿಂದ ಫೆಬ್ರವರಿ 10, 2026ರ ನಡುವೆ 68 ದಿನಗಳಲ್ಲಿ ನಿರಂತರ ನಿಯಮ ಉಲ್ಲಂಘನೆಗಾಗಿ ಇಂಡಿಗೋ ಸಂಸ್ಥೆಗೆ 20.40 ಕೋಟಿ ರೂ. ದಂಡ ವಿಧಿಸಲಾಗಿದೆ. ಅಂದರೆ, ದಿನಕ್ಕೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕಾರ್ಯಾಚರಣೆಗಳ ಅತಿಯಾದ ಸುಧಾರಣೆ, ಅಸಮರ್ಪಕ ನಿಯಂತ್ರಕ ಸಿದ್ಧತೆ ಮತ್ತು ಯೋಜನಾ ಸಾಫ್ಟ್‌ವೇರ್ ಮತ್ತು ನಿರ್ವಹಣಾ ಮೇಲ್ವಿಚಾರಣೆಯಲ್ಲಿನ ಕೊರತೆಗಳು ಅಡಚಣೆಗೆ ಪ್ರಾಥಮಿಕ ಕಾರಣಗಳಾಗಿ ವಿಚಾರಣಾ ಸಮಿತಿ ಗುರುತಿಸಿದೆ. ಇಂಡಿಗೋ ಸಾಕಷ್ಟು ಕಾರ್ಯಾಚರಣೆಯ ಬಫರ್‌ಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಮತ್ತು ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ಮಾನದಂಡಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ ಎಂದು ಸಮಿತಿ ಹೇಳಿದೆ.
ವರದಿಯ ಪ್ರಕಾರ, ಇಂಡಿಗೋ ಏರ್‌ಲೈನ್ಸ್ ಅಂತ್ಯಂತ ಕಠಿಣ ನೀತಿಯನ್ನು ಅಳವಡಿಸಿಕೊಂಡಿತ್ತು. ಅಂದರೆ ವಿಮಾನಗಳು ಮತ್ತು ಕ್ರೂ ಸಿಬ್ಬಂದಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವುದರ ಮೇಲೆ ಅತ್ಯಧಿಕ ಒತ್ತು ಕೊಟ್ಟಿತು. ಇದರ ಪರಿಣಾಮವಾಗಿ ವಿಮಾನಗಳು ಮತ್ತು ಕ್ರೂಗೆ ಸಣ್ಣ ತೊಂದರೆ ಬಂದಾಗ ಸರಿಪಡಿಸಲು ಬಹಳ ಕಡಿಮೆ ಅವಕಾಶ ಇತ್ತು.


